
ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ 1, 3, 5 ದಿನಗಳ ಅನಿಯಮಿತ ಸಂಚಾರದ ಪಾಸ್ ಜ.15ರಿಂದ ಕ್ಯುಆರ್ (QR) ಕೋಡ್ ಸ್ವರೂಪದಲ್ಲೂ ಸಿಗಲಿದೆ. ಸ್ಮಾರ್ಟ್ ಕಾರ್ಡ್‌ನಂತೆ ₹50 ಠೇವಣಿ ಇಡದೆ ಕೇವಲ ಪಾಸ್ ಮೊತ್ತವನ್ನು ಮಾತ್ರ ಪಾವತಿಸಿ ಇದನ್ನು ಪಡೆಯುವ ಅವಕಾಶವನ್ನು ಬಿಎಂಆರ್‌ಸಿಎಲ್ ನೀಡಿರುವುದು ವಿಶೇಷ.
ಇದುವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳ (CSC) ಮೂಲಕ ಮಾತ್ರ ಪ್ರಯಾಣಿಕರಿಗೆ ಸಿಗುತ್ತಿತ್ತು. ಜತೆಗೆ ₹50 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ ಕ್ಯುಆರ್ ಪಾಸ್‌ಗಳು ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವುದರಿಂದ ಪ್ರಯಾಣಿಕರು ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿಲ್ಲ. 1, 3, 5 ದಿನದ ಪಾಸ್‌ಗೆ ಸ್ಮಾರ್ಟ್ ಕಾರ್ಡ್‌ನಲ್ಲಾದರೆ ಕ್ರಮವಾಗಿ ₹ 300, ₹ 600, ₹ 900 ಇದೆ. ಕ್ಯುಆರ್ ಕೋಡ್ ಪಾಸ್‌ಗೆ ₹ 250, ₹ 550 ಹಾಗೂ ₹ 850 ಆಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಈ ಪಾಸ್‌ಗಳನ್ನು ನಮ್ಮ ಮೆಟ್ರೋ ಅಧಿಕೃತ ಆ್ಯಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಲಾದ ಕ್ಯುಆರ್ ಕೋಡ್ ಅನ್ನು ಸ್ವಯಂಚಾಲಿತ ಸಂಗ್ರಹ (ಎಎಫ್‌ಸಿ) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಮತ್ತು ನಿರ್ಗಮಿಸಲು ಅನುಕೂಲವಾಗಲಿದೆ. ಪಾಸ್ ಇರುವ ದಿನಗಳಲ್ಲಿ ಎಷ್ಟು ಬಾರಿ ಬೇಕಾದರೂ ಮೆಟ್ರೋದಲ್ಲಿ ಸಂಚಾರ ಮಾಡಬಹುದು.
ಮೆಟ್ರೋ ಪ್ರಯಾಣಿಕರಿಗೆ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಈ ವ್ಯವಸ್ಥೆ ಜಾರಿಗೊಳಿಸುತ್ತಿದೆ.
ಹಳೆ ದರ: ₹300, ₹600, ₹900
ಹೊಸದು: ₹250, ₹550, ₹850