ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಂಡೀಪುರ ಉಳಿಸಿ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದ್ದು ಇಂದು ನಡೆದ ನಮ್ಮ ನಡಿಗೆ ಬಂಡೀಪುರದ ಕಡೆಗೆ ಪಾದಯಾತ್ರೆ ಸಾಕ್ಷಿಯಾಯ್ತು.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಏ.06): ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಂಡೀಪುರ ಉಳಿಸಿ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದ್ದು ಇಂದು ನಡೆದ ನಮ್ಮ ನಡಿಗೆ ಬಂಡೀಪುರದ ಕಡೆಗೆ ಪಾದಯಾತ್ರೆ ಸಾಕ್ಷಿಯಾಯ್ತು. ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು ಕೇರಳ ರಾಜ್ಯಗಳಿಗೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಇಲ್ಲಿ ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಸಾವನ್ನಪ್ಪುತ್ತಿದ್ದ ಹಿನ್ನೆಲೆಯಲ್ಲಿ 2009 ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕೆಲವು ಮಾಫಿಯಾಗಳಿಗೆ ಇದರಿಂದ ಭಾರೀ ಹೊಡೆತ ಬಿದ್ದಿದೆ.
ಕೇರಳ ಸರ್ಕಾರವಂತು ಇಲ್ಲಿ ವಾಹನ ಸಂಚಾರ ನಿಷೇಧ ತೆರವುಗೊಳಿಸಲು ರಾಜ್ಯ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಲೇ ಬಂದಿದೆ. ಇದೀಗ ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ರಾತ್ರಿ ವಾಹನ ಸಂಚಾರ ನಿಷೇಧ ತೆರವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ ವಯನಾಡ್ನಲ್ಲಿ ನಡೆದ ಕಾಂಗ್ರೆಸ್ ಕೃತಜ್ಞತಾ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಹ ಸಹ ರಾತ್ರಯ ಸಂಚಾರ ನಿಷೇಧ ತೆರವು ಮಾಡುವ ಬಗ್ಗೆ ಭರವಸೆ ನೀಡಿದ್ದರು. ಇತ್ತೀಚಿಗೆ ಅರಣ್ಯ ಸಚಿವ ಈಶ್ವರಖಂಡ್ರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರೊಗಳೊಡನೆ ಸಭೆಯನ್ನು ನಡೆಸಿದ್ದರು.
ಬೇಸಿಗೆಯಲ್ಲೂ ತುಂಬಿ ತುಳುಕುತ್ತಿರುವ ಬಂಡೀಪುರದ ಕಾಡಿನ ಕೆರೆ: ದಾಹ ತಣಿಸಿಕೊಂಡು ವಿಹರಿಸುತ್ತಿರುವ ಮೂಕ ಪ್ರಾಣಿಗಳು!
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ರಾಜಕೀಯ ಹಿತಾಸಕ್ತಿಗೋಸ್ಕರ ನಿಷೇಧ ತೆರವುಗೊಳಿಸುವ ಆತಂಕ ಎದುರಾಗಿರುವುದರಿಂದ ಬೀದಿಗಿಳಿದಿದ್ದಾರೆ. ಬಂಡೀಪುರ ಉಳಿಸಿ ಅಭಿಯಾನ ನಡೆಸುತ್ತಿದ್ದಾರೆ. ಇಂದು ನಮ್ಮ ನಡಿಗೆ ಬಂಡೀಪುರ್ ಕಡೆಗೆ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಯಿತು . ಗುಂಡ್ಲುಪೇಟೆ ತಾಲೋಕು ಕಗ್ಗಳದ ಹುಂಡಿಯಿಂದ ಮದ್ದೂರು ಚೆಕ್ ಪೋಸ್ಟ್ ವರೆಗೆ ನಡೆದ ಪಾದಯಾತ್ರೆಯಲ್ಲಿ ಪರಿಸರವಾದಿಗಳು, ವನ್ಯಜೀವಿ ಪ್ರೇಮಿಗಳು, ರೈತರು, ಐಟಿ ಬಿಟಿ ನೌಕರರು, ನಿವೃತ್ತ ಅರಣ್ಯಾಧಿಕಾರಿಗಳು ಹೀಗೆ ಎಲ್ಲ ವರ್ಗದ ನೂರಾರು ಮಂದಿ ಭಾಗವಹಿಸಿದ್ದರು.
ಕೇರಳದ ಪರಿಸರವಾದಿಗಳು ಸಹ ಈ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತಪಡಿಸಿದರು. ಪಾದಯಾತ್ರೆ ಬಳಿಕ ಮದ್ದೂರು ಚೆಕ್ಪೋಸ್ಟ್ ಬಳಿ ನಡೆದ ಸಮಾವೇಶದ ಸ್ಥಳಕ್ಕೆ ಗುಂಡ್ಲುಪೇಟೆ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ಭೇಟಿ ನೀಡಿದ್ದರು. ರಾತ್ರಿ ವಾಹನ ಸಂಚಾರ ನಿಷೇಧ ತೆರವು ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಯಾರು ಸಹ ಆತಂಕಪಡುವ ಅಗತ್ಯ ಇಲ್ಲ ಎಂಬ ಭರವಸೆಯ ಮಾತುಗಳನ್ನಾಡಿದರು ಕೇರಳದವರು ರಾತ್ರಿ ವೇಳೆ ಹೆಚ್ಚುವರಿ ಬಸ್ ಗಳ ಸಂಚಾರಕ್ಕೆ ಅವಕಾಶ ಕೇಳಿದ್ದಾರೆ ಅಷ್ಟೇ.
ತಲೆ ಮೇಲೆ ಕಾಯಿ ಒಡೆದು ಪೂಜೆ: ಒಂದೇ ಏಟಿಗೆ ಎರಡು ಹೋಳಾಗುವ ತೆಂಗಿನ ಕಾಯಿ!
ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರಿಂದ ಯಾವುದೇ ಒತ್ತಡ ಇಲ್ಲ ಅವರು ಯಾವುದೇ ಪತ್ರವನ್ನು ಬರೆದಿಲ್ಲ ಎಂದ ಅವರು ಯಥಾ ಸ್ಥಿತಿ ಮುಂದುವರಿಯಲಿ ಎಂಬುದೇ ನನ್ನ ಅಭಿಪ್ರಾಯ ಎನ್ನುವ ಮೂಲಕ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರಿಕೆಗೆ ಸಹಮತ ವ್ಯಕ್ತಪಡಿಸಿದರು. ಸ್ವಯಂಪ್ರೇರಿತರಾಗಿ ನೂರಾರು ಜನರು ಪಾಲ್ಗೊಳ್ಳುವ ಮೂಲಕ ಬಂಡೀಪುರ ಉಳಿಸಿ ಅಭಿಯಾನ ಸಾರ್ವಜನಿಕ ಚಳವಳಿಯಾಗಿ ರೂಪುಗೊಂಡಿದೆ. ರಾತ್ರಿ ವಾಹನ ಸಂಚಾರ ನಿಷೇಧದ ತೆರವೊಗೊಳಿಸುವುದಿಲ್ಲ ಎಂಬ ಸ್ಪಷ್ಟ ಭರವಸೆ ನೀಡುವವರೆಗು ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲು ಪರಿಸರವಾದಿಗಳು ನಿರ್ಧರಿಸಿದ್ದಾರೆ.