ಅಪ್ಪನ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬರುತ್ತಿದ್ದ ಮಗ, ಅರ್ಧದಾರಿ ಮಧ್ಯದಲ್ಲೇ ದುರ್ಮರಣ!

Published : Jan 01, 2026, 12:26 PM IST
Haveri Crime Update

ಸಾರಾಂಶ

ಹಾವೇರಿ ಜಿಲ್ಲೆಯ ಹೊಂಬರಡಿ ಗ್ರಾಮದಲ್ಲಿ ಒಂದೇ ದಿನದಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ವಯೋಸಹಜ ಕಾಯಿಲೆಯಿಂದ ತಂದೆ ಮೃತಪಟ್ಟರೆ, ಅವರ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದ ಮಗನನ್ನು ಕುಡಿದ ಮತ್ತಿನಲ್ಲಿದ್ದ ಸ್ನೇಹಿತನೇ ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಹಾವೇರಿ (ಜ.01): ಒಂದೇ ದಿನದಲ್ಲಿ ತಂದೆ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ ಘಟನೆಯಿಂದ ಹಾವೇರಿ ಜಿಲ್ಲೆಯ ಹೊಂಬರಡಿ ಗ್ರಾಮವು ಶೋಕಸಾಗರದಲ್ಲಿ ಮುಳುಗಿದೆ. ಬುಧವಾರವಷ್ಟೇ ನಿಧನರಾದ ತಂದೆಯ ಅಂತ್ಯಕ್ರಿಯೆಯನ್ನು ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಮಗನನ್ನು, ಕುಡಿತದ ಗೆಳೆಯನೇ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ

ಹೊಂಬರಡಿ ಗ್ರಾಮದ ಮಂಜುನಾಥ ಮುದ್ದಿಯವರ (40) ಎಂಬುವವರೇ ಕೊಲೆಯಾದ ದುರ್ದೈವಿ. ಮಂಜುನಾಥ್ ಅವರ ತಂದೆ ರಾಜೇಂದ್ರ ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ನಿಧನರಾಗಿದ್ದರು. ತಂದೆಯ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಪೂರೈಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಮಾರ್ಗಮಧ್ಯೆ ಮಂಜುನಾಥ್ ತನ್ನ ಸ್ನೇಹಿತ ಶಿವಕುಮಾರ ಶಿವಪುರ ಎಂಬಾತನೊಂದಿಗೆ ಸಿಕ್ಕಿದ್ದಾರೆ. ಈ ವೇಳೆ ಇಬ್ಬರೂ ಮದ್ಯಪಾನ ಮಾಡಿದ್ದು, ನಶೆಯಲ್ಲಿದ್ದಾಗ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜೋರಾಗಿ ಮಾತಿನ ಚಕಮಕಿ ಆರಂಭವಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಶಿವಕುಮಾರ್, ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಮಂಜುನಾಥ್ ಅವರ ಮುಖ ಮತ್ತು ತಲೆಯ ಮೇಲೆ ಮನಬಂದಂತೆ ಜಜ್ಜಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಮಂಜುನಾಥ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಪೊಲೀಸ್ ಭೇಟಿ

ವಿಷಯ ತಿಳಿಯುತ್ತಿದ್ದಂತೆಯೇ ಹಾವೇರಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ತಸಿಕ್ತ ಕಲ್ಲು ಮತ್ತು ಮೃತದೇಹವನ್ನು ಕಂಡು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ತಂದೆಯನ್ನು ಕಳೆದುಕೊಂಡ ಕುಟುಂಬ, ಮಗನನ್ನೂ ಕಳೆದುಕೊಂಡು ಈಗ ಅಕ್ಷರಶಃ ಬೀದಿಗೆ ಬಿದ್ದಂತಾಗಿದೆ. ಸದ್ಯ ಆರೋಪಿ ಶಿವಕುಮಾರ್ ಶಿವಪುರ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಈ ಬಗ್ಗೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

PREV
Read more Articles on
click me!

Recommended Stories

ಹೊಸ ವರ್ಷಕ್ಕೆ ಒಂದೇ ದಿನದಲ್ಲಿ ನಮ್ಮ ಮೆಟ್ರೋಗೆ ಕೋಟಿ ಕೋಟಿ ಆದಾಯ
ಯುವತಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್‌ ಮಾಡಿದ್ದಕ್ಕೆ ಯುವಕನ ಹತ್ಯೆ, ಬೆಚ್ಚಿಬಿದ್ದ ಚಿಕ್ಕಮಗಳೂರು!