Haveri: ಕೋವಿಡ್‌ ಇಳಿದ ಬಳಿಕ ಅದ್ಧೂರಿ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಮಹೇಶ ಜೋಶಿ

By Kannadaprabha News  |  First Published Feb 12, 2022, 8:20 AM IST

*  ಶೀಘ್ರವೇ ಅದ್ಧೂರಿ ಸಾಹಿತ್ಯ ಸಮ್ಮೇಳನ
*  ಕೋವಿಡ್‌ ಇಳಿಮುಖವಾದ ಮೇಲೆ ಸಮ್ಮೇಳನ ಆಯೋಜನೆ
*  ಕಸಾಪ ಬೈಲಾ ತಿದ್ದುಪಡಿ ಕರಡು ಸಿದ್ಧ
 


ಹಾವೇರಿ(ಫೆ.12):  ಇಲ್ಲಿ ನಡೆಸಲು ಉದ್ದೇಶಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು(AKhil Bharat Kannada Sahitya Sammelana) ಕೋವಿಡ್‌ ಮಾರ್ಗಸೂಚಿ ತೆರವುಗೊಂಡ ಬಳಿಕ ವೈಶಿಷ್ಟ್ಯಪೂರ್ಣವಾಗಿ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ(Mahesh Joshi) ಹೇಳಿದರು.

ನಗರದಲ್ಲಿ ಶುಕ್ರವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ(Covid-19) ಎರಡು ವರ್ಷಗಳಿಂದ ಸಮ್ಮೇಳನ ನಡೆಸಲು ಸಾಧ್ಯವಾಗಿಲ್ಲ. ಆದರೆ, ಈಗ ಕೊರೋನಾ(Coronavirus) ತೀವ್ರತೆ ಕಡಿಮೆಯಾಗುತ್ತಿದೆ. ಮೊದಲ ಎರಡು ಅಲೆಯಂತೆ ಈಗ ಆತಂಕದ ವಾತಾವರಣವಿಲ್ಲ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು(Central Government Guidelines) ಪಾಲಿಸಬೇಕಾಗುತ್ತದೆ. ಈ ಕುರಿತು ಮುಖ್ಯಮಂತ್ರಿಯೊಂದಿಗೂ ಚರ್ಚಿಸಲಾಗಿದೆ. ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಸಾಪ ಅಧ್ಯಕ್ಷರು, ಸಿಎಂ ಇಬ್ಬರೂ ಇದೇ ಜಿಲ್ಲೆಯವರಾಗಿರುವುದು ವಿಶೇಷವಾಗಿದೆ. ಸಾಂಕೇತಿಕವಾಗಿ ಸಮ್ಮೇಳನ ನಡೆಸುವುದಿಲ್ಲ. ಕೋವಿಡ್‌ ಮಾರ್ಗಸೂಚಿ ತೆರವುಗೊಂಡ ಬಳಿಕ ಶೀಘ್ರದಲ್ಲಿ ಐತಿಹಾಸಿಕ ರೀತಿಯಲ್ಲಿ ಸಮ್ಮೇಳನ ಆಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Latest Videos

undefined

ರಕ್ತದಾನಿಗಳ ತವರೂರು ಈ ಅಕ್ಕಿ ಆಲೂರು

ಕೋಟಿ ಸದಸ್ಯತ್ವ ಗುರಿ:

ಕನ್ನಡ ಸಾಹಿತ್ಯ ಪರಿಷತ್‌(Kannada Sahitya Parishat) ಬೈಲಾವನ್ನು ಆಮೂಲಾಗ್ರವಾಗಿ ತಿದ್ದುಪಡಿ ಮಾಡುವ ಕಾರ್ಯ ನಡೆದಿದೆ. ನ್ಯಾ.ಅರಳಿ ನಾಗರಾಜ ನೇತೃತ್ವದ ಸಮಿತಿಯಿಂದ ತಿದ್ದುಪಡಿ ಕರಡು ಸಿದ್ಧವಾಗಿದೆ. ಪ್ರಮುಖವಾಗಿ ಕಸಾಪ ರಾಜ್ಯಾಧ್ಯಕ್ಷರು ಸೇರಿ ಒಮ್ಮೆ ಅಧ್ಯಕ್ಷರಾದವರು ಮತ್ತೆ ಅದೇ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ರಾಜ್ಯ, ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಯುವ ರೀತಿಯಲ್ಲಿ ತಾಲೂಕು, ಹೋಬಳಿ ಘಟಕಗಳ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ(Election) ನಡೆಸಲು ತಿದ್ದುಪಡಿ ತರಲಾಗುತ್ತಿದೆ. ಸದ್ಯ 3.5 ಲಕ್ಷ ಅಜೀವ ಸದಸ್ಯರಿದ್ದು, 5 ವರ್ಷಗಳ ಅವಧಿಯಲ್ಲಿ 1 ಕೋಟಿ ಸದಸ್ಯತ್ವ ನೋಂದಣಿ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಕಾಗಿನೆಲೆಯಲ್ಲಿ ವಿಶೇಷ ಸಭೆ:

500 ಇದ್ದ ನೋಂದಣಿ ಶುಲ್ಕ 250ಗೆ ಇಳಿಸಲಾಗುವುದು. ಸೈನಿಕರಿಗೆ ಗೌರವ ಸಲ್ಲಿಸಲು ಉಚಿತವಾಗಿ ಸದಸ್ಯತ್ವ ನೋಂದಣಿ ಮಾಡಲಾಗುವುದು. 1915ರಲ್ಲಿ ಸಿದ್ಧಗೊಂಡಿರುವ ಬೈಲಾಕ್ಕೆ ಬದಲಾವಣೆ ತರುವ ಅಗತ್ಯವಿದೆ. ಫೆ.17ರಂದು ನಡೆಯುವ ಸಭೆಯಲ್ಲಿ ತಿದ್ದುಪಡಿ ಕರಡು ಕುರಿತು ಪ್ರಮುಖರೊಂದಿಗೆ ಚರ್ಚಿಸಲಾಗುವುದು. ಫೆ.24 ಮತ್ತು 25ರಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ಅಂತಿಮಗೊಳಿಸಲಾಗುವುದು. ಆ ಬಳಿಕ ಕಾಗಿನೆಲೆಯಲ್ಲಿ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಹಸುಗೂಸು: ಚಿಕಿತ್ಸೆಗೆ ದುಡ್ಡಿಲ್ದೆ ಕಂಗಾಲಾದ ಬಡ ದಂಪತಿ

ಪಾದಯಾತ್ರೆ ಮಾಡಿ ದೇಣಿಗೆ ಸಂಗ್ರಹ:

ಕಸಾಪವನ್ನು ಜನಸಾಮಾನ್ಯರ, ಜನೋಪಯೋಗಿ ಪರಿಷತ್ತನ್ನಾಗಿ ರೂಪಿಸಲಾಗುವುದು. 5 ವರ್ಷಗಳ ಅವಧಿಯಲ್ಲಿ ಎಲ್ಲೆಲ್ಲಿ ಕನ್ನಡ ಭವನ ಇಲ್ಲ ಅಲ್ಲಿ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಪಡೆಯಲಾಗುವುದು. ಅದಕ್ಕಾಗಿ ಪಾದಯಾತ್ರೆ ನಡೆಸಿ ದೇಣಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಗುಂಪುಗಾರಿಕೆಗೆ ಅವಕಾಶವಿಲ್ಲದ ರೀತಿಯಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

30 ಸಾವಿರ ಹೆಬ್ಬೆಟ್ಟು ಸದಸ್ಯರು:

1915ರಲ್ಲಿ ರಚನೆಯಾದ ಕಸಾಪ ಬೈಲಾದಲ್ಲಿ ಕನ್ನಡ(Kannada) ಓದಲು, ಬರೆಯಲು ಬರುವವರನ್ನು ಸದಸ್ಯರನ್ನಾಗಿ ಮಾಡಬೇಕು ಎಂಬ ನಿಯಮವಿದೆ. ಆದರೆ, ವಿವಿಧ ಕಾರಣಗಳಿಂದ ರಾಜ್ಯದಲ್ಲಿ(Karnataka) ಸುಮಾರು 30 ಸಾವಿರ ಸದಸ್ಯರು ಹೆಬ್ಬೆಟ್ಟು ಒತ್ತುವವರಿದ್ದಾರೆ. ಅದಕ್ಕಾಗಿ ಇವರಿಗೆ ಓದು, ಬರಹ ಕಲಿಸಿ ಸರಳ ಕನ್ನಡ ಪರೀಕ್ಷೆ ನಡೆಸಿ ಸದಸ್ಯತ್ವ ನೀಡಲು ಉದ್ದೇಶಿಸಲಾಗಿದೆ. 1 ಕೋಟಿ ಸದಸ್ಯತ್ವ ಮಾಡಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಬರುವ ಆರ್ಥಿಕ ಸಾಲಿನಲ್ಲಿ ತಲಾ 1 ಲಕ್ಷ ಸದಸ್ಯತ್ವ ನೋಂದಣಿ ಮಾಡಲಾಗುವುದು. ನೋಂದಣಿ ವ್ಯವಸ್ಥೆ ಸರಳೀಕರಣಗೊಳಿಸಲಾಗಿದೆ. ಅದಕ್ಕಾಗಿ ವಿಶೇಷ ಆ್ಯಪ್‌ ಸಿದ್ಧಪಡಿಸಲಾಗಿದೆ. ಆ ಮೂಲಕ ಕನ್ನಡಿಗರು ಎಲ್ಲಿಂದ ಬೇಕಾದರೂ ಕಸಾಪ ಸದಸ್ಯತ್ವ ಪಡೆಯಬಹುದು ಎಂದು ಮಹೇಶ ಜೋಶಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಚ್‌.ಬಿ. ಲಿಂಗಯ್ಯ, ಕೆ.ಸಿ. ಕೋರಿ ಇತರರು ಇದ್ದರು.
 

click me!