'ಸರ್ಕಾರ ಬಿದ್ದುಹೋಗಲಿ ಎಂದು ಸುಮ್ಮನಿದ್ದೆ : ಅದಕೆ ಅಮೆರಿಕಾಗೆ ಹೋದೆ'

By Kannadaprabha NewsFirst Published Nov 21, 2020, 9:15 AM IST
Highlights

ನಾನು ದೋಸ್ತಿ ಬೀಳಲಿ ಎಂದೇ ಸುಮ್ಮನಿದ್ದೆ ಅದಕ್ಕೆ ಅಮೆರಿಕಾ ಪ್ರವಾಸಕ್ಕೆ ತೆರಳಿದೆ ಎಂದು ಮಾಜಿ ಸಿಎಂ ಎಚ್ಡಿಕೆ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. 

ಚನ್ನಪಟ್ಟಣ (ನ.21):  ಕಾಂಗ್ರೆಸ್‌ ಜತೆ ಸರ್ಕಾರ ನಡೆಸಿ ನನಗೆ ಸಾಕಾಗಿ ಹೋಗಿತ್ತು, ಸರ್ಕಾರ ಬೀಳುತ್ತದೆ ಎಂದು ಗೊತ್ತಿದ್ದರೂ ನಾನು ತಲೆ ಕೆಡೆಸಿಕೊಳ್ಳದೆ ಅಮೆರಿಕ ಪ್ರವಾಸಕ್ಕೆ ತೆರಳಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ದೋಸ್ತಿ ಸರ್ಕಾರ ಪತನದ ಘಟನಾವಳಿಗಳನ್ನು ಮೆಲುಕು ಹಾಕಿದರು.

ತಾಲೂಕಿನ ಮಹದೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಆಪ್ತರು ಅಮೆರಿಕಗೆ ಹೋಗದಂತೆ ಸಲಹೆ ನೀಡಿದ್ದರು. ಆದರೆ, ಆದಿಚುಂಚನಗಿರಿ ಶ್ರೀಗಳ ಆಹ್ವಾನದ ಮೇರೆಗೆ ಕಾಲಬೈರವೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆಗೆ ಹೋಗಿದ್ದೆ ಎಂದು ತಿಳಿಸಿದರು.

ಸರ್ಕಾರ ಉಳಿಸಿಕೊಳ್ಳುವ ದಾರಿ ಗೊತಿತ್ತು:

ಅಧಿಕಾರದಲ್ಲಿ ಇಲ್ಲದಿದ್ದವರೇ ಹಣ ನೀಡಿ ಶಾಸಕರನ್ನು ಖರೀದಿ ಮಾಡುತ್ತಿದ್ದರು ಎಂದರೆ, ಮುಖ್ಯಮಂತ್ರಿಯಾಗಿದ್ದ ನಾನು ಒಂದಿಷ್ಟುಕೋಟಿ ನೀಡಿ ಬಿಜೆಪಿಯ 10 ಮಂದಿ ಶಾಸಕರನ್ನು ಸೆಳೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇ, ಆದರೆ ನಾನೇ ಈ ಸರ್ಕಾರದ ಸಹವಾಸ ಬೇಡ ಎಂದು ಸುಮ್ಮನಾದೆ. ನನಗೆ ಸರ್ಕಾರ ನಡೆಸಿ ಸಾಕಾಗಿ ಹೋಗಿತ್ತು ಎಂದು ತಮ್ಮ ಅನುಭವವನ್ನು ಸಾರ್ವಜನಿಕರ ಮುಂದೆ ಬಿಚ್ಚಿಟ್ಟರು.

ಡಿಕೆಶಿ ಕಾಂಗ್ರೆಸ್‌ಗೆ ಕರೆದಿದ್ದಾರೆ : ಜೆಡಿಎಸ್‌ ನಾಯಕ ಮಧು ಬಂಗಾರಪ್ಪ

ಬಿಜೆಪಿಯಿಂದ ಆಫರ್‌ ಇತ್ತು:

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ಬಿಜೆಪಿಯಿಂದಲೂ ನನಗೆ ಸರ್ಕಾರ ರಚಿಸಲು ಆಹ್ವಾನ ಬಂದಿತ್ತು. ಬಿಜೆಪಿ ಜತೆಗೆ ಹೋಗಿದ್ದರೆ ನಾನು ಪೂರ್ಣ ಅವಧಿ ಸಿಎಂ ಆಗಬಹುದಿತ್ತು. ಆದರೆ, ದೇವೇಗೌಡರು ಜಾತ್ಯತೀತ ತತ್ವದ ಬಗ್ಗೆ ನಂಬಿಕೆ ಇರಿಸಿದ್ದ ಹಿನ್ನೆಲೆಯಲ್ಲಿ ಅವರ ಮಾತಿಗೆ ಬೆಲೆಕೊಟ್ಟು ನಾನು ಕಾಂಗ್ರೆಸ್‌ ಜತೆಗೆ ಹೋದೆ ಎಂದು ದೋಸ್ತಿ ಸರ್ಕಾರ ರಚನೆ ಬಗ್ಗೆ ವಿವರಿಸಿದರು.

ಅಧಿಕಾರದ ಆಸೆ ಇಲ್ಲ:

ನಾನು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಬೇಕು ಎಂದು ಆಸೆ ಇಟ್ಟುಕೊಂಡಿರಲಿಲ್ಲ. ಕಾಂಗ್ರೆಸ್‌ ಜೊತೆಗೆ ಸರ್ಕಾರ ರಚಿಸಲು ನನಗೆ ಮನಸ್ಸಿರಲಿಲ್ಲ. ಆದರೆ, ನಾನು ಚುನಾವಣೆ ಸಮಯದಲ್ಲಿ ರೈತರಿಗೆ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದೆ. ಅದನ್ನು ಈಡೇರಿಸಬೇಕು ಎಂಬ ಒಂದೇ ಒಂದು ಉದ್ದೇಶದಿಂದ ಸರ್ಕಾರ ಮಾಡಲು ಒಪ್ಪಿಕೊಂಡೆ ಎಂದು ಸ್ಪಷ್ಟಪಡಿಸಿದರು.

ಮೂರು ಕ್ಷೇತ್ರದಲ್ಲಿ ಗೆಲ್ಲುವುದು ನನ್ನ ಗುರಿ:

ಮುಂದಿನ ವಿಧಾನಸಭಾ ಚುನಾವಣೆಗೆ ರಾಮನಗರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವುದು ನನ್ನ ಗುರಿ, ಇದಕ್ಕಾಗಿ ಕಾರ್ಯಕರ್ತರು ಮತ್ತು ಜನತೆಯ ಅಭಿಲಾಷೆಯನ್ನು ಗಮನದಲ್ಲಿರಿಸಿಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ವಿಧಾನಸಭಾ ಚುನಾವಣೆ ಇನ್ನೂ ಸಾಕಷ್ಟುದೂರ ಇದೆ, ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದು ಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಬಮೂಲ್‌ ಮಾಜಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ಮುಖಂಡರಾದ ಹಾಪ್‌ಕಾಮ್ಸ್‌ ದೇವರಾಜು, ನಗರ ಜೆಡಿಎಸ್‌ ಅಧ್ಯಕ್ಷ ರಾಂಪುರ ರಾಜಣ್ಣ, ಮುಖಂಡರಾದ ವಡ್ಡರಹಳ್ಳಿ ರಾಜಣ್ಣ, ವಕೀಲ ಹನುಮಂತು, ಜೆಸಿಬಿ ಲೋಕೇಶ್‌ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಪೋಟೋ:20ಕೆಸಿಪಿಟಿ1: ಚನ್ನಪಟ್ಟಣ ತಾಲೂಕಿನ ಪೌಳಿದೊಡ್ಡಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.

click me!