ಕನ್ನಡ ರಾಜ್ಯೋತ್ಸವ ವೇಳೆ ಭಗತ್ ಸಿಂಗ್ ಪಾತ್ರ ಪ್ರದರ್ಶನಕ್ಕೆ ಸಿದ್ದತೆ ವೇಳೆ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಅ.30): ಆತ ತಾನು ವ್ಯಾಸಾಂಗ ಮಾಡ್ತಿದ್ದ ಶಾಲೆಯಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿ. ಐತಿಹಾಸಿಕ ಹಿನ್ನಲೆಯ ಹೋರಾಟಗಾರರು ಹಾಗೂ ರಾಜ ಮಹಾರಾಜರ ಪಾತ್ರ ಅಭಿನಯಿಸೋದು ಅಂದ್ರೆ ಆತನಿಗೆ ಅಚ್ಚು ಮೆಚ್ಚು. ಹೀಗಾಗಿ ನಾಳೆ ಬರುವ ಕನ್ನಡ ರಾಜ್ಯೋತ್ಸವದಂದು ಭಗತ್ ಸಿಂಗ್ ಪಾತ್ರ ಮಾಡಲು ನಡೆಸಿದ್ದ ರಿಹರ್ಸಲ್ ಬಾಲಕನ ಜೀವವನ್ನೇ ಬಲಿ ಪಡೆದಿದ್ದು ಇಡೀ ಕುಟುಂಬದ ಆಕ್ರಂದನಕ್ಕೆ ಕಾರಣವಾಗಿದೆ. ಬೆಸ್ಕಾಂ ಕಚೇರಿ ಬಳಿ ಟೀ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸ್ತಿದ್ದ ನಾಗರಾಜು ಎನ್ನುವವರ ಒಬ್ಬನೇ ಮಗ ಈ ಸಂಜಯ್ ಗೌಡ. ಉತ್ತಮ ಪ್ರತಿಭಾವಂತ ವಿದ್ಯಾರ್ಥಿ, ನಗರದ ಖಾಸಗಿ ಶಾಲೆಯಲ್ಲಿ ಓದುತಿದ್ದ ಈ ಬಾಲಕ ಅಭಿನಯವನ್ನು ಕರಗತ ಮಾಡಿಕೊಂಡಿದ್ದನು. ಸಂಗೊಳ್ಳಿ ರಾಯಣ್ಣ, ಸುಭಾಶ್ ಚಂದ್ರ ಭೋಸ್, ಸೇರಿದಂತೆ ಅನೇಕ ಸ್ವತಂತ್ರ ಹೋರಾಟಗಾರ ಪಾತ್ರವನ್ನು ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದನು. ಹೀಗಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಭಗತ್ ಸಿಂಗ್ ಪಾತ್ರ ಮಾಡಲು ಸಿದ್ಧತೆ ನಡೆಸಿದ್ದೂ, ಮನೆಯಲ್ಲಿ ಯಾರು ಇಲ್ಲದ ವೇಳೆ ಮೊಬೈಲ್ ನಲ್ಲಿ ಭಗತ್ ಸಿಂಗ್ ಅಭಿನಯವನ್ನು ಗಮನಿಸುತ್ತಾ, ರಿಹರ್ಸಲ್ ಮಾಡ್ತಿದ್ದನು. ಫ್ಯಾನಿಗೆ ನೂಲಿನ ಹಗ್ಗ ಬಿಗಿದು ಮಂಚದ ಮೇಲೆ ನಿಂತು ಭಗತ್ ಸಿಂಗ್ ಗೆ ನೇಣು ಹಾಕಿದಾಗ ಸಾವನ್ನಪ್ಪುವ ಅಭಿನಯವನ್ನು ಪ್ರಾಕ್ಟೀಸ್ ಮಾಡ್ತಿದ್ದನಂತೆ. ಆಗ ಕುರ್ಚಿ ಜಾರಿದ್ದೂ, ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಬಾಲಕ ಜಿಗಿದ ಹಿನ್ನಲೆಯಲ್ಲಿ ಉಸಿರು ಗಟ್ಟಿರುವ ಪ್ರತಿಭಾವಂತ ಬಾಲಕ ಕೊನೆಯುಸಿರೆಳೆದಿರೋದು ಇಡೀ ಜಿಲ್ಲೆಯಲ್ಲಿ ಇಂದು ನಡೆದ ಹೃದಯ ವಿದ್ರಾವಕ ಘಟನೆ ಇದಾಗಿದೆ.
undefined
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅಗತ್ಯ ತಯಾರಿ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಇನ್ನು ಪ್ರತಿದಿನ ಸಂಜೆ ತನ್ನ ತಾಯಿಯನ್ನು ಹೋಟೆಲ್ ನಿಂದ ಕರೆ ತರ್ತಿದ್ದ ಬಾಲಕ ಎಂದಿನಂತೆ ಬಾರದಿದ್ದಾಗ, ಮನೆಗೆ ಬಂದು ನೋಡಿದ ತಾಯಿ ಮಗನ ಸ್ಥಿತಿ ಕಂಡು ದಿಗ್ಭ್ರಮೆಗೊಂಡಿದ್ದಾರೆ. ಅಲ್ಲದೇ, ಈ ಜೀವನದಲ್ಲಿ ಹಣ, ಐಶ್ವರ್ಯ ಮುಖ್ಯವಲ್ಲ, ಹೆತ್ತ ಮಕ್ಕಳ ಬದುಕಿನ ಬಗ್ಗೆ ಕಾಳಜಿ ವಹಿಸಿ, ಎಂದೂ ಸಹ ಒಬ್ಬೊಬ್ರನ್ನೇ ಮನೆಯಲ್ಲಿ ಬಿಡಬೇಡಿ ಎಂದು ಬಾಲಕನ ತಾಯಿಯ ಗೋಳಾಡುವ ದೃಶ್ಯ ಎಲ್ಲರ ಮನ ಕಲಕುವಂತಿದೆ. ನಿತ್ಯ ಅಮ್ಮ ನಿನ್ನ ಕಾಲು ಹೊತ್ತುತ್ತೀನಿ, ನೀನು ಕೆಲಸ ಮಾಡಿ ಸುಸ್ತಾಗಿರ್ತೀಯ ಎಂದು ಕೇಳ್ತಿದ್ದವನು ಇಂದು ನಮ್ಮನ್ನೆಲ್ಲ ಬಿಟ್ಟು ಹೋಗಿರೋದನ್ನ ಹೇಗೆ ನಂಬಲಿ ಎಂದು ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಸರ್ಕಾರಿ ಶಾಲೆಗಳಲ್ಲಿನ್ನು ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್ ಇರಲ್ಲ
ಒಟ್ಟಾರೆ ಪ್ರತಿಭಾವಂತ ಹವ್ಯಾಸವೇ ಸಂಜಯ್ ಗೌಡನ ಬದುಕಿಗೆ ಇತಿಶ್ರೀ ಹಾಡಿರೋದು ಶೋಚನೀಯ ಸಂಗತಿ. ಹೀಗಾಗಿ ಮನೆಗಳಲ್ಲಿ ಪ್ರಾಕ್ಟೀಸ್ ಮಾಡುವ ವೇಳೆ ಮಕ್ಕಳ ಮೇಲೆ ಪೋಷಕರು ಎಚ್ಚರ ವಹಿಸಲಿ. ಯಾವ ಪೋಷಕರೂ ಕೂಡ ತಮ್ಮ ಮಕ್ಕಳನ್ನು ಒಬ್ಬಂಟಿಯಾಗಿ ಬೆಳಸದೇ, ಅವರೊಂದಿಗೆ ಜೊತೆಯಾಗಿ ಜೀವನ ನಡೆಸಿ ಎಂಬುದು ನಮ್ಮೆಲ್ಲರ ಕಳಕಳಿ.