ವಿಘ್ನೇಶ್ ಎಂ.. ಭೂತನಕಾಡು
ಮಡಿಕೇರಿ (ಅ.30) : ಕೊಡಗು ಜಿಲ್ಲೆಯಲ್ಲಿ ಅವಧಿಗೂ ಮುಂಚೆಯೇ ಅರೆಬಿಕಾ ಕಾಫಿ ಹಣ್ಣಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಅರೆಬಿಕಾ ಕಾಫಿ ಕೊಯ್ಲು ಆರಂಭಿಸಲಾಗಿದೆ. ಅವಧಿಗೂ ಮುನ್ನವೇ ಹಣ್ಣಾಗುತ್ತಿರುವುದರಿಂದ ಕೊಡಗಿನ ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಕಾಫಿ ಕೊಯ್ಲು ಆರಂಭವಾಗುತ್ತದೆ. ಆದರೆ ಜಿಲ್ಲೆಯಲ್ಲಿ ಆಗಾಗ್ಗೆ ಸುರಿದ ಮಳೆಯ ಪ್ರಭಾವದಿಂದಾಗಿ ಕಾಫಿ ಹಣ್ಣಾಗುತ್ತಿದೆ. ಅಲ್ಲದೆ ಅಕ್ಟೋಬರ್ ತಿಂಗಳ ಆರಂಭದಲ್ಲಿ ಸುರಿದ ಮಳೆಯಿಂದಾಗಿ ಕಾಫಿ ಹಣ್ಣಾಗಿದ್ದರೂ ಕೂಡ ಕೊಯ್ಲು ಮಾಡಲಾಗದೆ ಕೆಲವು ಕಡೆ ಫಸಲು ಸಣ್ಣ ಪ್ರಮಾಣದಲ್ಲಿ ನೆಲಕಚ್ಚಿದೆ.
undefined
\ಹವಾಮಾನ ವೈಪರೀತ್ಯದಿಂದ ಅವಧಿಗೆ ಮುನ್ನ ಹಣ್ಣಾದ ಕಾಫಿ : ರೈತ ಕಂಗಾಲು
ವೆಚ್ಚ ಹೆಚ್ಚಾಗಲಿದೆ: ಕಾಫಿ ಫಸಲು ಸಂಪೂರ್ಣವಾಗಿ ಹಣ್ಣಾದ ನಂತರ ಒಂದೇ ಬಾರಿ ಕೊಯ್ಲು ಮಾಡಿದರೆ ಬೆಳೆಗಾರರಿಗೆ ಸುಲಭವಾಗುತ್ತದೆ. ಆದರೆ ಇದೀಗ ಗಿಡದಲ್ಲಿ ಅರ್ಧದಷ್ಟುಫಸಲು ಹಣ್ಣಾಗಿದ್ದು, ಒಂದೇ ಗಿಡದಲ್ಲಿ ಎರಡು- ಮೂರು ಬಾರಿ ಕಾಫಿ ಕೊಯ್ಲು ಮಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಬೆಳೆಗಾರರಿಗೆ ಕೊಯ್ಲಿಗೆ ಹೆಚ್ಚಿನ ವೆಚ್ಚವಾಗಲಿದೆ.
ಇತ್ತೀಚೀನ ವರ್ಷಗಳಲ್ಲಿ ಮಳೆಯಿಂದ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ವಾಣಿಜ್ಯ ಬೆಳೆಯಾಗಿರುವ ಕಾಫಿಗೆ ಸಮಸ್ಯೆ ಉಂಟಾಗಿದ್ದು, ಪ್ರತಿ ವರ್ಷ ಕೂಡ ರೈತರಿಗೆ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತಿದೆ. ಹಣ್ಣಾಗಿರುವ ಕಾಫಿಯನ್ನು ಗಿಡದಲ್ಲಿ ಹಾಗೇ ಬಿಟ್ಟರೆ ಬಂದಿರುವ ಫಸಲು ನೆಲಕಚ್ಚುವ ಭೀತಿಯಿಂದಾಗಿ ಖರ್ಚು ಹೆಚ್ಚಾದರೂ ಕಾರ್ಮಿಕರಿಂದ ಫಸಲನ್ನು ಕೊಯ್ಲು ಮಾಡಿಸಿ ಒಣಗಿಸುವ ಪ್ರಕ್ರಿಯೆಯಲ್ಲಿ ಕೆಲವು ಬೆಳೆಗಾರರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಸೋಮವಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅರೆಬಿಕಾ ಕಾಫಿ ಬೆಳೆಯಲಾಗುತ್ತದೆ. ಇದೀಗ ಜಿಲ್ಲೆಯ ಸೋಮವಾರಪೇಟೆ, ಸುಂಟಿಕೊಪ್ಪ, ಚೆಟ್ಟಳ್ಳಿ ಮಾದಾಪುರ, ಸಿದ್ದಾಪುರ ಸೇರಿ ಕೆಲವು ಕಡೆಗಳಲ್ಲಿ ಕಾಫಿ ಹಣ್ಣಾಗಿದ್ದು, ಕೊಯ್ಲು ಕೆಲಸ ಶುರುವಾಗಿದೆ.
ಅರೆಬಿಕಾ ಕಾಫಿಗೆ ಕಾಯಿ ಕೊರಕ ಕಾಟ: ನಿಯಂತ್ರಣ ಮಾಡೋದು ಹೇಗೆ..?
ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ಬೆಲೆ ಕೊರತೆ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಳೆಗಾರರಿಗೆ ಈಗ ಅವಧಿಗೆ ಮುಂಚೆಯೇ ಕಾಫಿ ಹಣ್ಣಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮೋಡ ಕವಿದ ವಾತಾವರಣ ಕೂಡ ಇದ್ದು, ಮತ್ತೆ ಮಳೆಯಾದರೆ ಹಣ್ಣಾದ ಕಾಫಿ ನೆಲಕಚ್ಚುವ ಭೀತಿಯೂ ಜಿಲ್ಲೆಯ ಬೆಳೆಗಾರರನ್ನು ಕಾಡುತ್ತಿದೆ. ಇನ್ನೊಂದೆಡೆ ಮಳೆ ಸುರಿದಲ್ಲಿ ಕೊಯ್ಲು ಮಾಡಿದ ಕಾಫಿ ಒಣಗಿಸಲು ಸಮಸ್ಯೆಯೂ ಎದುರಾಗಲಿದ್ದು, ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ನಮ್ಮ ತೋಟದಲ್ಲಿ ಈಗಾಗಲೇ ಕಾಫಿ ಹಣ್ಣಾಗಿದ್ದು, ಕೊಯ್ಲು ಆರಂಭಿಸಲಾಗಿದೆ. ತೋಟದಲ್ಲಿ ಅರ್ಧದಷ್ಟುಕಾಫಿ ಹಣ್ಣಾಗಿದೆ. ಇದರಿಂದ ಎರಡೆರಡು ಬಾರಿ ಕಾಫಿ ಫಸಲು ಕೊಯ್ಲು ಮಾಡಬೇಕಾಗಿದೆ
- ನೂತನ್ ಬೆಳೆಗಾರರು ಸಿದ್ದಾಪುರ
ಅಕ್ಟೋಬರ್ ತಿಂಗಳ ಆರಂಭದಲ್ಲಿ ಬಂದ ಮಳೆಯಿಂದ ಕಾಫಿ ಕೊಯ್ಲು ಮಾಡಲು ಸಮಸ್ಯೆಯಾಗಿದೆ. ಕೆಲವು ಕಡೆಗಳಲ್ಲಿ ಅವಧಿಗೆ ಮುಂಚೆ ಕಾಫಿ ಹಣ್ಣಾಗಿದೆ. ಇದರಿಂದ ಕೊಯ್ಲಿನ ಕೆಲಸ ಜಾಾಸ್ತಿಯಾಗಿದೆ. ಸದ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಮಳೆ ಇಲ್ಲ. ಇದರಿಂದ ಹಣ್ಣಾದ ಕಾಫಿ ಕೊಯ್ಲು ಮಾಡಬಹುದು
- ಹರೀಶ್ ಹವಾಮಾನ ತಜ್ಞ, ಕೃಷಿ ಘಟಕ. ಕೆವಿಕೆ ಗೋಣಿಕೊಪ್ಪ