ರಕ್ತದಾನಿಗಳ ತವರೂರು ಈ ಅಕ್ಕಿ ಆಲೂರು
- ಈ ಊರಿನಲ್ಲಿದ್ದಾರೆ 600ಕ್ಕೂ ಹೆಚ್ಚು ರಕ್ತದಾನಿಗಳು
- ಇದುವರೆಗೆ 21,000 ಬಾರಿ ರಕ್ತದಾನ
- ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಪುಟ್ಟ ಹಳ್ಳಿ
- ಗೂಗಲ್‌ನಿಂದ ಹೆಸರು ಗಿಟ್ಟಿಸಿಕೊಂಡ ಅಕ್ಕಿ ಆಲೂರು
ಹಾವೇರಿ(ಫೆ.3): ರಕ್ತದಾನ ಶ್ರೇಷ್ಠದಾನವಾಗಿದ್ದು, ಇದರ ಅಗತ್ಯವನ್ನು ರಾಜ್ಯದ ಹಾವೇರಿ ಜಿಲ್ಲೆಯ ಹಳ್ಳಿಯೊಂದರ ಜನ ಚೆನ್ನಾಗಿ ಅರ್ಥ ಮಾಡಿಕೊಂಡಂತಿದೆ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಈಗ ರಕ್ತದಾನಿಗಳ ತವರೂರು ಎಂದೇ ಖ್ಯಾತಿ ಗಳಿಸಿದೆ. ಈ ಹೆಸರನ್ನು ಬೇರಾರೋ ಇಟ್ಟಿದಲ್ಲ. ಸ್ವತಃ ಗೂಗಲ್ (Google) ಈ ಊರಿಗೆ ಹೀಗೆಂದು ಕರೆದಿದೆ. ಈ ಅಕ್ಕಿ ಆಲೂರು (Akki Aluru) ಗ್ರಾಮವೂ ಹಾವೇರಿ ಜಿಲ್ಲೆಯ ಹಾನಗಲ್ (Hanagal) ತಾಲೂಕಿನಲ್ಲಿದ್ದು, ಇಲ್ಲಿರುವ ಬಹುಸಂಖ್ಯೆಯ ರಕ್ತದಾನಿಗಳಿಂದಲೇ ಇದು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದೆ.
ಈ ಹಳ್ಳಿಯ 600ಕ್ಕೂ ಹೆಚ್ಚು ಜನರು ರಕ್ತದಾನಕ್ಕಾಗಿ ಹೆಸರು ನೋಂದಣಿ ಮಾಡಿದ್ದು, ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಾರೆ.
ಈ ಉತ್ತಮ ಕಾರ್ಯವನ್ನು ಈ ಊರಿನಲ್ಲಿ ಮೊದಲಿಗೆ ಪ್ರಾರಂಭಿಸಿದ್ದು ಕರಿಬಸಪ್ಪ ಗೊಂಡಿ(Karibasappa Gondi).ಇವರೊಬ್ಬ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದು 2015ರಲ್ಲಿ ಅಕ್ಕಿ ಆಲೂರಿನಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸಿದ್ದರು. ಸ್ನೇಹಮೈತ್ರಿ ರಕ್ತದಾನಿ ಬಳಗ ( Snehamytri Raktadaani Balaga) ಎಂಬ ಸಂಘವೊಂದನ್ನು ಸ್ಥಾಪಿಸಿ ಅದರ ಮೂಲಕ ಅನೇಕರನ್ನು ಸೇರಿಸಿಕೊಂಡು ರಕ್ತದಾನ ಮಾಡಲಾಗುತ್ತಿದೆ.
ಒಬ್ಬ ಮನುಷ್ಯನ ರಕ್ತದಿಂದ ಮೂರು ಜೀವ ಉಳಿಸಲು ಸಾಧ್ಯ
ವರದಿಯ ಪ್ರಕಾರ, ಈ ಸ್ನೇಹಮೈತ್ರಿ ರಕ್ತದಾನಿ ಬಳಗವು 2015 ರಿಂದ ಇದುವರೆಗೆ 21,000 ಬಾರಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ. ನಮ್ಮನ್ನೇ ನಾವು ರಕ್ತ ಸೈನಿಕರೆಂದು ((Blood Soldier) ಕರೆಯುತ್ತೇವೆ. ಇಲ್ಲೇ ಸುತ್ತಮುತ್ತಲಿನ ಸುಮಾರು 19 ಹಳ್ಳಿಗಳಲ್ಲಿ ನಾವು ರಕ್ತದಾನ ಶಿಬಿರಗಳನ್ನು ನಡೆಸಿದ್ದೇವೆ. ನಾನು ನನ್ನ ಫೋನ್‌ನಲ್ಲಿ 5100 ರಕ್ತದಾನಿಗಳು ಅವರ ರಕ್ತದ ಗುಂಪು ಹಾಗೂ ದೂರವಾಣಿ ಸಂಖ್ಯೆಯನ್ನು ನನ್ನ ಫೋನ್‌ನಲ್ಲಿ ಸೇವ್ ಮಾಡಿದ್ದೇನೆ. ಯಾರಿಗಾದರೂ ರಕ್ತದ ಅಗತ್ಯ ಇದ್ದಲ್ಲಿ ಕೂಡಲೇ ಪೂರೈಸುವ ಹಾಗೇ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಸ್ವತಃ ನಾನೇ ಇದುವರೆಗೆ 52 ಬಾರಿ ರಕ್ತದಾನ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಾರೆ ರಕ್ತ ಸೈನಿಕ ಕರಿಬಸಪ್ಪ ಗೊಂಡಿ.
ನಮ್ಮ ಈ ಸಂಘದ ಸದಸ್ಯರು ಈ ಕಾರ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದು, ಒಬ್ಬರ ಜೀವ ಉಳಿಸುವುದಕ್ಕಾಗಿ ದೂರದ ಸ್ಥಳಗಳಿಗೂ ಇವರು ಪ್ರಯಾಣಿಸುತ್ತಾರೆ. ತುರ್ತು ಸಂದರ್ಭದಲ್ಲಿ ತುಂಬಾ ದೂರದ ಸ್ಥಳಗಳಿಗೂ ಇವರು ಭೇಟಿ ನೀಡಿದ್ದಾರೆ. ಈ ಸಂಘದ ಒಬ್ಬರು ರಕ್ತದಾನ ಮಾಡುವ ಸಲುವಾಗಿ ಗೋವಾಕ್ಕೂ ( Goa) ಭೇಟಿ ನೀಡಿದ್ದಾರೆ. ಈ ತಂಡವೂ ನೈಋತ್ಯ ರಸ್ತೆ ಸಾರಿಗೆಯ ಬಸ್ಸೊಂದನ್ನು ಹೊಂದಿದ್ದು ಇದಕ್ಕೆ ರಕ್ತದಾನ ರಥ ಎಂದು ಹೆಸರಿಡಲಾಗಿದೆ. ಈ ಬಸ್ ರಕ್ತದಾನಿಗಳ ವಿವರವನ್ನು ಹೊಂದಿದ್ದು, ರಕ್ತದಾನದ ಬಗ್ಗೆ ಅರಿವು ಮೂಡಿಸುತ್ತಿದೆ.
ಕೊಪ್ಪಳ: ಬ್ಲಡ್ ಸಿಗದೇ ತಂಗಿ ಸಾವು, ರಕ್ತದಾನ ಜಾಗೃತಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಶಿವಕುಮಾರ್..!
ಸ್ಪಷ್ಟವಾಗಿ, ಈ ಗ್ರಾಮದ ಪಕ್ಕದ ಹಳ್ಳಿಗಳಲ್ಲಿ 23 ಕ್ಕೂ ಹೆಚ್ಚು ಮಕ್ಕಳು ಥಲಸ್ಸೆಮಿಯಾದಿಂದ (Thalassemia) ಬಳಲುತ್ತಿದ್ದಾರೆ. ( ದೇಹಕ್ಕೆ ಸಾಮಾನ್ಯವಾಗಿ ಬೇಕಾಗಿರುವದಕ್ಕಿಂತಲೂ ಕಡಿಮೆ ಹಿಮೋಗ್ಲೋಬಿನ್ ಅನ್ನು ಉಂಟುಮಾಡುವ ಅನುವಂಶಿಕ ರಕ್ತದ ಕಾಯಿಲೆ). ಹೀಗಾಗಿ ಈ ರಕ್ತದಾನಿಗಳ ತಂಡವು 3 ರಿಂದ 12 ವರ್ಷದೊಳಗಿನ ಮಕ್ಕಳಿಗೆ ನಿಯಮಿತವಾಗಿ ರಕ್ತವನ್ನು ಪೂರೈಸುತ್ತದೆ. ಹೀಗಾಗಿ ನೆರೆಹೊರೆಯ ಈ ಮಕ್ಕಳು ರಕ್ತಕ್ಕಾಗಿ ಅಲೆದಾಡುವ ಸ್ಥಿತಿ ಇದುವರೆಗೂ ಬಂದಿಲ್ಲ.
ಈ ಗ್ರಾಮದ ನಿವಾಸಿಗಳು ತಾವೇ ರಕ್ತದಾನ ಮಾಡುವುದಲ್ಲದೆ ವಿವಿಧೆಡೆ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅಕ್ಕಿ ಆಲೂರಿನ ಪ್ರತಿ ಮಗುವಿಗೆ ರಕ್ತದಾನ ಮತ್ತು ಅದರ ಪ್ರಯೋಜನಗಳ ಬಗ್ಗೆ ಅರಿವಿದೆ. ಆದ್ದರಿಂದ ಈ ಗ್ರಾಮವನ್ನು ರಕ್ತದಾನಿಗಳ ತವರೂರು ಎಂದು ಕರೆಯುತ್ತಾರೆ.