ತಾಲೂಕು ಆಡಳಿತದಿಂದ ಬಡವರಿಗಾಗಿ ಹೊಸ ಸೌಲಭ್ಯ

By Web DeskFirst Published Jun 27, 2019, 8:36 AM IST
Highlights

ತಾಲೂಕು ಆಡಳಿತವು ಬಡವರಿಗಾಗಿ ಅತ್ಯುಪಯುಕ್ತ ಯೋಜನೆಯೊಂದನ್ನು ಆರಂಭ ಮಾಡಿದೆ. ಕೂಲಿ ಕಾರ್ಮಿಕರು ಈ ಯೋಜನೆಯಿಂದಾಗಿ ಹೆಚ್ಚಿನ  ಉಪಯೋಗ ಪಡೆದುಕೊಳ್ಳಬಹುದಾಗಿದೆ. 

ಹುಬ್ಬಳ್ಳಿ [ಜೂ.27] :  ಇಲ್ಲಿನ ‘ಉದ್ಯೋಗ ಖಾತ್ರಿ’ ಕಾರ್ಮಿಕರು ತಮ್ಮ ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗೆ ಹೋಗುವುದಿಲ್ಲ, ಬದಲಾಗಿ ಆಸ್ಪತ್ರೆಯೇ ಇವರ ಬಳಿ ಬಂದು ಅಗತ್ಯ ಆರೋಗ್ಯ ಸೇವೆ ನೀಡುತ್ತಿದೆ. ಕೂಲಿ ಮಾಡುತ್ತಲೇ ಚಿಕಿತ್ಸೆಯನ್ನೂ ಪಡೆಯುತ್ತಾರೆ. ತಪಾಸಣೆ, ಚಿಕಿತ್ಸೆ, ಔಷಧಿ, ಸ್ಯಾನಿಟರಿ ಪ್ಯಾಡ್‌, ಆರೋಗ್ಯ ಸಲಹೆ ಎಲ್ಲವೂ ಉಚಿತ!

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಲವು ‘ಭಾಗ್ಯ’ಗಳನ್ನು ನೀಡಿ ಬಡವರ ಬದುಕಿಗೆ ಬಲ ನೀಡಿತ್ತು. ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ಗದಗ ತಾಲೂಕಾ ಆಡಳಿತ ‘ನರೇಗಾ’ ಅಡಿ ಕೆಲಸ ಮಾಡುವ ಬಡ ಕಾರ್ಮಿಕರಿಗೆ ಕಾಮಗಾರಿ ನಡೆಯುವ ಸ್ಥಳದಲ್ಲೇ ‘ಆರೋಗ್ಯ ಭಾಗ್ಯ’ ಕಲ್ಪಿಸುತ್ತಿರುವ ಪರಿ ಇದು. ದೇಶದಲ್ಲೇ ಮೊದಲ ಪ್ರಯೋಗ ಹೌದು!

ಬರಗಾಲ ಆವರಿಸಿದಾಗಲೆಲ್ಲ ಗದಗ ತಾಲೂಕಿನ ಬಡವರು, ಕೂಲಿ ಕಾರ್ಮಿಕರು, ತಾಂಡಾ ನಿವಾಸಿಗಳು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಇಚ್ಛಾಶಕ್ತಿಯ ಫಲವಾಗಿ ಹೀಗೆ ಗುಳೇ ಹೋಗುವವರ ಸಂಖ್ಯೆ ಈಗ ಗಣನೀಯ ಇಳಿಕೆಯಾಗಿದೆ. ಕಾರಣ, ಅವರಿಗೆಲ್ಲ ಅವರವರ ಊರಲ್ಲೇ ಉದ್ಯೋಗ ಖಾತ್ರಿ ಅಡಿಯಲ್ಲಿ ಕೈತುಂಬ ಕೆಲಸ ನೀಡಲಾಗಿದೆಯಂತೆ.

ಹೀಗೆ ಕೆಲಸದಲ್ಲಿ ನಿರತರಾದವರ ಆರೋಗ್ಯದ ಹೊಣೆಯನ್ನೂ ಅವರು ತಾಲೂಕಾ ಆಡಳಿತದ ಹೆಗಲಿಗೆ ಹಾಕಿದ್ದಾರೆ. ಆರೋಗ್ಯ ಹದಗೆಟ್ಟಾಗ ಕೂಲಿ ಬಿಟ್ಟು ಆಸ್ಪತ್ರೆ ಸುತ್ತುವ, ದುಬಾರಿ ವೆಚ್ಚ ಭರಿಸಲಾಗದೇ ತೊಳಲಾಡುವ ಸಂಕಟದಿಂದ ಆ ಬಡವರನ್ನು ಪಾರು ಮಾಡಲು ಕಾಮಗಾರಿ ನಡೆಯುವ ಸ್ಥಳದಲ್ಲೇ ಸರ್ವರಿಗೂ ಉಚಿತ ಚಿಕಿತ್ಸೆ ಮತ್ತು ಔಷಧಿ ಸಿಗುವಂತೆ ಏರ್ಪಾಡು ಮಾಡಿದ್ದಾರೆ. ಎಚ್‌.ಕೆ.ಪಾಟೀಲ್‌ ಜಾರಿಗೆ ತಂದ ‘ಬಡವರ ಬಳಿ ಆರೋಗ್ಯ ಸೇವೆ’ ಭಾರೀ ಸದ್ದು ಮಾಡುತ್ತಿದೆ.

ಸ್ಥಳಕ್ಕೆ ವೈದ್ಯರ ತಂಡ:

ಕಳೆದ ಏಪ್ರಿಲ್‌ನಿಂದ ಈ ಹೊಸ ಸೇವೆ ಆರಂಭವಾಗಿದೆ. ಈಗಾಗಲೇ 8 ಕ್ಯಾಂಪ್‌ಗಳು ಮುಗಿದಿವೆ. ಸುಮಾರು ನೂರು, ಇನ್ನೂರು ಜನ ಒಂದೆಡೆ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ತೊಡಗಿರುವ ಸ್ಥಳಕ್ಕೆ ವೈದ್ಯರು, ಸಹಾಯಕರ ತಂಡ ತಪಾಸಣಾ ಸಾಮಗ್ರಿ ಮತ್ತು ಔಷಧಿಯೊಂದಿಗೆ ದಾವಿಸುತ್ತದೆ. ಎಲುವು-ಕೀಲು, ಕಿವಿ-ಗಂಟಲು, ಹೃದಯ ಸಂಬಂಧಿ, ಮಧುಮೇಹ, ಸ್ತ್ರೀರೋಗ, ಜನರಲ್‌.. ಇತ್ಯಾದಿ ತಜ್ಞ ವೈದ್ಯರು ಮತ್ತು ಮಹಿಳಾ ವೈದ್ಯರೂ ಈ ತಂಡದಲ್ಲಿ ಇರುತ್ತಾರೆ. ಅಲ್ಲೇ ಒಂದು ಪುಟ್ಟಟೆಂಟ್‌ ಹಾಕಿಕೊಂಡು ಕೆಲಸದಲ್ಲಿ ನಿರತ ಒಬ್ಬೊಬ್ಬರನ್ನೇ ಕರೆದು ತಪಾಸಣೆ ಮಾಡುತ್ತಾರೆ.

ರಕ್ತ, ಮೂತ್ರ, ಕಫ ಪರೀಕ್ಷೆ, ಬಿಪಿ ತಪಾಸಣೆ ಹಾಗೂ ಇಸಿಜಿ ಕೂಡ ಸ್ಥಳದಲ್ಲೇ ಮಾಡಲಾಗುತ್ತದೆ. ಪ್ರತಿಯೊಬ್ಬ ಕಾರ್ಮಿಕರಿಗೂ ಸೂಕ್ತ ಚಿಕಿತ್ಸೆ ನೀಡಿ ‘ಹೆಲ್ತ್‌ ಕಿಟ್‌’ ಕೊಡುತ್ತಾರೆ. ಅದರಲ್ಲಿ ವಿವಿಧ ಪರೀಕ್ಷೆಗಳ ರಿಪೋರ್ಟ್‌, ಔಷಧಿ ಇರುತ್ತದೆ. ಮಹಿಳೆಯರಿಗೆ ನೀಡುವ ಕಿಟ್‌ನಲ್ಲಿ ಔಷಧಿ, ರಿಪೋರ್ಟ್‌ಗಳ ಜತೆಗೆ ಸ್ಯಾನಿಟರಿ ಪ್ಯಾಡ್‌ ಇರುತ್ತವೆ.

ಯಾರಿಗಾದರೂ ಹೆಚ್ಚಿನ ಚಿಕಿತ್ಸೆ ಅಗತ್ಯ ಎನಿಸಿದರೆ ಅವರನ್ನು ಜಿಲ್ಲಾ ಆಸ್ಪತ್ರೆ ಕರೆದೊಯ್ದು ತಜ್ಞರಿಂದ ಸೂಕ್ತ ಸಿಕಿತ್ಸೆ ಕೊಡಿಸುವ, ಆಪರೇಷನ್‌ ಮಾಡಿಸುವ ಹೊಣೆಯನ್ನೂ ಇದೇ ತಂಡ ಹೊತ್ತಿದೆ. ಈವರೆಗೆ ಸುಮಾರು 1500ಕ್ಕೂ ಹೆಚ್ಚು ಬಡವರು ಈ ಆರೋಗ್ಯ ಸೇವೆಯ ಪ್ರಯೋಜನ ಪಡೆದಿದ್ದಾರೆ.

ಬಡವರ ಕೈಗೆ ಉದ್ಯೋಗ ಕೊಡುವುದು ಎಷ್ಟುಮುಖ್ಯವೋ ಅವರ ಆರೋಗ್ಯದ ಬಗ್ಗೆ ಗಮನ ಹರಿಸುವುದೂ ಅಷ್ಟೇ ಮುಖ್ಯ. ದುಡಿಮೆಯ ಆತುರದಲ್ಲಿ ಅವರು ತಮ್ಮ ಆರೋಗ್ಯ ನಿರ್ಲಕ್ಷಿಸುತ್ತಾರೆ. ಕೂಲಿ ಬಿಟ್ಟು ಆಸ್ಪತ್ರೆಗೆ ಹೋಗಲು ಅವರಿಗೆ ಆಗುವುದಿಲ್ಲ. ಮೇಲಾಗಿ ದುಬಾರಿ ವೆಚ್ಚ ಭರಿಸುವುದು ಕಷ್ಟ. ಹಾಗಾಗಿ ಈ ಪ್ರಯೋಗ ಮಾಡಿದ್ದೇವೆ. ಇದು ರಾಜ್ಯಾದ್ಯತ ಜಾರಿಯಾದರೆ ಉತ್ತಮ.

-ಎಚ್‌.ಕೆ.ಪಾಟೀಲ್‌, ಶಾಸಕರು ಗದಗ

ಶ್ರಮಜೀವಿಗಳು ರೋಗ ಉಲ್ಬಣಿಸಿದಾಗ ಆಸ್ಪತ್ರೆಗೆ ಬಂದು ಗೋಳಾಡುತ್ತಾರೆ. ಇದನ್ನು ತಪ್ಪಿಸಲು ಅವರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ತಪಾಸಣೆ ಮಾಡಿ, ಸೂಕ್ತ ಚಿಕಿತ್ಸೆ ನೀಡುತ್ತೇವೆ. ಔಷಧಿ, ಸ್ಯಾನಿಟರಿ ಪ್ಯಾಡ್‌ ಇದ್ದ ಕಿಟ್‌ ನೀಡುತ್ತೇವೆ. ಗಂಭೀರ ರೋಗಗಳಿದ್ದರೆ ಜಿಲ್ಲಾ ಆಸ್ಪತ್ರೆಗೆ ಕಳಿಸುತ್ತೇವೆ.

-ಎಚ್‌.ಎಸ್‌.ಜಿಣಗಿ, ಇಒ-ಗದಗ

ವರದಿ : ಮಲ್ಲಿಕಾರ್ಜುನ ಸಿದ್ದಣ್ಣವರ

[ಸಾಂದರ್ಬಿಕ ಚಿತ್ರ]

click me!