
ಹಾವೇರಿ (ಜ.14): ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸಿಕೊಡಬೇಕಾದ ಶಾಲಾ ಆವರಣವೇ ಇಂದು ರಣರಂಗವಾಗಿ ಮಾರ್ಪಟ್ಟಿತ್ತು. ಹಾನಗಲ್ ಪಟ್ಟಣದ ಪ್ರತಿಷ್ಠಿತ 'ಶಾಸಕರ ಸರ್ಕಾರಿ ಮಾದರಿ ಶಾಲೆ'ಯಲ್ಲಿ ಅತಿಥಿ ಶಿಕ್ಷಕ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅಧ್ಯಕ್ಷರು ಬೀದಿಕಾಳಗದಂತೆ ಹೊಡೆದಾಡಿಕೊಂಡ ಘಟನೆ ನಡೆದಿದೆ.
ವೈಯಕ್ತಿಕ ಭಿನ್ನಾಭಿಪ್ರಾಯ ಹಾಗೂ ಕ್ಷುಲ್ಲಕ ಕಾರಣಕ್ಕೆ ಅತಿಥಿ ಶಿಕ್ಷಕ ಗಂಟೇರ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಬೋಸ್ಲೇ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಅಧ್ಯಕ್ಷ ಸತೀಶ್ ಅವರು ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ಶಿಕ್ಷಕರು ತಿರುಗಿ ಬಿದ್ದಿದ್ದಾರೆ. ಪರಸ್ಪರ ಶರ್ಟ್ ಹಿಡಿದು, ಪುಂಡರಂತೆ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಈ ಶಾಲೆಯು ಹೆಸರಿಗೆ ಮಾತ್ರ 'ಮಾದರಿ'ಯಾಗಿದ್ದು, ಒಳಗಿನ ಪರಿಸ್ಥಿತಿ ಮಾತ್ರ ಶೋಚನೀಯವಾಗಿದೆ. ಕಿತ್ತುಹೋದ ಶೌಚಾಲಯಗಳು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪ್ರತಿದಿನ ಪರದಾಡುತ್ತಿದ್ದಾರೆ. ಶಾಲೆಯ ಇಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕರು ಮತ್ತು ಅಧ್ಯಕ್ಷರು, ಮಕ್ಕಳ ಮುಂದೆಯೇ ಹೀಗೆ ಕಿತ್ತಾಡುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಾದವರು ವೈಯಕ್ತಿಕ ಪ್ರತಿಷ್ಠೆಗಾಗಿ ಶಾಲೆಯ ಘನತೆಯನ್ನು ಹರಾಜು ಹಾಕುತ್ತಿದ್ದಾರೆ. ಇಂತಹ ವರ್ತನೆಯಿಂದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.