ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ವರದಿ: ರವಿಕುಮಾರ್ ವಿ, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ (ಆ.19): ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು. ತಾಲೂಕಿನ ಅರೂರು ಸಮೀಪ ನೂತನವಾಗಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಪ್ರಜೆಗೂ ಉತ್ತಮ, ಉಚಿತ ಆರೋಗ್ಯ ಸೇವೆ ಕಲ್ಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಸಂಕ್ರಾಂತಿಗೆ ಕಾಮಗಾರಿ ಪೂರ್ಣ: 2023ರ ಮಕರ ಸಂಕ್ರಾಂತಿ ವೇಳೆಗೆ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ಮಾರ್ಚ್ ಒಳಗೆ ಕಾಲೇಜು ಉದ್ಘಾಟನೆ ನಡೆಯಲಿದೆ ಎಂದರು. ಹಾವೇರಿ, ಯಾದಗಿರಿ, ಚಿಕ್ಕಮಗಳೂರಿನಲ್ಲಿಯೂ ವೈದ್ಯಕೀಯ ಕಾಲೇಜುಗಳ ಉದ್ಘಾಟನೆಗೆ ಕಾರ್ಯಕ್ರಮ ನಿಗದಿಪಡಿಸಲಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಈಗಾಗಲೇ ಬೆಂಗಳೂರಿನ ಶಿವಾಜಿನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜನ್ನು ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉದ್ಘಾಟಿಸಲಾಗಿದೆ. ಶೀಘ್ರದಲ್ಲಿಯೇ ಉಳಿದ ಕಾಲೇಜುಗಳ ಉದ್ಘಾಟನೆಯನ್ನು ನೆರವೇರಿಸಲಾಗುವುದು ಎಂದರು.
ಜನಪರ ಯೋಜನೆ ಮೆಚ್ಚಿ ಬಿಜೆಪಿ ಸೇರಿದ 'ಕೈ' ನಾಯಕಿ: ಕಾಂಗ್ರೆಸ್‌ಗೆ ಮುಖಭಂಗ
ಮಳೆಯಿಂದ ಕಾಮಗಾರಿ ವಿಳಂಬ: ಕಳೆದ ಎರಡು ತಿಂಗಳು ಮಳೆ ಹೆಚ್ಚಾಗಿದ್ದ ಕಾರಣ ಕಾಮಗಾರಿ ಮಂದಗತಿಯಲ್ಲಿ ಸಾಗಿತ್ತು. ಈಗ ಕಾಮಗಾರಿಯ ವೇಗ ಹೆಚ್ಚಿಸಲು ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ. ಕಾಮಗಾರಿ ವೇಗ ಹೆಚ್ಚಿಸುವ ಕುರಿತು ಈಗಾಗಲೇ ಒಂದು ಸಭೆಯನ್ನೂ ನಡೆಸಲಾಗಿದೆ. ಇಂದು ಕಟ್ಟಡ ಕಾಮಗಾರಿಯ ಪರಿಶೀಲನೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು. ಕಾಮಗಾರಿಯ ಗುಣಮಟ್ಟ ಉತ್ತಮವಾಗಿದೆ. ಕಾಮಗಾರಿಯ ವೇಗ ಹೆಚ್ಚಿಸಬೇಕಿದೆ. ನಿರ್ಮಾಣ ಪೂರ್ಣಗೊಂಡು ಕಾಲೇಜು ಆರಂಭವಾದಲ್ಲಿ ಜಿಲ್ಲೆಯ ಎಲ್ಲರಿಗೂ ಇದು ಆರೋಗ್ಯ ಧಾಮವಾಗಲಿದೆ. ಎಲ್ಲರಿಗೂ ಉತ್ಕೃಷ್ಟ ಮಟ್ಟದ ಆರೋಗ್ಯ ಸೇವೆ ಉಚಿತವಾಗಿ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು: ರಾಜ್ಯದ ದಾವಣಗೆರೆ, ವಿಜಯಪುರ, ಉಡುಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಹೊಸದಾಗಿ ವೈದ್ಯಕೀಯ ಕಾಲೇಜು ಕಟ್ಟಡಗಳನ್ನು ನಿರ್ಮಿಸಲಾಗುವುದು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ರಾಮನಗರ ಕಾಲೇಜು ನಿರ್ಮಾಣಕ್ಕೆ ಅನುದಾನ ನೀಡಲಿದೆ. ಚಿತ್ರದುರ್ಗ ಜಿಲ್ಲೆಗೆ ರಾಜ್ಯ ಸರ್ಕಾರ ಮತ್ತು ಡಿಎಂಎಫ್ ಟಿ ಹಣ ಬಳಕೆ ಮಾಡಿ ಕಾಲೇಜು ಕಟ್ಟಡ ನಿರ್ಮಿಸಲಾಗುವುದು ಎಂದು ಸಚಿವರು ವಿವರಿಸಿದರು. ಇವಲ್ಲದೆ ರಾಜ್ಯದ ಇತರೆ 9 ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲೂ ಕೇಂದ್ರದ ನೀತಿ ಆಯೋಗದ ಮಾರ್ಗಸೂಚಿಯಂತೆ ಅನುಷ್ಠಾನ ಮಾಡಲಾಗುವುದು. ಎಂದು ಹೇಳಿದರು.
ಪಕ್ಷ ಬೆಳವಣಿಗೆಗೆ ಸಹಕಾರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,ಬಿಎಸ್ ವೈ ನಾಯಕತ್ವದಲ್ಲಿ ನಂಬಿಕೆ ಇಟ್ಟು ನಾವು ಪಕ್ಷಕ್ಕೆ ಬಂದಿದ್ದು, ಅವರಿಗೆ ಅತ್ಯುನ್ನತ ಹುದ್ದೆ ನೀಡಿರುವುದು ಖುಷಿ ತಂದಿದೆ ಎಂದರು. ಪ್ರಧಾನಿ, ಗೃಹಸಚಿವರೊಂದಿಗೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲದೆ, ಬಿ.ಎಲ್. ಸಂತೋಷ್ ಜೀ ಅವರಿಗೂ ಸ್ಥಾನ ಲಭ್ಯವಾಗುವ ಮೂಲಕ ರಾಜ್ಯದ ಇಬ್ಬರಿಗೆ ಅವಕಾಶ ಸಿಕ್ಕಿರುವುದು ಅಭಿನಂದನೀಯವಾಗಿದೆ. ಪ್ರಧಾನಿ ಮೋದಿಯವರು ಇತ್ತೀಚಿಗೆ ಘೋಷಿಸಿದಂತೆ ಮಿಷನ್ ದಕ್ಷಿಣ್ ಸಮರ್ಪಕ ಅನುಷ್ಠಾನಕ್ಕೆ ಸಾಕ್ಷಿಯಾಗಿದೆ. ತಮಿಳುನಾಡು, ತೆಲಂಗಾಣ ರಾಜ್ಯಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಇತರೆ ರಾಜ್ಯಗಳಲ್ಲಿಯೂ ಬಿಜೆಪಿ ವಿಸ್ತರಣೆಗೆ ಅನುಕೂಲವಾಗಲಿದೆ ಎಂದರು.
ಕಾಂಗ್ರೆಸ್ ಲಿಂಗಾಯಿತರನ್ನು ಸಿಎಂ ಮಾಡಲಿ: ಬಿಎಸ್‌ವೈ ಅವರ ಕುರಿತು ಎಂ.ಬಿ. ಪಾಟೀಲ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ರಾಹುಲ್ ಗಾಂಧಿ ಅವರು ಈ ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಲಿಂಗಾಯಿತರಿಗೇಕೆ ನೀಡಬಾರದು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಲ್ಲಿ ಹಲವು ವರ್ಷಗಳಿಂದ ಲಿಂಗಾಯಿತ ಸಮುದಾಯದ ಅಭ್ಯರ್ಥಿ ಮುಖ್ಯಮಂತ್ರಿಯಾಗಿಲ್ಲ. ಹಾಗಾಗಿ ಎಂ.ಬಿ. ಪಾಟೀಲ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.
ಸ್ವಂತ ಮಕ್ಕಳಿಂದಲೇ ನರಕಯಾತನೆ ಅನುಭವಿಸಿದ ವೃದ್ಧರಿಗೆ ಮಗನಾಗಿ ನೆರವಿಗೆ ನಿಂತ ಅಧಿಕಾರಿ!
ಬಿಜೆಪಿಯಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದು ಬಿಜೆಪಿ ಆಂತರಿಕ ವಿಚಾರ, ಅದೇ ರೀತಿಯಲ್ಲಿ ಕಾಂಗ್ರೆಸ್ ನಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಹಾಗಾಗಿ ಈ ವಿಚಾರದ ಬಗ್ಗೆ ಯಾರೂ ಮಾತನಾಡಬೇಕಾದ ಅಗತ್ಯವಿಲ್ಲ. ಬಿಎಸ್ ವೈ ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಪಕ್ಷದ ವರಿಷ್ಠರೂ ಸೇರಿದಂತೆ ಪ್ರತಿಯೊಬ್ಬರಿಗೂ ಅರಿವಿದೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಲಾಗುವುದು. ಅವರ ಗೌರವಕ್ಕೆ, ಸ್ಥಾನಮಾನಕ್ಕೆ ಕುಂದು ಬಾರದಂತೆ ನಡೆದುಕೊಳ್ಳಲಾಗುವುದು ಎಂದರು.