* ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ
* ದಾಖಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು
* ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು
ಗಂಗಾವತಿ(ಮೇ.20): ಪರವಾನಗಿ ಪಡೆಯದೆ ಕೋವಿಡ್ ಸೋಂಕಿತರ ತಪಾಸಣೆ ನಡೆಸುತ್ತಿರುವ ನಗರದ ಆಸ್ಪತ್ರೆಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ನಗರದ ಕನಕದಾಸ ವೃತ್ತದಲ್ಲಿರುವ ಮಂಜುನಾಥ ಆಸ್ಪತ್ರೆ, ಒಎಸ್‌ಬಿ ರಸ್ತೆಯಲ್ಲಿರುವ ಬಳ್ಳಾರಿ ಆಸ್ಪತ್ರೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಕೋವಿಡ್ ಸೋಂಕಿತರಿಗೆ ಸೂಕ್ತ ತಜ್ಞ ವೈದ್ಯರು ಇಲ್ಲದೆ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ 8 ಜನ ಕೋವಿಡ್ ಲಕ್ಷಣ ಇರುವ ಸೋಂಕಿತರು, ಮಂಜುನಾಥ ಆಸ್ಪತ್ರೆಯಲ್ಲಿ 3 ಸೋಂಕಿತರು ಇರುವುದು ಕಂಡುಬಂದಿದೆ.
ವೈದ್ಯರಿಲ್ಲ:
ಮಂಜುನಾಥ ಆಸ್ಪತ್ರೆಯಲ್ಲಿ ಸೋಂಕಿತರು ದಾಖಲಾದರೂ ಸೂಕ್ತ ವೈದ್ಯರು ಇರಲಿಲ್ಲ. ಕೇವಲ ಆಸ್ಪತ್ರೆಯ ಶರಣಪ್ಪ ಎನ್ನುವ ವ್ಯವಸ್ಥಾಪಕರ ನೇತೃತ್ವದಲ್ಲಿ ಕೃಷ್ಣಕುಮಾರ ಎನ್ನುವ ವೈದ್ಯರ ಸೂಚನೆಯ ಮೇರೆಗೆ ಸೋಂಕಿತರನ್ನು ದಾಖಲು ಮಾಡಿಕೊಳ್ಳಲಾಗಿದೆ. ಸೂಕ್ತ ಚಿಕಿತ್ಸೆ ನೀಡದೆ ಕೇವಲ ಆಕ್ಸಿಜನ್ ವ್ಯವಸ್ಥೆಯ ಮೇಲೆಯೇ ನಡೆಸಲಾಗುತ್ತಿರುವುದು ಕಂಡುಬಂದಿದೆ.
ಕೊಪ್ಪಳ: ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ತರಹೇವಾರಿ ಭೋಜನ
ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ ವೇಳೆ ಕೋವಿಡ್ ಕೇರ್ ಸೆಂಟರ್ ನಡೆಸಲು ಅನುಮತಿ ಪಡೆಯದಿರುವುದು, ಅಲ್ಲದೆ ತಜ್ಞ ವೈದ್ಯರು ಇಲ್ಲದೆ ಇರುವುದು ಸಹ ಕಂಡುಬಂದಿದೆ. ಪೊಲೀಸ್ ಇಲಾಖೆಯವರು, ಕಂದಾಯ ಇಲಾಖೆ, ಆರೋಗ್ಯ ಇಲಾಖೆಯವರು ಪರಿಶೀಲನೆ ನಡೆಸಿ, ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತಹಸೀಲ್ದಾರ್ ನಾಗರಾಜ, ಟಿಎಚ್‌ಒ ರಾಘವೇಂದ್ರ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಹಾಗೂ ಇತರರಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona