
ಬೆಂಗಳೂರು (ಜೂ.10): ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಯಾವ ಕಾನೂನಿನ ಅಡಿ ಪರವಾನಗಿ ನೀಡಲಾಗುತ್ತಿದೆ ಮತ್ತು ಪರವಾನಗಿ ನೀಡುವ ಪ್ರಾಧಿಕಾರದ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಬೆಂಗಳೂರಿನ ಕೆಲವು ಮಸೀದಿಗಳು ಧ್ವನಿವರ್ಧಗಳ ಬಳಕೆ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಿ ಪಿ.ರಾಕೇಶ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ. ಮಸೀದಿಗಳಲ್ಲಿ ಯಾವ ಕಾನೂನಿನ ಅಡಿ ಧ್ವನಿವರ್ಧಕ ಬಳಕೆಗೆ ಶಾಶ್ವತ ಪರವಾನಗಿ ನೀಡಬಹುದಾಗಿದೆ ಎಂಬ ವಿಚಾರ ನ್ಯಾಯಾಲಯದ ಮುಂದಿದೆ.
ಯಾವುದೇ ವ್ಯಕ್ತಿ ಅಥವಾ ಯಾರ ವಿರುದ್ಧವೂ ಅಲ್ಲ. ಇನ್ನೂ ಧ್ವನಿವರ್ಧಕ ಬಳಸಲು ಯಾರಿಗೆ ಅನುಮತಿಸಬೇಕು ಅಥವಾ ಅನುಮತಿಸಬಾರದು ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ಅದು ಕಾನೂನಿನ ಪ್ರಕಾರ ಇರಬೇಕು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಯಾವ ಕಾನೂನಿನಡಿ ಧ್ವನಿವರ್ಧಕ ಬಳಕೆಗೆ ಪರವಾನಗಿ ನೀಡಲಾಗುತ್ತಿದೆ. ಪರವಾನಗಿ ನೀಡುವ ಪ್ರಾಧಿಕಾರ ಯಾವುದು. ಎಷ್ಟು ದಿನಗಳ ಮಟ್ಟಿಗೆ ಪರವಾನಗಿ ನೀಡಬಹುದಾಗಿದೆ. ಶಾಶ್ವತವಾಗಿ ಧ್ವನಿವರ್ಧಕ ಬಳಸಲು ಅನುಮತಿ ನೀಡಬಹುದೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ.
ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ: ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆಯೇ ಯೋಜನೆ?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಪೊಲೀಸರು ಮಸೀದಿಗಳಲ್ಲಿ ಧ್ವನಿ ವರ್ಧಕಗಳನ್ನು ಬಳಸಲು ಪರವಾನಗಿ ನೀಡುತ್ತಿದ್ದಾರೆ. ಇನ್ನೂ ಅಕ್ರಮವಾಗಿ ಧ್ವನಿವರ್ಧಕ ಬಳಕೆ ಮಾಡಿದರೂ ದಂಡ ವಿಧಿಸುತ್ತಿಲ್ಲ ಮತ್ತು ಧ್ವನಿವರ್ಧಕಗಳನ್ನು ವಶಕ್ಕೆ ಪಡೆಯುತ್ತಿಲ್ಲ. ಎಷ್ಟು ಧ್ವನಿವರ್ಧಕಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಎಷ್ಟು ದಂಡ ವಸೂಲಿ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಗೋಶಾಲೆ ಆರಂಭಿಸುವುದು ಪಂಚವಾರ್ಷಿಯ ಯೋಜನೆಯೇ?: ಸರ್ಕಾರಕ್ಕೆ ಛಾಟಿ ಬೀಸಿದ ಹೈಕೋರ್ಟ್
ಪ್ರತಿವಾದಿಗಳಾಗಿರುವ ಮಸೀದಿಗಳನ್ನು ಪ್ರತಿನಿಧಿದ್ದ ವಕೀಲರು, ತಮ್ಮ ಕಕ್ಷಿದಾರರು ಧ್ವನಿವರ್ಧಕ ಬಳಸಲು ಅನುಮತಿ ಪಡೆದಿದ್ದಾರೆ. ವಕ್ಫ್ ಮಂಡಳಿಯು ಅನುಮತಿ ನೀಡಿದೆ ಎಂದು ನ್ಯಾಯಪೀಠ ತಿಳಿಸಿದರು.ಸರ್ಕಾರಿ ವಕೀಲರು ವಸ್ತು ಸ್ಥಿತಿ ವರದಿ ಸಲ್ಲಿಸಿ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಕೆಲ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ನಿಲ್ಲಿಸಲಾಗಿದೆ. ಹಾಗೆಯೇ, ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರಲ್ಲದೆ ಅರ್ಜಿದಾರರ ವಾದಕ್ಕೆ ಉತ್ತರಿಸಲು ಕಾಲಾವಕಾಶ ನೀಡುವಂತೆ ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಜೂ.20ಕ್ಕೆ ಮುಂದೂಡಿದೆ.