
ಉಡುಪಿ: ಕಾಕ್ರೋಚ್ ಜನತಾ ಪಾರ್ಟಿಯ ಕುರಿತಂತೆ ತಮ್ಮ ಹೇಳಿಕೆಗೆ ಬಿಜೆಪಿಯಿಂದ ತೀವ್ರ ವಾಗ್ದಾಳಿ ಕೇಳಿ ಬರುತ್ತಿದ್ದಂತೆ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಮತ್ತೊಮ್ಮೆ ಕೇಂದ್ರ ಸರ್ಕಾರ ನಿರ್ಧಾರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು, ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಸರ್ಕಾರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿ ದ ಲೀಡರ್ಸ್ ಮೂವ್ ಮೆಂಟ್ ಮುಖ್ಯಸ್ಥ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಯುಪಿಐ ಟ್ರಾನ್ಸಾಕ್ಷನ್ ಗೆ ತೆರಿಗೆ ವಿಚಾರವಾಗಿ ಮಾತನಾಡಿದ್ದು, ಓರ್ವ ಗ್ರಾಹಕನಾಗಿ ಮತ್ತು ಒಬ್ಬ ನಾಗರಿಕನಾಗಿ ನನ್ನ ಅಭಿಪ್ರಾಯ ಹೇಳಬಯಸುತ್ತೇನೆ. ಆಗಸ್ಟ್ 2026 ವರೆಗೆ, ಯುಪಿಐ ಮೂಲಕ 30 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಪ್ರಪಂಚದಲ್ಲಿ ನಮ್ಮ ದೇಶ ಅತಿ ದೊಡ್ಡ ವ್ಯವಹಾರ ದಾಖಲಿಸಿದೆ. ಯುಪಿಐ ಬಳಕೆ ಬಗ್ಗೆ ಹಿಂದಿನ ಆರ್ಥಿಕ ಸಚಿವರು ಸಂಶಯ ಕೂಡ ವ್ಯಕ್ತಪಡಿಸಿದ್ದರು. ಆದರೆ ಭಾರತೀಯರು ಅತಿ ಹೆಚ್ಚು ಯುಪಿಐ ಬಳಕೆ ದಾಖಲಿಸಿದ್ದಾರೆ. ಯುಪಿಐ ಮೂಲಕ ಆರ್ಥಿಕ ಚಟುವಟಿಕೆ ಸಂಪೂರ್ಣ ಉಚಿತವಾದ ಕಾರಣ ಇಷ್ಟು ವೇಗವಾಗಿ ಅದು ಬೆಳೆದಿದೆ, ಆದರೆ ಈಗ ತೆರಿಗೆ ಬಗ್ಗೆ ಮಾತನಾಡಲಾಗುತ್ತದೆ. ಕೇವಲ ಶೇಕಡಾ 4 ರಷ್ಟು ಬಳಕೆದಾರರಿಗೆ ಇದು ಸಮಸ್ಯೆಯಾಗುತ್ತೆ ಎಂದು ಹೇಳಲಾಗುತ್ತೆ. ಈ ಶೇಕಡಾ 4ರಷ್ಟು ಗ್ರಾಹಕರಿಂದ, ಶೇಕಡಾ 67 ರಷ್ಟು ಆರ್ಥಿಕ ವ್ಯವಹಾರಕ್ಕೆ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.
ಇದು ಅತಿ ದೊಡ್ಡ ಮೊತ್ತವಾಗಿದೆ. ನಮ್ಮ ದೇಶದಲ್ಲಿ ಈ ರೀತಿಯ ನಿರ್ಧಾರಗಳಿಗೆ ಮತ್ತಷ್ಟು ಸಮಯ ಬೇಕು. ಈ ಮೂಲಕ 15,000 ಕೋಟಿ ಸಂಗ್ರಹ ಉದ್ದೇಶ ಹೊಂದಲಾಗಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಆದಾಯ ಇಲ್ಲ ಎಂದು ಆರ್ಥಿಕ ಸಚಿವೆ ಹೇಳಿದ್ದಾರೆ. ಯುಪಿಐ ವ್ಯವಹಾರ ನಡೆಸಲು ಸರಕಾರದ ಖಜಾನೆಯಿಂದ ಹಣ ಹೋಗುತ್ತೆ ಎಂದು ಸರಕಾರ ಹೇಳುತ್ತದೆ. ಆದರೆ ಸರಕಾರ ದೇಶದ ಆರ್ಥಿಕತೆಯನ್ನು ಉತ್ತಮಗೊಳಿಸಲು ಇದು ಹೂಡಿಕೆ ಎಂದು ಭಾವಿಸಲು ಸಾಧ್ಯವಿಲ್ಲವೇ? 50 ಲಕ್ಷ ಕೋಟಿಯ ನಮ್ಮ ದೇಶದ ಬಜೆಟ್ ನಲ್ಲಿ ಕೇವಲ 15 ಸಾವಿರ ಕೋಟಿ ಯುಪಿಐ ವ್ಯವಹಾರಕ್ಕೆ ಸರಕಾರ ವಿನಿಯೋಗಿಸಲು ಸಾಧ್ಯವಿಲ್ಲವೇ ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ.
ವ್ಯಾಪಾರಿಗಳು ಮತ್ತು ಗ್ರಾಹಕರ ಪ್ರಯತ್ನದಿಂದ ಯುಪಿಐ ತೆರಿಗೆ ರದ್ದಾದರೆ ಉತ್ತಮ. ಇದು ಈ ರೀತಿ ತೆರಿಗೆ ಹೇರಲು ಸಕಾಲವಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಸರಕಾರ ಪ್ರತಿಯೊಬ್ಬರ ಅಭಿಪ್ರಾಯ ಕೇಳುತ್ತದೆ. ದೀಪಾವಳಿ ನಂತರ ಗುಡ್ ನ್ಯೂಸ್ ಸಿಗಲಿ ಎಂದು ಆಶಿಸುತ್ತೇನೆ. ಭಾರತ ದೇಶ ಶೇಕಡಾ 100 ಯುಪಿಐ ಬಳಕೆದಾರರ ರಾಷ್ಟ್ರವಾಗಲಿ. ತನ್ನ ನಿರ್ಧಾರವನ್ನು ಸರಕಾರ ಮರುಪರಿಶೀಲಿಸಬೇಕು. ಐದು ಹತ್ತು ವರ್ಷಗಳ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು, ನಾನು ಕೇಳುವ ಪ್ರಶ್ನೆಯನ್ನು ಜನರು ಕೇಳುವಂತಾಗಲಿ ಎಂದು ಮಾಜಿ ಐಪಿಎಲ್ ಅಧಿಕಾರಿ ತಿಳಿಸಿದ್ದಾರೆ.