'ನಾನು 2ನೇ ಹೆಂಡತಿ ಮಗ, ಮೊದಲ ಪತ್ನಿಯ 3 ಮಕ್ಕಳೂ ತೀರಿಕೊಂಡ್ರು': ಬಾಲ್ಯ ನೆನೆದು ಭಾವುಕರಾದ ದೇವೇಗೌಡ್ರು!

Published : Aug 29, 2026, 12:24 PM IST
HD Deve Gowda Ranganathswamy Temple

ಸಾರಾಂಶ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಶ್ರಾವಣ ಶನಿವಾರದಂದು ಹಾಸನದ ಮಾವಿನಕೆರೆ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ತಮ್ಮ ಜನನದ ಹಿಂದಿನ ಕಣ್ಣೀರ ಕಥೆ ಹಾಗೂ ತಮ್ಮ ತಂದೆಯೊಂದಿಗೆ ಬೆಟ್ಟಕ್ಕೆ ಬರುತ್ತಿದ್ದ ಬಾಲ್ಯದ ದಿನಗಳನ್ನು ಭಾವುಕರಾಗಿ ಸ್ಮರಿಸಿಕೊಂಡರು.

ಹಾಸನ (ಆ.29): ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಜೀವನದ ಶಕ್ತಿ ಕೇಂದ್ರ ಎಂದೇ ಭಾವಿಸುವ ಹಾಸನ ಜಿಲ್ಲೆಯ ಪವಿತ್ರ ಕ್ಷೇತ್ರ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (H.D. Deve Gowda) ಅವರು ಶ್ರಾವಣ ಶನಿವಾರದ ಪ್ರಯುಕ್ತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಬಾಲ್ಯದ ನೆನಪುಗಳು ಹಾಗೂ ಕುಟುಂಬದ ಅಪರೂಪದ ಹಳೆಯ ಇತಿಹಾಸವನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ.

50 ವರ್ಷಗಳ ಭಕ್ತಿ, ತಂದೆಯ ಹೆಗಲೇರಿ ಬಂದ ದಿನಗಳು:

ಮಾವಿನಕೆರೆ ಬೆಟ್ಟದೊಂದಿಗಿನ ತಮ್ಮ ಅವಿನಾಭಾವ ನಂಟನ್ನು ಸ್ಮರಿಸಿದ ದೇವೇಗೌಡರು, 'ಯಾವುದಾದರೂ ಒಂದು ಶ್ರಾವಣ ಶನಿವಾರ ಈ ಪವಿತ್ರ ಕ್ಷೇತ್ರಕ್ಕೆ ಬರುವ ಸಂಪ್ರದಾಯವನ್ನು ಕಳೆದ 50 ವರ್ಷಗಳಿಂದ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇನೆ. ನನಗೆ ಒಂಬತ್ತು ವರ್ಷ ವಯಸ್ಸಿದ್ದಾಗಿನಿಂದಲೂ ನನ್ನ ತಂದೆಯವರ ಜೊತೆ ಇಲ್ಲಿಗೆ ಬರುತ್ತಿದ್ದೆ. ಆ ಕಾಲದಲ್ಲಿ ಬೆಟ್ಟ ಹತ್ತಲು ಮೆಟ್ಟಿಲುಗಳೇ ಇರಲಿಲ್ಲ. ನಮ್ಮ ಹಳ್ಳಿಯಿಂದ ಕಾಲುದಾರಿಯ ಮೂಲಕ ನನ್ನ ತಂದೆ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಈ ಬೆಟ್ಟಕ್ಕೆ ಕರೆದುಕೊಂಡು ಬರುತ್ತಿದ್ದರು' ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

ಮೊದಲ ಪತ್ನಿಯ ಮೂವರು ಮಕ್ಕಳು ಸಾವನ್ನಪ್ಪಿದ್ದರು:

ತಮ್ಮ ಜನನದ ಹಿಂದಿನ ಕಣ್ಣೀರ ಕಥೆಯನ್ನು ಬಿಚ್ಚಿಟ್ಟ ಮಾಜಿ ಪ್ರಧಾನಿಗಳು, 'ನಮ್ಮ ತಂದೆಯ ಮೊದಲ ಹೆಂಡತಿಗೆ ಹುಟ್ಟಿದ ಮೂವರು ಮಕ್ಕಳೂ ಅಕಾಲಿಕವಾಗಿ ತೀರಿಹೋದರು. ಮಕ್ಕಳ ಸಾವಿನ ಬಳಿಕ ತಂದೆಯವರು ಎರಡನೇ ಮದುವೆಯಾದರು (ದೇವೇಗೌಡರ ತಾಯಿ). ಪುತ್ರ ಸಂತಾನಕ್ಕಾಗಿ ನಮ್ಮ ತಂದೆ-ತಾಯಿ ಊರಿನ ದೇವಸ್ಥಾನ ಹಾಗೂ ಈ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿಯ ಸನ್ನಿಧಿಗೆ ಬಂದು ಹರಕೆ ಹೊತ್ತು ಪೂಜೆ ಸಲ್ಲಿಸುತ್ತಿದ್ದರು. ಅವರ ಪ್ರಾರ್ಥನೆಯ ಫಲವಾಗಿ ನಾನು ಜನಿಸಿದೆ. ಹಾಗಾಗಿ ನಾನು ಎರಡನೇ ಹೆಂಡತಿಯ ಮಗ' ಎಂದು ಭಾವುಕರಾಗಿ ತಿಳಿಸಿದರು.

ಅತ್ಯಂತ ಪುರಾತನ ಮತ್ತು ಶಕ್ತಿಶಾಲಿ ಪುಣ್ಯಕ್ಷೇತ್ರ:

ಮಾವಿನಕೆರೆ ಬೆಟ್ಟವು ಅತ್ಯಂತ ಪುರಾತನ ಹಾಗೂ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ. ಇಲ್ಲಿನ ರಂಗನಾಥ ಸ್ವಾಮಿಯ ಕೃಪೆಯಿಂದಲೇ ನಮ್ಮ ಕುಟುಂಬ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂಬ ಅಚಲ ನಂಬಿಕೆ ನನಗಿದೆ. ಆ ಕಾರಣಕ್ಕಾಗಿಯೇ ಎಷ್ಟೇ ವಯಸ್ಸಾದರೂ, ಯಾವುದೇ ಪರಿಸ್ಥಿತಿಯಲ್ಲೂ ಪ್ರತಿ ವರ್ಷ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುವುದನ್ನು ಮುಂದುವರಿಸಿದ್ದೇನೆ ಎಂದು ದೇವೇಗೌಡರು ಹೇಳಿದರು.

PREV
Read more Articles on
click me!

Recommended Stories

ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್‌: ಬೇಡಿಕೆ ಮೇರೆಗೆ ಎರಡು ಹೊಸ ರೈಲುಗಳ ಘೋಷಣೆ...! ಇಲ್ಲಿದೆ ನೋಡಿ ಸಂಪೂರ್ಣ ರೈಲ್ವೆ ವೇಳಾಪಟ್ಟಿ
ಬಾಡಿಗೆದಾರರ ಆಧಾರ್ ಕಾರ್ಡ್‌ ಬಳಸಿ ₹4 ಲಕ್ಷ ಸಾಲ ಪಡೆದ ಮನೆ ಮಾಲೀಕ! ಬ್ಯಾಂಕ್‌ ನೋಟೀಸ್ ನೋಡಿ ಕುಟುಂಬ ಶಾಕ್!