ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಅಬ್ಬರದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನದಿಗಳು ಉಕ್ಕೇರುತ್ತಿವೆ
ಬೆಂಗಳೂರು (ಅ.16): ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಂಟಾಗಿರುವ ಪ್ರವಾಹದಿಂದಾಗಿ ಈ ಭಾಗದ ನದಿಗಳು ರೌದ್ರಾವತಾರದಿಂದ ಅಬ್ಬರಿಸುತ್ತಿವೆ.
ಕಲಬುರಗಿಯ ಸಪ್ತ ನದಿಗಳಾದ ಭೀಮಾ, ಅಮರ್ಜಾ, ಗಂಡೋರಿನಾಲಾ, ಬೆಣ್ಣೆತೊರೆ, ಮುಲ್ಲಾಮಾರಿ, ಕಾಗಿಣಾ ಹಾಗೂ ಕಮಲಾವತಿ ನದಿಗಳು ಪ್ರವಾಹದಿಂದ ಭೋರ್ಗರೆಯುತ್ತಿದ್ದು, 3 ದಿನಗಳಿಂದ ಜಲಾಘಾತ ಎದುರಾಗಿದೆ. ಇನ್ನು ಯಾದಗಿರಿಯಲ್ಲಿ ಭೀಮಾ, ಕೃಷ್ಣಾ ನದಿಗಳಲ್ಲಿ ಅಪಾಯ ಮಟ್ಟಮೀರಿ ನೀರು ಹರಿಯುತ್ತಿದ್ದರೆ, ಮಹಾರಾಷ್ಟ್ರದ ಡ್ಯಾಂಗಳಿಂದ ಬಿಡುಗಡೆ ಮಾಡಿದ ನೀರಿನಿಂದಾಗಿ ಬೆಳಗಾವಿಯ ಘಟಪ್ರಭ ನದಿ ಉಕ್ಕಿ ಹರಿಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ ಸ್ವರೂಪ ಪಡೆದುಕೊಂಡಿದೆ. ನದಿ ಪಾತ್ರದ ಗ್ರಾಮಸ್ಥರು ನಲುಗಿ ಹೋಗಿದ್ದಾರೆ.
4 ವರ್ಷಗಳ ನಂತರ ಕಾರಂಜಾ ಭರ್ತಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್‌ನ ಜಲ ಜೀವನಾಡಿಯಾಗಿರುವ 7.6 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯ ನಾಲ್ಕು ವರ್ಷಗಳ ನಂತರ ಭರ್ತಿಯಾಗಿದ್ದು, 10 ಸಾವಿರ ಕ್ಯುಸೆಕ್ ಒಳಹರಿವು ಬರುತ್ತಿದ್ದು ಅಷ್ಟೇ ನೀರನ್ನು ಹೊರ ಬಿಡಲಾಗುತ್ತಿದೆ.
ಬಿಸಿಲು ನಾಡು ಕಲಬುರಗಿಯ ಅಫಜಲ್ಪುರದ ಸೊನ್ನ ಜಲಾಶಯದಿಂದ 5.11 ಲಕ್ಷ ಕ್ಯುಸೆಕ್ ನೀರನ್ನು ಭೀಮಾ ನದಿಗೆ ಹರಿಬಿಡಲಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಯಾದಗಿರಿಯ ನಾರಾಯಣಪೂರ ಜಲಾಶಯದಿಂದ 1.82 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.
ವಿಜಯಪುರದ ಹಿಪ್ಪರಗಿ ಜಲಾಶಯಕ್ಕೆ 1 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಬ್ರಿಡ್ಜ್‌ನ ಎಲ್ಲ 10 ಗೇಟ್‌ಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಆಲಮಟ್ಟಿಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಗುರುವಾರ 98,270 ಕ್ಯುಸೆಕ್‌ಗೆ ಒಳಹರಿವು ಏರಿಕೆಯಾಗಿದೆ. ಆದರೆ, ಎಲ್ಲಿಯೂ ಪ್ರವಾಹದ ಪರಿಸ್ಥಿತಿ ಇಲ್ಲ.
2175 ಗರಿಷ್ಠ ಅಡಿಯ ಬೆಳಗಾವಿಯ ಘಟಪ್ರಭಾ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಜತೆಗೆ 2842 ಕ್ಯುಸೆಕ್ ಒಳ ಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಮಲಪ್ರಭಾ ನದಿಯು ಅಷ್ಟೊಂದು ಅಪಾಯ ತಂದೊಡ್ಡಿಲ್ಲ. ನವಿಲುತೀರ್ಥ ಅಣೆಕಟ್ಟಿನ 2079.50 ಅಡಿ ಪೈಕಿ 2079 ತುಂಬಿದ್ದು, 3168 ಕ್ಯುಸೆಕ್ ಒಳಹರಿವಿದ್ದು, 5164 ಕ್ಯುಸೆಕ್ ಹೊರ ಹರಿವಿದೆ.