ಬ್ಯಾಲೆಟ್ ಪೇಪರ್‌ನಲ್ಲೂ ವೋಟ್‌ ಚೋರಿ: ಹಾವೇರಿಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆ ನಕಲಿ ಮತದಾನ!

Published : Oct 24, 2026, 04:37 PM IST
Haveri Election Vote Chori

ಸಾರಾಂಶ

ಹಾವೇರಿಯಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿಯ ಹೆಸರಿನಲ್ಲಿ ನಕಲಿ ಮತದಾನ ನಡೆದಿದೆ. ಕಾಂಗ್ರೆಸ್ ಮಹಿಳಾ ಮುಖಂಡೆ ಶಿಲ್ಪಾ ಬಡಮ್ಮನವರ್ ಈ ಕೃತ್ಯವೆಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹಾವೇರಿ (ಅ.24): ಇವಿಎಂನಲ್ಲಿ ವೋಟ್‌ ಚೋರಿ ಅಂದರೆ ಮತಕಳ್ಳತನ ಆಗುತ್ತಿದೆ ಎಂದು ದೇಶಾದ್ಯಂತ ಒಂದೇ ಕೂಗಿನಲ್ಲಿ ಆರೋಪಿಸುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ತರುವ ಘಟನೆ ಕರ್ನಾಟಕದಲ್ಲಿ ನಡೆದಿದೆ. ಬ್ಯಾಲಟ್‌ ಪೇಪರ್‌ನಲ್ಲಿ ನಡೆದ ಚುನಾವಣೆಯಲ್ಲೂ ವೋಟ್‌ ಚೋರಿ ಆಗಿದ್ದು, ಸ್ವತಃ ಕಾಂಗ್ರೆದ್ ಕಾರ್ಯಕರ್ತೆಯಿಂದಲೇ ನಕಲಿ ಮತದಾನವಾಗಿದೆ. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ವೇಳೆ ಹಾವೇರಿಯಲ್ಲಿ ಆಘಾತಕಾರಿ ನಕಲಿ ಮತದಾನದ (Bogus Voting) ಆರೋಪ ಕೇಳಿಬಂದಿದ್ದು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಹೆಸರಿನಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡೆಯೊಬ್ಬರು ನಕಲಿ ಮತ ಚಲಾಯಿಸಿದ್ದಾರೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ.

ಹಾವೇರಿ ನಗರದ ಬಸವೇಶ್ವರ ನಗರದ ನಿವಾಸಿಯಾಗಿರುವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಆಶಾ ಪಾಟೀಲ್ ಅವರ ಹೆಸರಿನಲ್ಲಿ, ಕಾಂಗ್ರೆಸ್ ಎಸ್‌ಟಿ ಮೋರ್ಚಾ ಲೀಡರ್ ಆಗಿರುವ ಶಿಲ್ಪಾ ಬಡಮ್ಮನವರ್ ಎಂಬುವವರು ಮತ ಚಲಾಯಿಸಿದ್ದಾರೆ ಎನ್ನಲಾಗಿದೆ.

ಮತಗಟ್ಟೆ ಸಂಖ್ಯೆ 85ರಲ್ಲಿ ನಡೆದಿದ್ದೇನು?

ಹಾವೇರಿಯ ಮತಗಟ್ಟೆ ಸಂಖ್ಯೆ 85ರಲ್ಲಿ ಈ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಮತಗಟ್ಟೆಯ ಸಿಬ್ಬಂದಿ ಮತದಾರರ ಪಟ್ಟಿಯಲ್ಲಿದ್ದ ಆಶಾ ಪಾಟೀಲ್ ಅವರ ಹೆಸರನ್ನು ಕೂಗುತ್ತಿದ್ದಂತೆ, ಅಲ್ಲಿಯೇ ಇದ್ದ ಶಿಲ್ಪಾ ಬಡಮ್ಮನವರ್ ಅವರು ಮುಂದೆ ಹೋಗಿ ಆಶಾ ಪಾಟೀಲ್ ಅವರ ಹೆಸರಿನಲ್ಲಿ ಮತ ಚಲಾಯಿಸಿದ್ದಾರೆ. ಮೂಲಗಳ ಪ್ರಕಾರ, ಶಿಲ್ಪಾ ಬಡಮ್ಮನವರ್ ಅವರಿಗೆ ಪದವೀಧರ ಮತದಾನದ ಹಕ್ಕೇ ಇಲ್ಲದಿದ್ದರೂ ಸಹ ಅವರು ನಕಲಿ ದಾಖಲೆ/ಗುರುತಿನ ಆಧಾರದಲ್ಲಿ ಮತದಾನ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸಚಿವ ರುದ್ರಪ್ಪ ಲಮಾಣಿ ಅವರು ಮತದಾನ ಮಾಡಲು ಬಂದಾಗ ಅವರ ಸಾಲಿನಲ್ಲಿಯೇ ಈ ಶಿಲ್ಪಾ ಬಡಮ್ಮನವರ್ ಕೂಡ ನಿಂತಿದ್ದರು. ಸಚಿವರು ಮತ ಚಲಾಯಿಸಿ ಹೊರಬಂದ ಬೆನ್ನಲ್ಲೇ ಈ ಮಹಿಳೆ ನಕಲಿ ಮತದಾನ ಮಾಡಿದ್ದಾರೆ ಎನ್ನಲಾಗಿದ್ದು, ಸಚಿವರ ಜೊತೆ ಸರತಿ ಸಾಲಿನಲ್ಲಿ ನಿಂತಿದ್ದ ಚಿತ್ರಗಳು ಹಾಗೂ ವಿಡಿಯೋಗಳು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ನೈಜ ಮತದಾರರನ್ನು ವಂಚಿಸಿ ಬೇರೆಯವರಿಂದ ಮತದಾನ ಮಾಡಿಸಿರುವ ಈ ಕೃತ್ಯದ ಕುರಿತು ಮತಗಟ್ಟೆ ಸಂಖ್ಯೆ 85 ರ ಆವರಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಸಮಗ್ರ ತನಿಖೆಗೆ ಒತ್ತಾಯ ಕೇಳಿಬಂದಿದೆ.

ಅಕ್ರಮ ನಡೆದಿದ್ದರೆ ತನಿಖೆಯಾಗಲಿ, ನಾವೂ ದೂರು ನೀಡುತ್ತೇವೆ: ಸಂಜೀವಕುಮಾರ ನೀರಲಗಿ

ಈ ನಕಲಿ ಮತದಾನದ ವಿವಾದ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಹಾವೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಘಟನೆಯ ಸಂಪೂರ್ಣ ವಿವರ ತಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

"ಮತದಾನದ ದಿನದಂದು ನಾನು ಮತ ಚಲಾಯಿಸಿದ ನಂತರ ಕ್ಷೇತ್ರದ ಇತರೆ ಭಾಗಗಳಲ್ಲಿ ಪ್ರಚಾರ ಹಾಗೂ ಪರಿಶೀಲನೆಗೆ ತೆರಳಿದ್ದೆ. ನಮ್ಮ ಕುಟುಂಬದವರ ಆರೋಗ್ಯ ಸರಿ ಇಲ್ಲದ ಕಾರಣ ಅವರು ಮನೆಯಲ್ಲೇ ಇದ್ದರು, ಮತಗಟ್ಟೆಗೆ ಬಂದಿರಲಿಲ್ಲ. ನಮ್ಮ ಪತ್ನಿ ಆಶಾ ಪಾಟೀಲ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಯಾರಾದರೂ ನಕಲಿ ಮತದಾನ ಮಾಡಿದ್ದರೆ, ಅದರ ವಿರುದ್ಧ ಖಂಡಿತವಾಗಿ ತನಿಖೆಯಾಗಬೇಕು" ಎಂದು ಆಗ್ರಹಿಸಿದರು.

ಶಿಲ್ಪಾ ಬಡಮ್ಮನವರ್ ಮತ ಹಾಕಿರುವ ವಿಷಯ ನನಗೆ ಗೊತ್ತಿರಲಿಲ್ಲ. ವಕೀಲರ ಜೊತೆ ಚರ್ಚಿಸಿ ಈ ನಕಲಿ ಮತದಾನದ ವಿರುದ್ಧ ನಾನೇ ಖುದ್ದಾಗಿ ದೂರು ಸಲ್ಲಿಸುತ್ತೇನೆ. ಇದರಲ್ಲಿ ಸಚಿವ ರುದ್ರಪ್ಪ ಲಮಾಣಿ ಅವರ ಯಾವುದೇ ಪಾತ್ರವಿಲ್ಲ. ನಾಯಕರ ಪಕ್ಕ ಯಾರೇ ನಿಂತರೂ ಫೋಟೋ ತೆಗೆದುಕೊಳ್ಳುತ್ತಾರೆ. ನಮಗೂ ಈ ರೀತಿ ಅಕ್ರಮ ನಡೆದಿರುವುದು ಭಾರಿ ಆಶ್ಚರ್ಯ ತಂದಿದೆ. ಮತಗಟ್ಟೆ ಅಧಿಕಾರಿಗಳು ವೋಟರ್ ಐಡಿ ಸರಿಯಾಗಿ ಪರಿಶೀಲಿಸಿ ಬಿಡಬೇಕಿತ್ತು, ಅವರನ್ನು ಹೇಗೆ ಒಳಗೆ ಬಿಟ್ಟರು ಗೊತ್ತಿಲ್ಲ ಎಂದು ಚುನಾವಣಾಧಿಕಾರಿ ಮೇಲೆಯೂ ನೀರಲಗಿ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಮತವನ್ನು ಬೇರೆಯವರು ಕದ್ದು ಹಾಕಿದ್ದಾರೆ ಎಂದರೆ ನಾವು ಅದನ್ನು ಎಂದಿಗೂ ಸಹಿಸುವುದಿಲ್ಲ, ತೀವ್ರವಾಗಿ ವಿರೋಧಿಸುತ್ತೇವೆ. ವೋಟ್ ಚೋರಿ ವಿರುದ್ಧ ಸದಾ ಹೋರಾಟ ಮಾಡಿದವರು ನಾವು. ಹೀಗಾಗಿ ಈ ಪ್ರಕರಣದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದು, ಖಂಡಿತವಾಗಿ ಸತ್ಯಾಸತ್ಯತೆ ಹೊರಬರಲು ಪೂರ್ಣ ತನಿಖೆಯಾಗಬೇಕು ಎಂದು ಸಂಜೀವಕುಮಾರ ನೀರಲಗಿ ಸ್ಪಷ್ಟಪಡಿಸಿದ್ದಾರೆ.

PREV
Read more Articles on
click me!

Recommended Stories

Namma Metro ಹಳದಿ ಲೈನ್​ಗೆ ಜಯಲಲಿತಾ, ಕರುಣಾನಿಧಿ ಹೆಸರಿಡ್ತೀರಾ? ಕನ್ನಡ ಸಂಘಟನೆಗಳಿಂದ ಭಾರಿ ವಿರೋಧ
ದರ್ಶನ್ ಜೈಲಿನಲ್ಲಿ ಅಸಹಾಯಕರಾಗಿದ್ದಾರೆ, ವಿಜಯಲಕ್ಷ್ಮಿ -ಧನ್ವೀರ್ ಬೀದಿ ಜಗಳ ಬೆನ್ನಲ್ಲೇ ನಟನ ಸ್ಫೋಟಕ ಮಾತು