ನೇತ್ರಾವತಿಗೆ 45 ವರ್ಷಗಳ ದಾಖಲೆ ನೀರು| ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿವೆ ಕರಾವಳಿ ನದಿಗಳು| ಬಂಟ್ವಾಳದಲ್ಲಿ ನೂರಾರು ಮನೆಗಳು ಜಲಾವೃತ
ಮಂಗಳೂರು
ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಹಾಮಳೆಗೆ ನೇತ್ರಾವತಿ, ಕುಮಾರಧಾರ ಸೇರಿದಂತೆ ಎಲ್ಲಾ ನದಿಗಳು, ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು, ಅಲ್ಲಿ ಪ್ರವಾಹದ ಭೀತಿ ಎದುರಾಗಿದೆ.
undefined
1974ರ ಬಳಿಕ ಇದೇ ಮೊದಲ ಬಾರಿಗೆ ನೇತ್ರಾವತಿ ನದಿ ನೀರಿನ ಮಟ್ಟಶುಕ್ರವಾರ ರಾತ್ರಿ 11.7 ಮೀ.ಗೆ (ಅಪಾಯದ ಮಟ್ಟ8.5 ಮೀ.) ಏರಿಕೆಯಾಗಿ ಬಂಟ್ವಾಳ ಪೇಟೆಯ 200 ಮನೆ, ಅಂಗಡಿ ಮುಂಗಟ್ಟುಗಳು ಮುಳುಗಡೆಯಾಗಿದ್ದವು. ಬೆಳ್ತಂಗಡಿಯಲ್ಲೂ ನೂರಾರು ಎಕರೆ ತೋಟ, ತಗ್ಗುಪ್ರದೇಶಗಳು ಜಲಾವೃತವಾಗಿದ್ದವು. ಬ್ರಹ್ಮರಕೂಟ್ಲು ಬಳಿಯ ಬಂಟರ ಭವನ ಭಾಗಶಃ ಜಲಾವೃತವಾಗಿತ್ತು. ಪಾಣೆಮಂಗಳೂರು ಬಳಿ ಟೈಲ್ಸ್ ಫ್ಯಾಕ್ಟರಿಗೆ ನೀರು ನುಗ್ಗಿ ರಾತ್ರಿ ಆತಂಕದಲ್ಲಿ ಕಾಲ ಕಳೆದ 9 ಕಾರ್ಮಿಕರನ್ನು ರಕ್ಷಿಸಲಾಗಿದೆ.
ಉಪ್ಪಿನಂಗಡಿಯ ಮುಗೇರಡ್ಕ ದೇವಾಲಯ ಸಮೀಪ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗುಸೇತುವೆ ಕೊಚ್ಚಿಹೋಗಿದೆ. ತೊಕ್ಕೊಟ್ಟು ಸಮೀಪದ ಕಲ್ಲಾಪು ಗ್ರಾಮದಲ್ಲಿ ರಾತ್ರಿಯಿಡೀ ನೀರಿನಲ್ಲಿ ಸಿಲುಕಿ ಕಂಗಾಲಾಗಿದ್ದ 80ರ ಹರೆಯದ ವೃದ್ಧೆ ಮೊಂತೆರಾ ಅವರನ್ನು ರಕ್ಷಿಸಲಾಗಿದೆ. ಅಲ್ಲಿನ 40 ಮನೆಗಳಿಗೆ ನೀರು ನುಗ್ಗಿದ್ದು ತೊಂದರೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟಾರೆ 28 ಪರಿಹಾರ ಕೇಂದ್ರ ತೆರೆಯಲಾಗಿದೆ. ವಳಚ್ಚಿಲ್ ಕೇಂದ್ರ ಜುಮ್ಮಾ ಮಸೀದಿಯ ಸಹಾಯಕ ಮುಅದ್ದಿನ್ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು, ಅಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಸಕಲೇಶಪುರದಿಂದ ಸುಬ್ರಹ್ಮಣ್ಯ ನಡುವೆ ಸಾಮೂಹಿಕ ಭೂಕುಸಿತವಾಗಿದ್ದರಿಂದ ಈ ಮಾರ್ಗದಲ್ಲಿ ಆ.22ರವರೆಗೆ ರೈಲು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪ್ರತಿಕೂಲ ಹವಾಮಾನದಿಂದ ವಿಮಾನ ಸಂಚಾರವೂ ಅಸ್ತವ್ಯಸ್ತವಾಗಿದೆ. ಈಗ ಕರಾವಳಿಯನ್ನು ಬೆಂಗಳೂರು ಮತ್ತು ಬಯಲು ಸೀಮೆಗೆ ಸಂಪರ್ಕಿಸಲು ಉಳಿದಿರುವ ಏಕೈಕ ಮಾರ್ಗ ಸಂಪಾಜೆ ಘಾಟಿ.