ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ದಿಢೀರ್ ಪತ್ನಿ ಜೊತೆಗೆ ಹೋಗಿ ಮುನಿಸು ಸರಿಪಡಿಸಲು ಮುಂದಾಗಿದ್ದಾರೆ.
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಅ.14): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕ್ಷೇತ್ರಗಳಿಂದ ದೂರ ಉಳಿದಿದ್ದ ಜೆಡಿಎಸ್ ವರಿಷ್ಠರಾದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಜಿಲ್ಲೆಯಲ್ಲಿ ಸಾಲು ಸಾಲು ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಇಂದಿನಿಂದ (ಅ. 14ರಿಂದ17) ನಾಲ್ಕು ದಿನಗಳ ಕಾಲ ಪತ್ನಿ ಅನಿತಾ ಅವರೊಂದಿಗೆ ಕುಮಾರಸ್ವಾಮಿರವರು ಹೋಬಳಿವಾರು ನಡೆಸಲಿರುವ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ರಾಜಕೀಯವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈಗ ವಿಧಾನ ಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ ನಡೆಯುತ್ತಿದ್ದು, ಮಾಗಡಿ ಹಾಗೂ ಬಿಡದಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಶೀಘ್ರದಲ್ಲಿ ನಿಗದಿಯಾಗಲಿದೆ. ಇದಾದ ನಂತರ ಗ್ರಾಮ ಪಂಚಾಯಿತಿ, ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಚುನಾವಣೆಗಳು ಘೋಷಣೆಯಾಗಲಿವೆ.
RR ನಗರ ಬೈ ಎಲೆಕ್ಷನ್: ಅಳೆದು ತೂಗಿ ಕೊನೆಗೂ ಅಚ್ಚರಿ ಅಭ್ಯರ್ಥಿ ಘೋಷಿಸಿದ ಜೆಡಿಎಸ್ ...
ಕರ್ಮಭೂಮಿಯಲ್ಲಿ ಪಕ್ಷ ಸಂಘಟನೆ: ಈ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಜೆಡಿಎಸ್ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಅನಿವಾರ್ಯ. ಹೀಗಾಗಿಯೇ ಕುಮಾರಸ್ವಾಮಿರವರು ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರ ಉಪ ಚುನಾವಣೆಗಳ ಒತ್ತಡದ ನಡುವೆಯೂ ತಮ್ಮ ಕರ್ಮಭೂಮಿಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಮೈತ್ರಿ ಸರ್ಕಾರ ಪತನಗೊಂಡ ನಂತರ ಕುಮಾರಸ್ವಾಮಿ ಮತ್ತು ಅನಿತಾ ಜಿಲ್ಲೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೊರೋನಾ ಸಂಕಷ್ಟದ ಸಮಯದಲ್ಲಿ ಬಡವರ ಸಮಸ್ಯೆಗಳಿಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದರು. ಆದಾದ ಬಳಿಕ ಶಾಸಕದ್ವಯರು ಉಭಯ ಕ್ಷೇತ್ರಗಳಿಗೆ ಭೇಟಿ ನೀಡದಿರುವ ಕುರಿತು ಸ್ವಪಕ್ಷಿಯರಿಂದಲೇ ಅಪಸ್ವರದ ಮಾತುಗಳು ಕೇಳಿ ಬಂದಿದ್ದವು.
ಜೆಡಿಎಸ್ ಸ್ಥಿತಿ ಏನಾಗಿದೆ?
ರಾಜಕೀಯವಾಗಿ ಮೇಲ್ನೋಟಕ್ಕೆ ರಾಮನಗರ ಜಿಲ್ಲೆ ಜೆಡಿಎಸ್ನ ಭದ್ರಕೋಟೆಯಂತೆ ಕಾಣುತ್ತಿದೆ. ಆದರೆ, ಸಾಂಪ್ರದಾಯಿಕ ಎದುರಾಳಿ ಪಕ್ಷವಾದ ಕಾಂಗ್ರೆಸ್ನ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಜೆಡಿಎಸ್ ಕೋಟೆಯನ್ನು ಹಂತ ಹಂತವಾಗಿ ಅಲುಗಾಡಿಸುತ್ತಿದ್ದಾರೆ. ಇನ್ನು ಬಿಜೆಪಿ ನಾಯಕರು ಬೇರು ಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಜೆಡಿಎಸ್ ಹಾಗೂ ಒಂದರಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಶಾಸಕರ ಸಂಖ್ಯಾ ದೃಷ್ಟಿಯಲ್ಲಿ ಜಿಲ್ಲೆಯ ಮಟ್ಟಿಗೆ ಜೆಡಿಎಸ್ ಪ್ರಬಲವಾಗಿರುವ ಪಕ್ಷದಂತೆ ಕಂಡು ಬಂದರೂ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪುರಸಭೆ, ನಗರಸಭೆಗಳ ಪೈಕಿ ಹೆಚ್ಚಿನ ಕಡೆಗಳಲ್ಲಿ ಸಮಬಲದ ಸದಸ್ಯರಿದ್ದರೂ ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯುತ್ತಿದೆ.
ಈ ಕಾರಣದಿಂದಾಗಿ ಜೆಡಿಎಸ್ ಪ್ರಬಲವಾಗಿರುವ ರಾಮನಗರ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್ ಪಕ್ಷ ದಿನ ಕಳೆದಂತೆ ಪ್ರಬಲಗೊಳ್ಳುತ್ತಲೇ ಇದೆ. ಇದರಲ್ಲಿ ಡಿ.ಕೆ. ಸಹೋದರರ ರಾಜಕೀಯ ಚಾಣಕ್ಷತನವೂ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಡಿಸಿಎಂ ಅಶ್ವತ್್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪಕ್ಷದ ಬೇರುಗಳನ್ನು ಗಟ್ಟಿಮಾಡಲು ತವಕಿಸುತ್ತಿದ್ದಾರೆ. ಹಾಗಾಗಿ ಎರಡೂ ಪಕ್ಷಗಳ ನಾಯಕರು ಜೆಡಿಎಸ್ ಬುಟ್ಟಿಗೆ ಕೈ ಹಾಕುತ್ತಿದ್ದಾರೆ. ಇದು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರಿಗೆ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಸವಾಲನ್ನು ತಂದೊಡ್ಡಿರುವುದರರಿಂದ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಮುಂದಾಗಿದ್ದಾರæ.
ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾರವರು ಅ.14ರಂದು ಕೈಲಾಂಚ, ಅ.15ರಂದು ಕಸಬಾ ಮತ್ತು ರಾಮನಗರ ಟೌನ್ , ಅ.16ರಂದು ಹಾರೋಹಳ್ಳಿ ಮತ್ತು ಮರಳವಾಡಿ , ಅ.17ರಂದು ಕೂಟಗಲ್ ಮತ್ತು ಬಿಡದಿ ಹೋಬಳಿ ಮುಖಂಡರು, ಕಾರ್ಯಕರ್ತರ ಸಭೆ ನಡೆಸುವರು.
ಕಾರ್ಯಕರ್ತರ ಮುನಿಸಿಗೆ ಕಾರಣವೇನು ?
ಜೆಡಿಎಸ್ಗೆ ಅಧಿಕಾರ ದೊರೆತಾಗಲೆಲ್ಲ ದೇವೇಗೌಡ ಮತ್ತು ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿರುವುದೇ ಮುನಿಸಿಗೆ ಪ್ರಮುಖ ಕಾರಣ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಜೆಡಿಎಸ್ಗೆ ಅನಿರೀಕ್ಷಿತವಾಗಿ 14 ತಿಂಗಳ ಕಾಲ ಅಧಿಕಾರ ಸಿಕ್ಕಿತ್ತು. ಆಗ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಧಿಕಾರ ಕಲ್ಪಿಸುವುದನ್ನು ಗೌಡರ ಕುಟುಂಬ ಮರೆತಿತ್ತು. 2007ರಲ್ಲಿಯೂ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾದ ಸಮಯದಲ್ಲಿ ಕೆಲವರಿಗೆ ಅಧಿಕಾರ ದೊರಕಿದ್ದು ಬಿಟ್ಟರೆ, ಎಲ್ಲರೂ ತಮ್ಮ ಸಾಮಥ್ಯರ್ದಿಂದಲೇ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಅನುಭವಿಸಿದ್ದರು.
ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಅಹವಾಲುಗಳನ್ನುಆಲಿಸುವ ಸಲುವಾಗಿಯೇ ಕುಮಾರಸ್ವಾಮಿರವರು ನಾಲ್ಕು ದಿನಗಳನ್ನು ಮೀಸಲಿಟ್ಟಿದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳ ಹೋಬಳಿವಾರು ನಡೆಯಲಿರುವ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಹೋರಾಟಗಳು , ಪಕ್ಷದ ಕಾರ್ಯಕ್ರಮಗಳು ಹಾಗೂ ಚುನಾವಣೆಗಳ ಸಿದ್ಧತೆ ಕುರಿತಾಗಿಯೂ ಚರ್ಚೆ ನಡೆಯಲಿದೆ.
- ಎ.ಮಂಜುನಾಥ್, ಶಾಸಕರು