ಸುಮಾರು 1 ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದ ಮನೆಗೆ ನುಗ್ಗಿದ ನೀರು| ರಸ್ತೆ ಸಂಪರ್ಕ ಬಂದ್ ಆಗಿ ಸಂಚಾರ ಅಸ್ತವ್ಯಸ್ತ| ಮಳೆಯಿಂದಾಗಿ ಅವಳಿ ನಗರದ ರಸ್ತೆಗಳೆಲ್ಲಾ ತುಂಬಿ ಹರಿದವು| ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ನೀರು ಪಾಲಾದ ದವಸ -ಧಾನ್ಯ|
ಗದಗ(ಜು.12): ಗದಗ -ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥವಾಯಿತು. ಮಧ್ಯಾಹ್ನ 4ರ ಸುಮಾರಿಗೆ ಪ್ರಾರಂಭವಾದ ವರುಣನ ಆರ್ಭಟಕ್ಕೆ ಅವಳಿ ನಗರದ ಚರಂಡಿಗಳು ಸಂಪೂರ್ಣವಾಗಿ ತುಂಬಿ ಹರಿದಿದ್ದು, ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಯಿತು.
ಸುಮಾರು 1 ಗಂಟೆಗೂ ಅಧಿಕ ಕಾಲ ಮಳೆರಾಯನ ಆರ್ಭಟಕ್ಕೆ ನಗರದ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಯಿತು. ಇಲ್ಲಿನ ಜನತಾ ಕಾಲೋನಿಯ ಹಲವು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ -ಧಾನ್ಯ ನೀರು ಪಾಲಾಯಿತು. ಇದರಿಂದ ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾದರು. ಇನ್ನು ನಗರದ ಅಗ್ನಿಶಾಮಕ ದಳ ಸಿಬ್ಬಂದಿಯ ವಸತಿ ಗೃಹಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.
undefined
ಖರ್ಚಿಲ್ಲದೆ ಜಿಂಕೆ ಕಾಟ ತಪ್ಪಿಸಿಕೊಂಡ ರೈತ: ಕಾಡು ಪ್ರಾಣಿಗಳಿಗೆ ತೊಂದರೆಯಾಗದಂತೆ ಹೊಸ ಪ್ಲಾನ್..!
ರಸ್ತೆ ಸಂಪರ್ಕ ಕಡಿತ:
ಮಳೆಯಿಂದಾಗಿ ಅವಳಿ ನಗರದ ರಸ್ತೆಗಳೆಲ್ಲಾ ತುಂಬಿ ಹರಿದವು. ಪರಿಣಾಮ ನಗರದ ಎಸ್.ಎಂ. ಕೃಷ್ಣಾ ನಗರಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಇರುವ ರಾಜ ಕಾಲುವೆ ಸಂಪೂರ್ಣವಾಗಿ ತುಂಬಿ ರಸ್ತೆಗೆ ಹರಿಯಿತು. ಇದರಿಂದ ವಾಹನ ಸವಾರರು ಸಂಚರಿಸಲಾಗದೇ ತೊಂದರೆಗೊಳಗಾದರು. ನಂತರ ಮಳೆ ನಿಂತ ಸುಮಾರು 1 ಗಂಟೆ ನಂತರ ನೀರಿನ ಹರಿವು ಕಡಿಮೆಯಾಗಿ ರಸ್ತೆ ಸಂಚಾರ ಯಥಾಪ್ರಕಾರ ಪ್ರಾರಂಭವಾಯಿತು.
ಹೊಸ ಬಡಾವಣೆಗಳಲ್ಲಿ ತೀವ್ರ ಸಮಸ್ಯೆ:
ಗದಗ ನಗರದ ಪುಟ್ಟರಾಜ ನಗರ ಸೇರಿದಂತೆ ಹೊಸ ಬಡಾವಣೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ರಭಸದ ಮಳೆಗೆ ಮಳೆ ನೀರೆಲ್ಲಾ ರಸ್ತೆಗೆ ನುಗ್ಗಿದ್ದು ಸಾರ್ವಜನಿಕರು ತಮ್ಮ ಮನೆಗೆ ತಾವು ಹೋಗದಂತ ಸ್ಥಿತಿ ನಿರ್ಮಾಣವಾಯಿತು.