ರೈತನೋರ್ವ ಬರೋಬ್ಬರಿ 10 ಲಕ್ಷ ಮೌಲ್ಯದ ಈರುಳ್ಳಿಯನ್ನು ತಿಪ್ಪಿಗೆ ಎಸೆದಿದ್ದಾನೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ..
ಕೊಪ್ಪಳ (ಅ.16): ಇನ್ನೇನು ಮಾರುಕಟ್ಟೆಗೆ ಒಯ್ಯಬೇಕಾದ ಈರುಳ್ಳಿ ಅತಿಯಾದ ಮಳೆಯಿಂದ ಕೊಳೆತು ಹೋಗಿದ್ದು, ಈಗಿನ ಮಾರುಕಟ್ಟೆದರಕ್ಕೆ ಬರೋಬ್ಬರಿ ಹತ್ತು ಲಕ್ಷ ರು. ಮೌಲ್ಯದ್ದಾಗುತ್ತಿದ್ದ ಈರುಳ್ಳಿಯನ್ನು ತಿಪ್ಪೆಗೆಸೆಯಲಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ರೈತ ರಾಮಣ್ಣ ರಾಮರಡ್ಡಿ ಅವರು ತಮ್ಮ ಮೂರೂವರೆ ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಮಾರುಕಟ್ಟೆಗೆ ತಲುಪುವ ಮುನ್ನ ಕೊಳೆತು ಹೋಗಿದ್ದರಿಂದ ಗುರುವಾರ ತಿಪ್ಪೆಗೆ ಸುರಿದರು.
'ನೆರೆ ಹಾನಿಗೆ ತಕ್ಷಣ ವಿಶೇಷ ಅನುದಾನ' ...
ಟ್ರ್ಯಾಕ್ಟರ್‌ನಲ್ಲಿ ಕೊಳೆತ ಈರುಳ್ಳಿಯನ್ನು ತೆಗೆದುಕೊಂಡು ಹೋಗಿ ತಿಪ್ಪೆಗೆ ಹಾಕುತ್ತಿರುವ ದೃಶ್ಯ ಎಂಥವರ ಕಣ್ಣಲ್ಲಿಯೂ ನೀರು ಬರುವಂತಿತ್ತು. ಸುಮಾರು .90 ಸಾವಿರ ವೆಚ್ಚದಲ್ಲಿ ಬೆಳೆದಿದ್ದ ಬೆಳೆ ಚೆನ್ನಾಗಿಯೇ ಬಂದಿತ್ತು. ಆದರೆ, ಈ ವರ್ಷ ಅತಿಯಾದ ಕೊಳೆರೋಗವೂ ಇದ್ದಿದ್ದರಿಂದ ಅದನ್ನು ಕಾಪಾಡಿದ್ದೇ ಸಾಹಸ. ಇವತ್ತಿನ ಮಾರುಕಟ್ಟೆಯ ದರಕ್ಕೆ ಬರೋಬ್ಬರಿ 10 ಲಕ್ಷ ರು. ಈರುಳ್ಳಿಯಾಗುತ್ತಿತ್ತು. ದುರಾದೃಷ್ಟವಶಾತ್ ಎಡೆಬಿಡದೆ ಸುರಿದ ಈರುಳ್ಳಿ ರಾಶಿ ಮಾಡುವ ಮುನ್ನವೇ ಹೊಲದಲ್ಲಿಯೇ ಕೊಳೆತು ಹೋಗಿದೆ ಎಂದು ರೈತ ರಾಮಣ್ಣ ರಾಮರಡ್ಡಿ ಬೇಸರ ವ್ಯಕ್ತಪಡಿಸಿದರು.