ಹಲಗೇವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣ| ಕ್ವಾರಂಟೈನ್ ಕಾರಣ ನೀಡಿದ ಮಾಜಿ ಸಿಎಂ| ಹೊರಗೆ ಕಾಣಿಸಿಕೊಂಡರೆ ಬಂಧನ ವಾರಂಟ್: ಜಡ್ಜ್| ಜನಪ್ರತಿನಿಧಿಗಳ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕುಮಾರಸ್ವಾಮಿ|
ಬೆಂಗಳೂರು(ಏ.02): ಹಲಗೇವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗರಂ ಆಗಿದ್ದು, ಕ್ವಾರಂಟೈನ್ ಆಗಿದ್ದರೆ ಸಾರ್ವಜನಿಕವಾಗಿ ಹೊರಗೆ ಕಾಣಿಸಬಾರದು. ಒಂದು ವೇಳೆ ಕಾಣಿಸಿಕೊಂಡರೆ ಬಂಧನ ವಾರಂಟ್ ಜಾರಿಗೊಳಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಪ್ರಕರಣದ ಸಂಬಂಧ ನ್ಯಾಯಾಲಯವು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಮೂರು ಬಾರಿ ವಿಚಾರಣೆಗೆ ಎಚ್‌ಡಿಕೆ ಗೈರಾಗಿದ್ದರು. ಈ ಬಾರಿ ವಿಚಾರಣೆಗೆ ಹಾಜರಾಗದಿರಲು ಕ್ವಾರಂಟೈನ್ ಕಾರಣ ನೀಡಿದ್ದರು. ತಂದೆ-ತಾಯಿಗೆ ಕೋವಿಡ್ ಇದ್ದು, ತಾವು ಕ್ವಾರಂಟೈನ್‌ನಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದರು. ಇದು ನ್ಯಾಯಾಧೀಶರ ಸಿಟ್ಟಿಗೆ ಕಾರಣವಾಯಿತು. ಏ.17ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಒಂದು ವೇಳೆ ಈ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾರ್ವಜನಿಕವಾಗಿ ಕಾಣಿಸಿಕೊಂಡಲ್ಲಿ ಬಂಧನ ವಾರಂಟ್ ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಮೀರ್ ಗೆಲ್ಲಿಸಲು ಹಣ ಕೊಟ್ಟಿದ್ಯಾರು?: ಎಚ್‌ಡಿಕೆ
ಹಲಗೇವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಚಾಮರಾಜನಗರದ ಎಂ.ಎಸ್.ಮಹದೇವಸ್ವಾಮಿ ದೂರು ಸಲ್ಲಿಸಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಸುಪ್ರೀಂಕೋರ್ಟ್ ಮೆಟ್ಟೀಲೆರಿದ್ದರು. ಅಲ್ಲಿಯೂ ಪ್ರಕರಣ ವಿಚಾರಣೆ ಮುಂದುವರಿಸುವಂತೆ ಸೂಚನೆ ನೀಡಲಾಗಿತ್ತು. ವಿಚಾರಣೆಗೆ ಪದೇ ಪದೇ ಗೈರಾಗುತ್ತಿದ್ದರಿಂದ ನ್ಯಾಯಾಲಯವು ಗರಂ ಆಗಿದೆ.