
ಹಾವೇರಿ: ಪಿಂಚಣಿ ಹಣಕ್ಕಾಗಿ ಸಹೋದರಿಯನ್ನೇ ಮನೆಯೊಳಗೆ ಗೃಹಬಂಧನದಲ್ಲಿಟ್ಟ ಅಣ್ಣಂದಿರ ಅಮಾನುಷ ವರ್ತನೆ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ನಡೆದಿದೆ. ಬುಜಂಬಿ ಕೆ. ಕೋಟಿ ಎಂಬ ಮಹಿಳೆಯನ್ನ ಅವರಿಬ್ಬರು ಸಹೋದರರಾದ ಮಾಬುಸಾಬ್ ಮತ್ತು ಸಂಶುದ್ದೀನ್ ಕಳೆದ ನಾಲ್ಕು ತಿಂಗಳಿನಿಂದ ಮನೆಯೊಳಗೆ ಬಂಧನದಲ್ಲಿಟ್ಟಿದ್ದರು ಎಂದು ಆರೋಪಿಸಲಾಗಿದೆ. ಮಹಿಳೆಯ ಮೊಬೈಲ್ ಫೋನ್, ಎಟಿಎಂ ಕಾರ್ಡ್ ಹಾಗೂ ಚಿನ್ನಾಭರಣವನ್ನು ಕಿತ್ತುಕೊಂಡು, ಆಕೆಯನ್ನು ಹೊರ ಜಗತ್ತಿನಿಂದ ಸಂಪೂರ್ಣವಾಗಿ ದೂರ ಇಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಬುಜಂಬಿ ಅವರ ತಂದೆ ರೈಲ್ವೇ ಇಲಾಖೆಯಲ್ಲಿ ನೌಕರರಾಗಿದ್ದು, ನಿವೃತ್ತಿಯ ನಂತರ ಪಿಂಚಣಿ ಹಣವನ್ನು ಪತ್ನಿಗೆ ನೀಡಲಾಗುತ್ತಿತ್ತು. ಅವರ ತಾಯಿಯ ಮರಣದ ಬಳಿಕ ಪಿಂಚಣಿ ಹಣ ಬುಜಂಬಿಯ ಹೆಸರಿಗೆ ಬರುವಂತಾಗಿತ್ತು. ತಿಂಗಳಿಗೆ ₹13,500 ಪಿಂಚಣಿ ಹಣಕ್ಕಾಗಿ ಅಣ್ಣಂದಿರಿಬ್ಬರು ಮಹಿಳೆಯನ್ನು ಮನೆಯೊಳಗೆ ಬಂಧಿಸಿದ್ದರು ಎಂದು ಬುಜಂಬಿ ಪೊಲೀಸರಿಗೆ ತಿಳಿಸಿದ್ದಾರೆ. ತಾಯಿಯ ಮರಣದ ಬಳಿಕ ಪಿಂಚಣಿ ಹಣ ನನಗೆ ಬರತಿತ್ತು. ಅದಕ್ಕಾಗಿ ಅಣ್ಣಂದಿರಿಬ್ಬರು ನನ್ನನ್ನು ಮನೆಯೊಳಗೆ ಕೂಡಿ ಹಾಕಿದ್ದರು. ನನ್ನ ಸ್ವಾತಂತ್ರ್ಯ ಕಿತ್ತುಕೊಂಡು ನಾಲ್ಕು ತಿಂಗಳು ನರಕದ ಜೀವನ ನಡೆಸಬೇಕಾಯಿತು ಎಂದು ಬುಜಂಬಿ ಕಣ್ಣೀರಿಟ್ಟಿದ್ದಾರೆ.
ಈ ಕುರಿತಂತೆ ಬುಜಂಬಿ ಪೊಲೀಸರು ಗಮನಕ್ಕೆ ತಂದರೂ, ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಪಾಡಿಗೆ ನನ್ನನ್ನು ಬದುಕಲು ಬಿಡಿ ಎಂದು ಎಷ್ಟು ಹೇಳಿದರೂ ಯಾರೂ ಕೇಳಲಿಲ್ಲ. ಸಹೋದರರಿಂದ ತಪ್ಪಿಸಿಕೊಂಡು ನಾನು ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದೇನೆ. ನನಗೆ ನ್ಯಾಯ ಸಿಗುವಂತೆ ಮಾಡಿ ಎಂದು ನೊಂದ ಮಹಿಳೆ ಅಳುತ್ತಾ ವಿನಂತಿಸಿಕೊಂಡಿದ್ದಾರೆ.
ನಾಲ್ಕು ತಿಂಗಳ ಗೃಹಬಂಧನದಿಂದ ತಪ್ಪಿಸಿಕೊಂಡ ಬುಜಂಬಿ ಅವರು ನೇರವಾಗಿ ಹಾವೇರಿಯ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸಹೋದರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಘಟನೆ ಗಂಭೀರತೆಯನ್ನು ಪರಿಗಣಿಸಿ ಸ್ಥಳೀಯರು ಕೂಡ ಆಘಾತ ವ್ಯಕ್ತಪಡಿಸಿದ್ದು, ಮಹಿಳೆಗೆ ತಕ್ಷಣ ನ್ಯಾಯ ಒದಗಿಸಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ಘಟನೆ ಪಿಂಚಣಿ ಹಣದಂತಹ ಸಣ್ಣ ಆರ್ಥಿಕ ವಿಷಯಗಳಿಗೂ ಕೆಲವರು ಹೇಗೆ ಅತಿರೇಕದ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಮಹಿಳೆಯ ಸುರಕ್ಷತೆ ಹಾಗೂ ಕಾನೂನು ರಕ್ಷಣೆ ಕುರಿತು ಚರ್ಚೆ ಹುಟ್ಟುಹಾಕಿದೆ.