ಹಾವೇರಿ ಹಾಲು ಒಕ್ಕೂಟದಿಂದ ರೈತರಿಗೆ ಕೊಡಬೇಕಾದ ಖರೀದಿ ಹಣದಲ್ಲಿ ಭಾರೀ ತಾರತಮ್ಯ ಮಾಡುತ್ತಿದೆ. ಹಾವೆಮುಲ್ ನಷ್ಟದಲ್ಲಿದೆ ಎಂದು 3.50 ರೂ. ಕಡಿತ ಮಾಡಿತ್ತು. ಇದೀಗ ಸರ್ಕಾರ 4 ರೂ. ಹೆಚ್ಚಳ ಮಾಡಿದರೂ ಕೇವಲ 2.50 ರೂ. ರೈತರಿಗೆ ಕೊಡಲಾಗುತ್ತಿದೆ.
ಹಾವೇರಿ (ಏ.06): ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿದೆ ಎಂದು 3.50 ಲೀಟರ್ ಖರೀದಿ ದರವನ್ನು ತಗ್ಗಿಸಲಾಗಿತ್ತು. ಇದರ ಬೆನ್ನಲ್ಲಿಯೇ ಸರ್ಕಾರ ಗ್ರಾಹಕರ ಖರೀದಿಸುವ ನಂದಿನಿ ಹಾಲಿನ ಬೆಲೆಯನ್ನು 4 ರೂ. ಹೆಚ್ಚಳ ಮಾಡಲಾಯಿತು. ಆದರೆ, ರೈತರಿಗೆ ನ್ಯಾಯವಾಗಿ ಹಳೆಯ ಕಡಿತದ ದರ ಹಾಗೂ ಸರ್ಕಾರ ಹೆಚ್ಚಳ ಮಾಡಿದ ದರ ಸೇರಿಸಿ 7.50 ರೂ. ಕೊಡಬೇಕು. ಆದರೆ, ಹಾವೆಮುಲ್‌ನವರು ಕೇವಲ 2.50 ರೂ. ಮಾತ್ರ ಹೆಚ್ಚಳ ಕೊಡುತ್ತಿದ್ದಾರೆ. ಹೀಗಾಗಿ, ಹಾವೆಮುಲ್ ಸಿಬ್ಬಂದಿಯೇ ಎರಡು ತಲೆ ಹಾವಿನಂತೆ ಎರಡೂ ಕಡೆ ಹಣ ನುಂಗಿ ನೀರು ಕುಡಿಯುವುದು ಬಿಟ್ಟು ರೈತರಿಗೆ ಅರ್ಹವಾದ ಹಣ ನೀಡಿ...
ಹಾವೇರಿ ಹಾಲು ಒಕ್ಕೂಟದಲ್ಲಿ (Haveri District Co-Operative Milk Union) ಪ್ರತಿದಿನ 1.35 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಅದರಲ್ಲಿ ಕೇವಲ 20 ಸಾವಿರ ಲೀಟರ್ ಪ್ಯಾಕೆಟ್ ಹಾಲು ಮಾರಾಟವಾಗುತ್ತಿದ್ದು, ಸದ್ಯ ವಾರ್ಷಿಕ ₹18 ಕೋಟಿ ನಷ್ಟದಲ್ಲಿದೆ ಎಂದು ತಾತ್ಕಾಲಿಕವಾಗಿ ಹಾಲು ಉತ್ಪಾದಕರಿಗೆ ಹಾಲಿನ ದರವನ್ನು ಮಾ.27ರಂದು 3.50 ರೂ. ಕಡಿತ ಮಾಡಲಾಗಿತ್ತು. ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿದಲ್ಲಿ ಉತ್ಪಾದಕರಿಗೆ ಕೊಡುವುದಾಗಿ ಹೇಳಿತ್ತು. ಆದರೆ, ಇದೀಗ ರಾಜ್ಯ ಸರ್ಕಾರದಿಂದ ಏ.1ರಿಂದ ಅನ್ವಯ ಆಗುವಂತೆ 4 ರೂ. ಹೆಚ್ಚಳ ಮಾಡಿದೆ. ಇದೀಗ ಹಾವೆಮುಲ್‌ನಿಂದ ರೈತರಿಗೆ ನಂದಿನಿ ಹಾಲಿನ ದರ ಹೆಚ್ಚಳ ಹಣವನ್ನೂ ನೀಡುವುದಕ್ಕೆ ಕತ್ತರಿ ಹಾಕುತ್ತಿದೆ. ಸರ್ಕಾರ ಘೋಷಿಸಿದ ₹4 ಹಣ ನೇರವಾಗಿ ರೈತರಿಗೆ ವರ್ಗಾಯಿಸಿದರೆ ಪುನಃ ಹಾವೇರಿ ಹಾಲು ಒಕ್ಕೂಟಕ್ಕೆ ₹2 ಕೋಟಿ ನಷ್ಟ ಆಗಲಿದೆ ಎಂದು ಕ್ಯಾತೆ ತೆಗೆದಿದೆ. ರೈತರು ಈ ಬಗ್ಗೆ ಪ್ರತಿಭಟನೆ ಮಾಡಿದಾಗ ಶೀಘ್ರದಲ್ಲಿ ಆಡಳಿತ ಮಂಡಳಿ ಸಭೆ ನಡೆಸಿ ಹಾಲಿನ ದರ ಮತ್ತೆ ಹೆಚ್ಚಿಸುತ್ತೇವೆ ಎಂದು ಹಾವೆಮುಲ್ ಅಧಿಕಾರಿಗಳು ಭರವಸೆ ನೀಡಿದ್ದರು.
ಇದೀಗ ಸಭೆ ನಡೆಸಿದ ಹಾವೆಮುಲ್ ಹಾಲು ಉತ್ಪಾದಕರಿಗೆ 2.50 ರೂ. ಹಣವನ್ನು ಮಾತ್ರ ನೀಡಲು ಮುಂದಾಗಿದೆ. ಅಂದರೆ, ಹಳೆಯ ದರದಲ್ಲಿ 3.50 ಕಡಿತ ಮಾಡಿದ್ದು, ಹಾಗೂ 4 ರೂ. ಹೆಚ್ಚಳ ಮಾಡಿದ್ದು ಸೇರಿದರೆ ಒಟ್ಟು 7.50 ರೂ. ಹಣವನ್ನು ಹೆಚ್ಚಳ ಮಾಡಬೇಕು. ಆದರೆ, ಹಾವೆಮುಲ್ ರೈತರಿಂದ 7.50 ರೂ.ನಲ್ಲಿ ಹಾಲು ಉತ್ಪಾದಕರಿಗೆ ಕೇವಲ 2.50 ರೂ. ಕೊಡಲು ಮುಂದಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಜಿಲ್ಲಾ ಹಾಲು ಉತ್ಪಾದನಾ ಘಟಕದ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ. ಪದೇ ಪದೆ ನಷ್ಟದಲ್ಲಿದೆ ಎಂಬ ಹಾಲು ಒಕ್ಕೂಟವನ್ನು ಇಟ್ಟುಕೊಂಡು ರೈತರಿಗೆ ನಷ್ಟ ಮಾಡುವ ಬದಲು ಮುಚ್ಚಿಕೊಂಡು ಮನೆಗೆ ಹೋಗಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Haveri: ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ 3.50 ರೂ. ಇಳಿಕೆ; ಆ ಕಡೆ ಜನರ ಕಿವಿಗೂ ಹೂ, ಈ ಕಡೆ ರೈತರ ಕಿವಿಗೂ ಹೂ!
ಇದೀಗ ಹಾವೇರಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಸುವಿನ ಹಾಲಿಗೆ 33 ರೂಪಾಯಿ ಹಾಗೂ ಪ್ರತಿ ಲೀಟರ್ ಎಮ್ಮೆ ಹಾಲಿಗೆ 45.50 ರೂಪಾಯಿ ಕೊಡಲು ನಿರ್ಧಾರ ಮಾಡಿದೆ.
ಈ ಹಿಂದೆ ಹಾವೆಮುಲ್‌ನಲ್ಲಿ ಹಸುವಿನ ಹಾಲಿಗೆ - 30.50 ರೂಪಾಯಿ ಹಾಗೂ ಎಮ್ಮೆ ಹಾಲಿಗೆ - 43 ರೂಪಾಯಿ ಹಣ ನೀಡಲಾಗುತ್ತಿತ್ತು. ಸರ್ಕಾರ ಏ.1 ರಿಂದ ₹4 ಹೆಚ್ಚಳ ಮಾಡಿದೆ. ಈ ಹಣವನ್ನು ಹಾಲು ಉತ್ಪಾದಕರಿಗೆ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಂದರೆ, ಹಾವೇರಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಸುವಿನ ಹಾಲಿಗೆ 34.50 ರೂಪಾಯಿ ಹಾಗೂ ಎಮ್ಮೆ ಹಾಲಿಗೆ 47 ರೂಪಾಯಿ ಸಿಗಬೇಕಿತ್ತು. ಆದರೆ ಸರ್ಕಾರ 4 ರೂಪಾಯಿ ಹೆಚ್ಚಿಸಿದ ಬೆನ್ನಲ್ಲಿಯೇ ಕಳ್ಳಾಟ ಮುಂದುವರೆಸಿದೆ.
ಅಧಿಕಾರಕ್ಕೆ ಬಂದು ಮೂರು ಬಾರಿ ಹಾಲಿನ ದರ ಏರಿಕೆ ಮಾಡಿದ ಭ್ರಷ್ಟ ಸರ್ಕಾರ ರೈತರು, ಗ್ರಾಹಕರ ಕೈಗೆ ಚೊಂಬು ಕೊಟ್ಟಿದೆ.
ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿರುವುದು ಅಲ್ಲದೆ ರೈತರ ಹೆಸರಲ್ಲಿ ಮತ್ತೆ ಹಾಲಿನ ದರ ಹೆಚ್ಚಿಸಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಇಳಿಕೆ ಮಾಡಿ ಹಗಲು ದರೋಡೆ ಮಾಡುತ್ತಿದೆ… pic.twitter.com/7thjy8a5xp
1.15 ಲಕ್ಷ ಲೀಟರ್ ಮೋರಿಗೆ ಸುರಿಯುತ್ತೀರಾ?
ಹಾವೇರಿ ಹಾಲು ಒಕ್ಕೂಟದಲ್ಲಿ ಪ್ರತಿದಿನ 1.35 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಅದರಲ್ಲಿ ಕೇವಲ 20 ಸಾವಿರ ಲೀಟರ್ ಪ್ಯಾಕೆಟ್ ಹಾಲು ಮಾರಾಟವಾಗುತ್ತಿದೆ. ಉಳಿದ 1.15 ಲಕ್ಷ ಲೀ. ಮಾರಾಟವಾಗದೇ ಉಳಿಯುತ್ತಿದೆ ಎಂದು ಹಾಲು ಒಕ್ಕೂಟದ ಸಿಬ್ಬಂದಿ ಹೇಳುತ್ತಾರೆ. ಈ ಹಾಲಿನಲ್ಲಿ ಕೆಲವು ಹಾಲು ಹಾಲಿನ ಪುಡಿ, ಇತರೆ ಹಾಲಿನ ಉಪ ಉತ್ಪನ್ನಗಳಿಗೆ ಬಳಸಬಹುದು ಎಂದುಕೊಳ್ಳೋಣ. ಇದರ ನಂತರವೂ ಉಳಿದ ಹಾಲನ್ನು ಎಲ್ಲಿ ಸುರಿಯುತ್ತೀರಿ. ರೈತರು ದನಗಳನ್ನು ಮೇಯಿಸಿ ಅಮೃತ ಸಮಾನ ಹಾಲು ಹಿಂಡಿಕೊಂಡು ಬಂದರೆ ಎಲ್ಲಿಗೆ ಕಳಿಸುತ್ತಿದ್ದೀರಿ ತಿಳಿಸಿ? ಇಲ್ಲಿ ಹಾಲು ಖರೀದಿ ಮಾಡುವ ಗ್ರಾಹಕರಿಗೂ ಕಡಿಮೆ ದರವನ್ನು ಕೊಡದೇ ಚರಂಡಿಗೆ ಸುರಿಯುತ್ತೀರಾ? ಉತ್ಪಾದನೆಯಾದ ಹಾಲಿಗೆ ಮಾರುಕಟ್ಟೆ ಒದಗಿಸಲು ಸಾಧ್ಯವಾಗದಿದ್ದರೆ ಒಕ್ಕೂಟ ಬಿಟ್ಟು ದನ ಮೇಯಿಸಲು ಬನ್ನಿ... ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.