* 2,434 ದಿನ ಪೂರೈಸಿ ಏಳನೇ ವರ್ಷಕ್ಕೆ ಮುಂದುವರಿದ ಮಹದಾಯಿ ಪ್ರತಿಭಟನೆ
* ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಏರಿಕೆ
* ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜೆಡಿಎಸ್ ಪ್ರತಿಭಟನೆ
ಹುಬ್ಬಳ್ಳಿ(ಜು.21): 2023ರಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಇದೀಗ ಬಲಿಷ್ಠವಾಗುತ್ತಿದೆ. ನಾವು 113 ಸ್ಥಾನ ಗೆದ್ದು ಅಧಿಕಾರಕ್ಕೆ ಬರಬೇಕೆಂಬ ಪ್ರಯತ್ನದಲ್ಲಿದ್ದೇವೆ. ಇಷ್ಟೊಂದು ಸ್ಥಾನ ಬರದಿದ್ದರೂ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.
ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನವಲಗುಂದ-ನರಗುಂದದಲ್ಲಿ ನಡೆಯುತ್ತಿರುವ ಪ್ರತಿಭಟನೆ 2,434 ದಿನ ಪೂರೈಸಿ ಏಳನೇ ವರ್ಷಕ್ಕೆ ಮುಂದುವರಿದಿದೆ. ಆದರೂ, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿಲ್ಲ ಎಂದರು.
ಸಾರಿಗೆ ಮುಷ್ಕರ: ಸರ್ಕಾರ ಹಠಮಾರಿ ಧೋರಣೆ ಬಿಡಲಿ, ಕೋನರಡ್ಡಿ
ಮಹಾದಾಯಿ ನ್ಯಾಯಾಧೀಕರಣ ಈಗಾಗಲೇ ತೀರ್ಪು ನೀಡಿ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತನ್ನ ಪಾಲಿನ ನೀರು ಬಳಕೆ ಮಾಡಿಕೊಳ್ಳಲು ಅಧಿಸೂಚನೆ ಸಹ ಹೊರಡಿಸಿದೆ. ಆದರೆ, ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕಿದ್ದ ರಾಜ್ಯ ಸರ್ಕಾರ ಇನ್ನೂ ಮೌನವಾಗಿಯೇ ಇದೆ. ಕೂಡಲೇ ಕಾಮಗಾರಿಗೆ ಚಾಲನೆ ನೀಡಿ, ರೈತರ ನಾಲ್ಕು ದಶಕಗಳ ಕನಸು ನನಸಾಗಿಸಬೇಕು ಎಂದರು.
ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಇನ್ನೂ ಪರಿಹಾರ ದೊರಕಿಲ್ಲ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸಲಿದೆ ಎಂದ ಅವರು, 21ರಂದು ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಹುತಾತ್ಮ ರೈತರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.