ಪೊಲೀಸಪ್ಪನೇ ಕಳ್ಳರ ಗ್ಯಾಂಗ್ ಲೀಡರ್, ತನ್ನದೇ ಸ್ಟೇಷನ್ ಕಂಬಿ ಹಿಂದೆ ಕಾನ್‌ಸ್ಟೇಬಲ್: ಗೌಡರ ಮನೆ ಕಳ್ಳತನ ಕೇಸ್‌ಗೆ ಟ್ವಿಸ್ಟ್!

Published : Feb 07, 2026, 09:38 PM IST
Haveri Police Pradeep Naik Arrest

ಸಾರಾಂಶ

ಸಾರ್ವಜನಿಕರ ಆಸ್ತಿ ರಕ್ಷಿಸಬೇಕಾದ ಪೊಲೀಸ್ ಕಾನ್ಸ್‌ಟೇಬಲ್ ಓರ್ವನೇ ಕಳ್ಳರ ತಂಡಕ್ಕೆ ನಾಯಕನಾಗಿ ತೋಟದ ಮನೆಯಲ್ಲಿ ದರೋಡೆ ಮಾಡಿಸಿದ್ದಾನೆ. ಗ್ರಾಮದ ಅಳಿಯನಾಗಿದ್ದ ಈತ,  ಕಳ್ಳತನಕ್ಕೆ ಪಕ್ಕಾ ಸ್ಕೆಚ್ ಹಾಕಿಕೊಟ್ಟಿದ್ದು, ಇದೀಗ ಐವರು ಆರೋಪಿಗಳ ಸಹಿತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹಾವೇರಿ (ಫೆ.07): 'ರಕ್ಷಕರೇ ಭಕ್ಷಕರಾದರೆ ಹೇಗೆ?' ಎಂಬ ಮಾತು ಹಾವೇರಿ ಜಿಲ್ಲೆಯಲ್ಲಿ ನಡೆದ ಈ ಪ್ರಕರಣಕ್ಕೆ ಅಕ್ಷರಶಃ ಕನ್ನಡಿ ಹಿಡಿದಂತಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್ ಒಬ್ಬನೇ, ಕಳ್ಳರ ತಂಡಕ್ಕೆ ಗುರುವಾಗಿ ನಿಂತು ತೋಟದ ಮನೆಯೊಂದರಲ್ಲಿ ಭರ್ಜರಿ ಕಳ್ಳತನ ಮಾಡಿಸಲು 'ಮಾಸ್ಟರ್ ಮೈಂಡ್' ಆಗಿ ಕೆಲಸ ಮಾಡಿರುವ ಆಘಾತಕಾರಿ ಘಟನೆ ಹಿರೇಕೆರೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಳೆ ನಿಡುನೇಗಿಲು ಗ್ರಾಮದಲ್ಲಿ ಕಳೆದ ಜನವರಿ 19 ರಂದು ರಾತ್ರಿ 11.30ರ ಸುಮಾರಿಗೆ ಭಾರೀ ಕಳ್ಳತನ ನಡೆದಿತ್ತು. ಊರಿನ ಹೊರವಲಯದಲ್ಲಿರುವ ಮಲ್ಲನಗೌಡ ಈಶ್ವರಗೌಡ ಪಾಟೀಲ್ ಎಂಬುವವರ ತೋಟದ ಮನೆಯನ್ನು ಗುರಿಯಾಗಿಸಿಕೊಂಡಿದ್ದ ಕಳ್ಳರು, ಮನೆಯ ಹಿಂದಿನ ಬಾಗಿಲ ಲಾಕ್ ಮುರಿದು ಒಳನುಗ್ಗಿದ್ದರು. ಮನೆಯಲ್ಲಿದ್ದ ಬರೋಬ್ಬರಿ 9 ತೊಲೆ ಬಂಗಾರ, ಅರ್ಧ ಕೆಜಿ ಬೆಳ್ಳಿ ಹಾಗೂ 5 ಲಕ್ಷ ರೂಪಾಯಿ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

ಖಾಕಿ ತೊಟ್ಟ ಖದೀಮನ ಕರಾಮತ್ತು:

ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು ಬೆಚ್ಚಿಬೀಳಿಸುವ ಮಾಹಿತಿ. ಈ ಕಳ್ಳತನದ ಹಿಂದಿನ ಸೂತ್ರಧಾರಿ ಬೇರೆ ಯಾರೂ ಆಗಿರದೆ, ಪೊಲೀಸ್ ಇಲಾಖೆಯಲ್ಲೇ ಸೇವೆ ಸಲ್ಲಿಸುತ್ತಿದ್ದ ಕಾನ್ಸ್‌ಟೇಬಲ್ ಪ್ರದೀಪ್ ನಾಯ್ಕ್ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಪ್ರದೀಪ್ ನಾಯಕ್ ಹಳೆ ನಿಡುನೇಗಿಲು ಗ್ರಾಮದ ಅಳಿಯ. ಹೀಗಾಗಿ ಆತನಿಗೆ ಆ ಗ್ರಾಮದ ಪ್ರತಿಯೊಂದು ಮನೆ, ಅಲ್ಲಿನ ಭೌಗೋಳಿಕ ಸ್ಥಿತಿಗತಿ ಮತ್ತು ಜನರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯಿತ್ತು.

ಕೃತ್ಯಕ್ಕೆ ಕಾರಣವೇನು?

ಮಲ್ಲನಗೌಡ ಪಾಟೀಲ್ ಅವರು ಹೊಸ ಮನೆ ಕಟ್ಟಿಸಲು ತಯಾರಿ ನಡೆಸಿದ್ದರು ಮತ್ತು ಅದಕ್ಕಾಗಿ ಮನೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಶೇಖರಿಸಿ ಇಟ್ಟಿದ್ದರು. ಇದೇ ಗ್ರಾಮದ ಅಳಿಯನಾಗಿದ್ದ ಕಾನ್ಸ್‌ಟೇಬಲ್ ಪ್ರದೀಪ್‌ಗೆ ಈ ವಿಚಾರ ತಿಳಿದಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಆತ, ತನ್ನ ಪರಿಚಯದ ಮಲ್ಲೇಶಪ್ಪ, ಕಾಂತೇಶ್, ಅಜಯ್, ನಾಗರಾಜ, ರಾಘವೇಂದ್ರ ಮತ್ತು ವಿಜಯ್ ಎಂಬ ಕಳ್ಳರ ತಂಡವನ್ನು ಸಂಪರ್ಕಿಸಿದ್ದಾನೆ. ಅವರಿಗೆ ಮಲ್ಲನಗೌಡರ ತೋಟದ ಮನೆಗೆ ಹೇಗೆ ನುಗ್ಗಬೇಕು, ಯಾವ ಸಮಯದಲ್ಲಿ ಹೋಗಬೇಕು ಮತ್ತು ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಪಕ್ಕಾ 'ಸ್ಕೆಚ್' ಹಾಕಿಕೊಟ್ಟಿದ್ದನು.

ಐವರ ಬಂಧನ, ಇಬ್ಬರು ಪರಾರಿ:

ಖಾಕಿ ಪಡೆಯ ತೀವ್ರ ಕಾರ್ಯಾಚರಣೆಯ ಫಲವಾಗಿ, ಇಲಾಖೆಗೆ ಕಳಂಕ ತಂದ ಕಾನ್ಸ್‌ಟೇಬಲ್ ಪ್ರದೀಪ್ ನಾಯ್ಕ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ವಿಜಯ್ ಮತ್ತು ರಾಘವೇಂದ್ರ ಎಂಬ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಳ್ಳರ ಜತೆ ಕೈಜೋಡಿಸಿ, ತಾನು ಕೆಲಸ ಮಾಡುವ ಇಲಾಖೆಗೇ ದ್ರೋಹ ಬಗೆದ ಕಾನ್ಸ್‌ಟೇಬಲ್ ಕೃತ್ಯಕ್ಕೆ ಹಿರಿಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಶಿವರಾತ್ರಿ 'ಚಂದಾ' ನೀಡದ ಅಂಗಡಿ ಯುವಕನಿಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!
ಬೆಂಗಳೂರು ರಸ್ತೆಯಲ್ಲಿ ಹೆಚ್ಚುತ್ತಿರುವ ರೋಡ್ ರೇಜ್, ಎರಡು ವಿಭಿನ್ನ ಘಟನೆ, ಎರಡು ವಿಭಿನ್ನ ಪ್ರತಿಕ್ರಿಯೆ