ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ಬಸವ ಜಯಂತಿ ನಿಮಿತ್ಯ ಅನುಭವ ಮಂಟಪ, ಬಸವಾದಿ ಶರಣರ ವೈಭವ ಹೆಸರಿನಲ್ಲಿ ಏ.29 ಮತ್ತು 30 ರಂದು ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್ ಬಾಗಲಕೋಟೆ.
ಬಾಗಲಕೋಟೆ (ಏ.06): ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ಬಸವ ಜಯಂತಿ ನಿಮಿತ್ಯ ಅನುಭವ ಮಂಟಪ, ಬಸವಾದಿ ಶರಣರ ವೈಭವ ಹೆಸರಿನಲ್ಲಿ ಏ.29 ಮತ್ತು 30 ರಂದು ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಕೂಡಲಸಂಗಮದ ಅಭಿವೃದ್ದಿ ಪ್ರಾಧಿಕಾರದ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರಕಾರ ಬಸವಣ್ಣವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಬಾರಿಯನ್ನಾಗಿ ಘೋಷಿಸಿದ ಹಿನ್ನಲೆಯಲ್ಲಿ ಬಸವಣ್ಣನವರ ಬದುಕು, ಸಂದೇಶ ಹಾಗೂ ಚಿಂತನೆಯನ್ನು ವ್ಯಾಪಕವಾಗಿ ಸಾರುವ ನಿಟ್ಟಿನಲ್ಲಿ 12ನೇ ಶತಮಾನದ ಅನುಭವ ಮಂಟಪವನ್ನು ಮರು ಸೃಷ್ಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
2 ದಿನ ವಿಶೇಷ ಬಸವ ಜಯಂತಿ ಕಾರ್ಯಕ್ರಮ: ಕೂಡಲ ಸಂಗಮದಲ್ಲಿ ಏಪ್ರೀಲ್ 29 ಮತ್ತು 30 ರಂದು ಎರಡು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ದಿನ ಬೆಳಿಗ್ಗ ಎರಡು ಹಾಗೂ ಮದ್ಯಾಹ್ನ ಎರಡು ವಚನ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಂತರ ಸಂಜೆ ಸಾಣೆಹಳ್ಳಿ ಮಠದ ಕಲಾತಂಡದಿಂದ ಕಲ್ಯಾಣ ಕ್ರಾಂತಿ ನಾಟಕ ಪ್ರದರ್ಶನ ಕೂಡ ಹಮ್ಮಿಕೊಳ್ಳಲಾಗುತ್ತಿದೆ. 30 ರಂದು ಬೆಳಿಗ್ಗೆ ಬಸವಣ್ಣವರ ಚವನ ಗಂಟುಗಳ ಅದ್ದೂರಿ ಮೆರವಣಿಗೆ ನಡೆಸಲಾಗುತ್ತಿದೆ. ನಂತರ ನಡೆಯುವ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು. ಏ.30 ರಂದು ಒಂದೇ ವೇದಿಕೆಯಲ್ಲಿ ಎರಡು ಭಾಗಗಳಾಗಿ ಮಾಡಲಾಗುತ್ತಿದ್ದು, ಮುಖ್ಯ ವೇದಿಕೆಯಲ್ಲಿ ಜನಪ್ರತಿನಿಧಿಗಳ ಜೊತೆಗೆ ವಿವಿಧ ಧರ್ಮ ಗುರುಗಳು ಪಾಲ್ಗೊಳ್ಳಲಿದ್ದಾರೆ. ಇನ್ನೊಂದು ವೇದಿಕೆಯಲ್ಲಿ ಶರಣರು ಹಾಗೂ ಮಠಾಧೀಶರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಏಕೆ ಘೋಷಣೆ ಮಾಡಿದೆವು ಎಂಬುದರ ಬಗ್ಗೆ ಕಿರು ಹೊತ್ತಿಗೆಯನ್ನು ಹೊರತರಲಾಗುತ್ತಿದೆ. ಕಾರ್ಯಕ್ರಮ ಆಯೋಜನೆಗೆ ಈಗಾಗಲೇ 1 ಕೋಟಿ ರೂ. ಅನುದಾನ ಸರಕಾರ ಘೋಷಿಸಿದ್ದು, ಹೆಚ್ಚಿನ ಅನುದಾನ ಸಹ ನೀಡಲಾಗುತ್ತಿದೆ ಎಂದರು.
ಶರಣರು ನೀಡಿರುವ ವಿಚಾರಧಾರೆಗಳು ಸರ್ವಕಾಲಿಕ ಮತ್ತು ಶಾಶ್ವತ: ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ ಸದೃಡ ಸಮಾಜಕ್ಕಾಗಿ ಮಹಾನ್ ಶರಣರು ನೀಡಿರುವ ವಿಚಾರಧಾರೆಗಳನ್ನು ಸರ್ವಕಾಲಿಕ ಮತ್ತು ಶಾಶ್ವತವಾಗಿ ಇರುವಂತೆ ಮಾಡುವುದು ಹಾಗೂ ತನ್ಮೂಲಕ ಸಾಮರಸ್ಯದ ಬದುಕನ್ನು ಯಾವ ರೀತಿ ಕಟ್ಟಿಕೊಳ್ಳಬೇಕೆಂಬುದು ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕಳೆದ 800 ವರ್ಷಗಳ ಅನುಭವ ಮಂಟಪವನ್ನು ಮರು ಸೃಷ್ಟಿಸುವುದು ದೇಶದಲ್ಲಿಯೇ ಪ್ರಥಮ ಎಂದರು. ಹುನಗುಂದ ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ ಬಸವಣ್ಣವರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕಳೆದ ಬಜೆಟ್‍ನಲ್ಲಿ ಸರ್ವಧರ್ಮ ಸಂಸತ್ತು ಎಂದು ಘೋಷಿಸಿದ್ದರು. ಈ ಹಿನ್ನಲೆಯಲ್ಲಿ ದೇಶದ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪುರೇಷೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಸಾವಿಗೆ ಶರಣಾಗುವ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್ ಸೋಮಯ್ಯ: ಹೃದಯ ಹಿಂಡಿದ ಭಾವನಾತ್ಮಕ ಪತ್ರ!
ಸಚಿವದ್ವಯರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ: ಕೂಡಲಸಂಗಮದಲ್ಲಿ ಸಮಿತಿ ಸದಸ್ಯರ ಸಭೆ ಜರುಗಿತು. ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಅನುಭವ ಮಂಟಪ ಸಾರುವ ನಿಟ್ಟಿನಲ್ಲಿ ಒಂದು ದೊಡ್ಡ ಹಾಗೂ ಎರಡು ಚಿಕ್ಕ ರಥ ತಯಾರಿಸಿ ಜಿಲ್ಲಾ ಹಾಗೂ ರಾಜ್ಯವ್ಯಾಪ್ತಿ ಸಂಚಾರ ನಡೆಸಲು ತೀರ್ಮಾನಿಸಲಾಯಿತು. ಲಾಂಚನ, ರಥ ನಿರ್ಮಾಣ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಜಿ, ಜ್ಞಾನಪ್ರಕಾಶ ಸ್ವಾಮಿಜಿ. ಡಾ.ಪ್ರಶಾಂತ ಮಾರ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ಮಹಾದೇವ ಮುರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.