ಮಧುಗಿರಿ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿಘೋಷಿಸಿದ ಎಚ್‌ಡಿಕೆ

By Kannadaprabha News  |  First Published Oct 11, 2022, 4:38 AM IST

ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿದಂತೆ ಯಾರು ಆತಂಕ ಪಡುವ ಅಗತ್ಯವಿಲ್ಲ, ಅದನ್ನು ಸರಿಪಡಿಸುವ ಜವಾಬ್ದಾರಿ ನನ್ನ ಮೇಲಿದ್ದು, ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಿಸುವುದಿಲ್ಲ


   ಮಧುಗಿರಿ (ಅ.11):  ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿದಂತೆ ಯಾರು ಆತಂಕ ಪಡುವ ಅಗತ್ಯವಿಲ್ಲ, ಅದನ್ನು ಸರಿಪಡಿಸುವ ಜವಾಬ್ದಾರಿ ನನ್ನ ಮೇಲಿದ್ದು, ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಿಸುವುದಿಲ್ಲ, ವೀರಭದ್ರಯ್ಯ ಅವರೇ ಕ್ಯಾಂಡಿಡೇಟ್‌ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಇತ್ತೀಚೆಗೆ ಶಾಸಕ ವೀರಭದ್ರಯ್ಯ ಆರೋಗ್ಯ, ವೈಯಕ್ತಿಕ ಸಮಸ್ಯೆಗಳಿಂದಾಗಿ ಮಂಬರುವ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಇದರಿಂದ ಕ್ಷೇತ್ರದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಆತಂಕಕ್ಕೆ ಒಳಗಾಗಿ ಭಾನುವಾರ ಮಧುಗಿರಿ ಕ್ಷೇತ್ರದಿಂದ ನೂರಾರು ಜನ ಬೆಂಗಳೂರಿನ ಜೆಡಿಎಸ್‌ ಕಚೇರಿಗೆ ಹೋಗಿ ವೀರಭದ್ರಯ್ಯ ಅವರನ್ನೇ 2023ರ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದರು.

Tap to resize

Latest Videos

ಈ ವೇಳೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎಂ.ವಿ.ವೀರಭದ್ರಯ್ಯ ನಮ್ಮ ಮನೆ ಮಗ ಇದ್ದಂತೆ, ದೇವೇಗೌಡರು ನೀನು ಯಾರನ್ನು ಕೇಳಿ ಈ ತೀರ್ಮಾನ ಮಾಡಿದೆ ಎಂದು ಕೇಳಿದರೆ ಸಾಕು ಮತ್ತೆ ಕ್ಷೇತ್ರಕ್ಕೆ ವಾಪಸ್‌ ಮರಳುತ್ತಾರೆ. ಆತಂಕ ಬೇಡ, ವೀರಭದ್ರಯ್ಯ ಅತ್ಯಂತ ಸರಳ, ಸೂಕ್ಷ್ಮ ವ್ಯಕ್ತಿ, ಕಾರ್ಯಕರ್ತರಲ್ಲಿ ಈಗ ಅವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಡಬಲ್‌ ಹುಮ್ಮಸ್ಸು ಬಂದಿದ್ದು, ಮಧುಗಿರಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಇದು ಕಾರ್ಯಕರ್ತರ ಆಶಯ ಕೂಡ, ಅದೇ ರೀತಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಜಿಲ್ಲೆಯ ಮತದಾರರು ಜೆಡಿಎಸ್‌ ಪಕ್ಷ ಮತ್ತು ದೇವೇಗೌಡರನ್ನು ಎಂದಿಗೂ ಕೈ ಬಿಟ್ಟಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಶಾಸಕ ಎಂ.ವಿ.ವೀರಭದ್ರಯ್ಯ ಸೋತಾಗಲೂ 60 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು. ಗೆದ್ದಾಗ 88 ಸಾವಿರ ಮತ ಪಡೆದು ಪಕ್ಷ ಕಟ್ಟಿದ್ದಾರೆ. ಅವರನ್ನು ಹೊರತುಪಡಿಸಿ ಬೇರೆಯವರಿಂದ ಗೆಲುವು ಸಾಧ್ಯವಿಲ್ಲ, 88 ಸಾವಿರ ಮತಗಳು ಬರಬೇಕಾದರೆ ಎಲ್ಲ ಸಮಾಜದವರು ಇತರೆ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರ ಫಲ, ವಿರೋಧ ಪಕ್ಷದವರು ಸಹ ಎಂ.ವಿ.ವೀರಭದ್ರಯ್ಯ ಆಡಳಿತವನ್ನು ಮೆಚ್ಚಿದ್ದಾರೆ ಎಂದರು.

ಪುರಸಭೆ ಸದಸ್ಯ ಎಂ.ಆರ್‌.ಜಗನ್ನಾಥ್‌ ಮಾತನಾಡಿ, ವೀರಭದ್ರಯ್ಯ ಕಳೆದ 10 ವರ್ಷಗಳಿಂದ ಪಕ್ಷ ಸಂಘಟಿಸುವಲ್ಲಿ ಯಶಸ್ಸು ಕಂಡಿದ್ದಾರೆ. ನಿಮ್ಮ ಬೆಂಬಲದಿಂದ ಮುಂದಿನ ಚುನಾವಣೆಯಲ್ಲಿ 30 ಸಾವಿರ ಅಂತರದಲ್ಲಿ ಗೆಲ್ಲುವ ಮೂಲಕ ದೇವೇಗೌಡರ ಸೋಲಿನ ಸೇಡು ತೀರಿಸಿಕೊಳ್ಳಲು ಇದು ಉತ್ತಮ ಅವಕಾಶ ಎಂದರು.

ಶಾಸಕರ ಮನೆಗೆ ಭೇಟಿ:

ಮುಖಂಡರು, ಕಾರ್ಯಕರ್ತರು ಬೆಂಗಳೂರಿನ ವಿಜಯನಗರದಲ್ಲಿರುವ ಶಾಸಕ ವೀರಭದ್ರಯ್ಯ ಅವರ ನಿವಾಸಕ್ಕೆ ತೆರಳಿ ತಮ್ಮ ತೀರ್ಮಾನವನ್ನು ಬದಲಾಯಿಸಿಕೊಳ್ಳಿ ಎಂದು ಒತ್ತಾಯಿಸಿದಾಗ ಶಾಸಕ ವೀರಭದ್ರಯ್ಯ, ಪತ್ನಿ ಗಂಗಮ್ಮ ಹಾಗೂ ಪುತ್ರ ಕಾರ್ತಿಕ್‌ ನಮ್ಮ ತಂದೆಗೆ ಆರೋಗ್ಯದಲ್ಲಿ ಸಮಸ್ಯೆ ಇರುವ ಕಾರಣ ಸ್ಪರ್ಧಿಸುವುದಿಲ್ಲ ಎಂದಾಗ, ಅವರೇ ಅಭ್ಯರ್ಥಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಆಗ ಶಾಸಕ ವೀರಭದ್ರಯ್ಯ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಪುರಸಭೆ ಸದಸ್ಯ ಎಂ.ಎಸ್‌.ಚಂದ್ರಶೇಖರಬಾಬು, ಜೆಡಿಎಸ್‌ ಮುಖಂಡರುಗಳಾದ ಬಾವಿಮನೆ ಕಾಂತಣ್ಣ, ಕೂನ್ನಪ್ಪ, ಲಕ್ಷ ಅಮೀನರಸಿಂಹರೆಡ್ಡಿ, ರಾಮಚಂದ್ರಪ್ಪ, ಎಚ್‌ಎಂಆರ್‌, ನಾಸೀರ್‌, ಆಚೇನಹಳ್ಳಿ ಗೋಪಾಲ್‌ ಗುಂಡಗಲ್ಲು ಶಿವಣ್ಣ, ಚಂದ್ರಕುಮಾರ್‌, ಎಚ್‌.ಆರ್‌.ನಾಗಾರಜು, ಕಂಭತ್ತನಹಳ್ಳಿ ರಘು, ಹನುಮಂತೇಗೌಡ, ಗೋವಿಂದರೆಡ್ಡಿ, ಚೌಡಪ್ಪ, ಕೆ.ನಾಗಭೂಷಣ್‌, ಬಿ.ಎಸ್‌.ಶ್ರೀನಿವಾಸ್‌, ವೆಂಕಟಾಪುರ ಗೋವಿಂದರಾಜು, ಶಿವಕುಮಾರ್‌, ವಿಶ್ವನಾಥ್‌, ರಂಗನಾಥ್‌ ಗೌಡ, ರಂಗನಾಥ್‌, ಶ್ರೀಧರ್‌, ಆರ್‌.ಟಿ.ಪ್ರಭು ಸೇರಿದಂತೆ ನೂರಾರು ಜನರು ಇದ್ದರು.

click me!