ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಸದನ ಸಮಿತಿ ರಚನೆ

By Kannadaprabha News  |  First Published Aug 26, 2022, 3:30 AM IST

ಐದು ಜನ ಸದಸ್ಯರ ಸಮಿತಿ ರಚನೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ, ಮೂರು ದಿನಗಳ ಅವಧಿಯಲ್ಲಿ ವರದಿ ಸಲ್ಲಿಸುವಂತೆ ಸೂಚನೆ


ಹುಬ್ಬಳ್ಳಿ(ಆ.26): ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಕುರಿತು ತೀರ್ಮಾನ ಕೈಗೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ‘ಸದನ ಸಮಿತಿ’ ರಚಿಸಿದೆ. 3 ದಿನದೊಳಗೆ ಈ ಸಮಿತಿ ವರದಿ ಸಲ್ಲಿಸಲಿದೆ. ಐವರು ಸದಸ್ಯರು ಈ ಸಮಿತಿಯಲ್ಲಿ ಇರಲಿದ್ದಾರೆ. ಬಳಿಕ ಮೇಯರ್‌ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಕುರಿತು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಕೆಲ ಸದಸ್ಯರು ಈ ವಿಷಯವನ್ನು ಸಾಮಾನ್ಯ ಸಭೆಯ ಹೆಚ್ಚಿನ ವಿಷಯ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ಆಕ್ಷೇಪಿಸಿದರೆ, ಬಹುತೇಕರು ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು. ಅದಕ್ಕಾಗಿ ಸದನ ಸಮಿತಿ ರಚಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದರು.

ಕಳೆದ ಒಂದು ತಿಂಗಳಿಂದ ವಿವಿಧ ಸಂಘಟನೆಗಳು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಕುರಿತಂತೆ ಪಾಲಿಕೆಗೆ ಮನವಿ ಸಲ್ಲಿಸುತ್ತಿವೆ. ಭಗತ್‌ಸಿಂಗ್‌ ಸೇವಾ ಸಮಿತಿ, ಹಿಂದೂ ಜಾಗರಣಾ ವೇದಿಕೆ, ರಾಣಿಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ, ಗಜಾನನ ಮಹಾಮಂಡಳ, ಶ್ರೀರಾಮಸೇನಾ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿವೆ. ಅದಕ್ಕಾಗಿ ಈ ಸಾಮಾನ್ಯಸಭೆಯಲ್ಲಿ ಚರ್ಚಿಸಲು ಹೆಚ್ಚಿನ ವಿಷಯ ಪಟ್ಟಿಯಲ್ಲಿ ಸೇರಿಸಲಾಗಿತ್ತು.

Tap to resize

Latest Videos

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕಾಗಿ ಸಹಿ ಸಂಗ್ರಹ

ಸಂಜೆ ವೇಳೆ ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಕಾಂಗ್ರೆಸ್‌ನ ಕವಿತಾ ಕಬ್ಬೇರ, ಇದು ಅತ್ಯಂತ ಸೂಕ್ಷ್ಮ ವಿಷಯ. ಹಿಂದೆ ಇದೇ ಈದ್ಗಾ ವಿವಾದ ನಡೆದಾಗ ಗೋಲಿಬಾರ್‌ ನಡೆದು ಆರು ಜನ ಮೃತಪಟ್ಟಿದ್ದರು. ಇಲ್ಲಿನ ಆರ್ಥಿಕ ಚಟುವಟಿಕೆಗಳೆಲ್ಲ ಅಕ್ಕ ಪಕ್ಕದ ಜಿಲ್ಲೆಗಳಿಗೆ ಸ್ಥಳಾಂತರವಾಗಿದ್ದವು. ಆದಕಾರಣ ಇಂಥ ವಿಷಯವನ್ನು ಇಲ್ಲಿ ಚರ್ಚೆಸುವುದೇ ಬೇಡ. ಈ ವಿಷಯವನ್ನು ಇಲ್ಲಿಗೆ ಕೈಬಿಟ್ಟು ಬಿಡೋಣ ಎಂದರು.

ಬಿಜೆಪಿ ಸದಸ್ಯ ಶಿವು ಮೆಣಸಿನಕಾಯಿ, ಗಣೇಶೋತ್ಸವವನ್ನು ಎಲ್ಲಿ ಬೇಕಾದರೂ ಆಚರಿಸಬಹುದಾಗಿದೆ. ಸದ್ಯ ಪಾಲಿಕೆಗೆ ಬಂದ ಎಲ್ಲ ಮನವಿಗಳು ಗಣೇಶೋತ್ಸವ ಆಚರಿಸೋಣ ಎಂದು ಬಂದಿವೆಯೇ ಹೊರತು ಯಾರೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವುದು ಬೇಡ ಎಂದು ಹೇಳಿಲ್ಲ. ಆದಕಾರಣ ಗಣೇಶೋತ್ಸವ ಆಚರಿಸುವುದು ಸೂಕ್ತ. ಅದಕ್ಕಾಗಿ ಅಧ್ಯಯನ ನಡೆಸಲು ಸದನ ಸಮಿತಿ ರಚಿಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

ನಿರಂಜನ ಹಿರೇಮಠ, ವೀರಣ್ಣ ಸವಡಿ, ಸಂತೋಷ ಚವ್ಹಾಣ, ಶಂಕರ ಶೆಳಕೆ, ನಜೀರ ಅಹ್ಮದ ಹೊನ್ಯಾಳ, ತಿಪ್ಪಣ್ಣ ಮಜ್ಜಗಿ, ಸುವರ್ಣ ಕಲ್ಲಕುಂಟ್ಲಾ ಸೇರಿದಂತೆ ಹಲವು ಸದಸ್ಯರು ಮಾತನಾಡಿದರು. ಬಹುತೇಕ ಎಲ್ಲರೂ ಇದಕ್ಕಾಗಿ ಕಮಿಟಿ ರಚನೆಗೆ ಒಲವು ತೋರಿದರು. ಕೆಲ ವೇಳೆ ಸುಪ್ರೀಂ ಕೋರ್ಚ್‌ ತೀರ್ಪು ಏನಿದೆ ಎಂಬ ಪ್ರಶ್ನೆಯೂ ಕೇಳಿ ಬಂತು. ಆದರೆ ಅದಕ್ಕೆ ಸಭೆಯಲ್ಲಿ ತೀರ್ಪಿನ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ. ಈಗ ಏನು ಮಾಡವೇಕು ಎಂಬ ಬಗ್ಗೆ ಮಾತ್ರ ಚರ್ಚೆ ನಡೆಸಿ ಎಂಬ ಅಭಿಪ್ರಾಯ ಕೂಡ ಕೇಳಿ ಬಂತು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಪರಸ್ಪರ ವಾಕ್ಸಮರ ನಡೆಯಿತು.

ಐವರು ಸದಸ್ಯರ ಸಮಿತಿ:

ಕೊನೆಗೆ ಮೇಯರ್‌ ಈರೇಶ ಅಂಚಟಗೇರಿ ಮಾತನಾಡಿ, ಇದಕ್ಕಾಗಿ ಪಾಲಿಕೆಯೂ ಸದನ ಸಮಿತಿ ರಚಿಸಲಿದೆ. ಮೂವರು ಆಡಳಿತ ಪಕ್ಷ ಹಾಗೂ ಇಬ್ಬರು ವಿರೋಧ ಪಕ್ಷದ ಸದಸ್ಯರು ಸೇರಿದಂತೆ ಐವರು ಸದಸ್ಯರ ಸಮಿತಿ ಇದಾಗಲಿದೆ. ಈ ಸಮಿತಿಗೆ ಮೂರು ದಿನ ಗಡುವು ನೀಡಲಾಗುವುದು ಸೋಮವಾರ ಬೆಳಗ್ಗೆ 11ಕ್ಕೆ ತನ್ನ ವರದಿ ಸಲ್ಲಿಸಬೇಕು. ಆ ವರದಿ ಏನಿರುತ್ತದೆಯೋ ಅದನ್ನು ಗಮನಿಸಿ ಗಣೇಶೋತ್ಸವ ಆಚರಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು ಎಂದರು.

ಈ ಸಮಿತಿಗೆ ಯಾವುದೇ ನಿರ್ಬಂಧ ಹೇರುವುದಿಲ್ಲ. ಇದು 3 ದಿನ ಆಚರಿಸಬೇಕೋ ಬೇಡವೋ, ಆಚರಿಸಿದರೆ ಹೇಗೆ ಆಚರಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಆಚರಿಸುವ ಕುರಿತು ನಿರ್ಧರಿಸಲಿದೆ. ಇದಕ್ಕೆ ಧಾರ್ಮಿಕ ಗುರುಗಳು, ವಿವಿಧ ಮಠಾಧೀಶರೊಂದಿಗೆ ಚರ್ಚಿಸಬಹುದು. ಅದು ಆ ಸಮಿತಿಗೆ ಬಿಟ್ಟವಿಚಾರ ಎಂದು ಸಭೆ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.

ಆ. 29ರಂದು ಮೇಯರ್‌ಗೆ ಈ ಸಮಿತಿ ವರದಿ ಸಲ್ಲಿಸಲಿದ್ದು, ಅದರ ವರದಿ ಅನ್ವಯ ನಿರ್ಣಯ ಕೈಗೊಳ್ಳಲಾಗುವುದು. ಅದಕ್ಕೆ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಬದ್ಧರಾಗಿರಬೇಕು ಎಂದರು. ಇದಕ್ಕೆ ಸಭೆಯಲ್ಲಿ ಎಲ್ಲರೂ ಒಪ್ಪಿಗೆ ಸೂಚಿಸಿದರು.

ಈದ್ಗಾದಲ್ಲಿ ಗಣೇಶ ಚತುರ್ಥಿ; ನಾಳೆ ಹಿಂದೂಪರ ಸಂಘಟನೆಗಳ ಹೋರಾಟ

ನಾವೇ ಆಚರಿಸೋಣ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವುದರಿಂದ ಕೋಮುಗಲಭೆಯಾಗುತ್ತದೆ. ಸಮಸ್ಯೆಯಾಗುತ್ತದೆ ಎಂದು ಯೋಚನೆ ಮಾಡದೇ ನಾವೇ ಅಂದರೆ ಪಾಲಿಕೆಯ 82 ಸದಸ್ಯರೆಲ್ಲರೂ ಸೇರಿಕೊಂಡು ಗಣೇಶೋತ್ಸವ ಆಚರಿಸೋಣ. ನಾವು ರಾಜಕೀಯ ಪಕ್ಷಗಳಿಗೆ ಸೇರಿರಬಹುದು. ಆದರೆ ನಮ್ಮ ಎಲ್ಲ ಧರ್ಮದವರು ಇದ್ದೇವೆ. ನಾವೇ ಎಲ್ಲರೂ ಸೇರಿಕೊಂಡು ಒಟ್ಟಾಗಿ ಸೌಹಾರ್ದಯುತವಾಗಿ ಆಚರಿಸಿದರೆ ಸೂಕ್ತ ಎಂಬ ಸಲಹೆಯನ್ನು ಬಿಜೆಪಿ ಸಭಾನಾಯಕ ತಿಪ್ಪಣ್ಣ ಮಜ್ಜಗಿ ನೀಡಿದರು.

ನಮಗೂ ಕೊಡಿ: ಕಲ್ಲಕುಂಟ್ಲಾ

ಮುಸ್ಲಿಂ ಸಮುದಾಯದವರಿಗೆ ಎರಡು ಬಾರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಈದ್ಗಾ ಮೈದಾನ ನೀಡುತ್ತೀರಿ. ಇದೀಗ ಗಣೇಶೋತ್ಸವ ಆಚರಿಸಲು ಅವಕಾಶದ ಬಗ್ಗೆ ಚರ್ಚೆ ನಡೆಯುತ್ತಿದೆ. ನಾವು ಕ್ರೈಸ್ತ ಸಮುದಾಯದವರು, ನಮಗೆ ಕ್ರಿಸ್‌ಮಸ್‌ ಆಚರಣೆಗೆ ಅವಕಾಶ ಮಾಡಿಕೊಡಿ ಎಂದು ಇದೇ ವೇಳೆ ಕಾಂಗ್ರೆಸ್‌ ಹಿರಿಯ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಕೋರಿದರು.
 

click me!