ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮ: ಸಚಿವ ಶಿವಾನಂದ ಪಾಟೀಲ ಭರವಸೆ

Published : Apr 12, 2026, 06:02 PM IST
Shivanand Patil

ಸಾರಾಂಶ

ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ರೈತರಿಗೆ ಭರವಸೆ ನೀಡಿದರು.

ಹಾವೇರಿ (ಏ.12): ಕೃಷಿ, ಕೈಗಾರಿಕೆ, ಕೈಮಗ್ಗ ಸೇರಿದಂತೆ ಎಲ್ಲರಿಗೂ ನೀರು ಬೇಕು, ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ರೈತರಿಗೆ ಭರವಸೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೈತ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಯಾವುದೇ ಸರ್ಕಾರ ಇರಲಿ. ರೈತರ ಪರವಾಗಿ ಕೆಲಸ ಮಾಡುತ್ತವೆ. ರೈತರಿಗೆ ಏಳು ತಾಸು ವಿದ್ಯುತ್ ಪೂರೈಕೆ ಮಾಡುವುದು, ನಮ್ಮ ಸರ್ಕಾರದ ಉದ್ದೇಶವಾಗಿದೆ.

ರೈತರ ಬಗ್ಗೆ ನಮಗೆ ಕಾಳಜಿ ಇದೆ, ಈಗಾಗಲೇ ಜಿಲ್ಲೆಯಲ್ಲಿ ಹಲವು ಸ್ಟೇಷನ್‌ಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ. ಬರುವ ದಿನಗಳಲ್ಲಿ ಇನ್ನೂ ಕೆಲವು ಸ್ಟೇಷನ್‌ಗಳನ್ನು ಅಪ್‌ಗ್ರೇಡ್ ಮಾಡಲಾಗುವುದು. ಜೊತೆಗೆ ಟಿಸಿ ಬದಲಾವಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಹೆಸ್ಕಾಂ ನಷ್ಟದಲ್ಲಿದ್ದು, ನೀವೂ ಸಹಕಾರ ನೀಡಬೇಕು ಎಂದರು. ಸೆಪ್ಟೆಂಬರ್ 2023ರಿಂದ ಬಂದ್ ಮಾಡಲಾದ ಅಕ್ರಮ-ಸಕ್ರಮ ಮರು ಜಾರಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮನವಿ ಮಾಡಿದ್ದೀರಿ. ಈ ಕುರಿತು ಪರಿಶೀಲಿಸಲಾಗುವುದು.

ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳು ಆರಂಭಗೊಂಡರೆ ಕೆನಾಲ್ ಮೂಲಕ ನೀರು ಬಂದರೆ ವಿದ್ಯುತ್ ಸಂಪರ್ಕ ಸಮಸ್ಯೆ ಬಗೆಹರಿಯಲಿದೆ. ತಾವು ಎರಡ್ಮೂರು ಕಂಬ ಹಾಕಿದರೆ ಟಿ.ಸಿ. ಬರುತ್ತದೆ. ಹಾಗಾಗಿ ಹೆಸ್ಕಾಂನೊಂದಿಗೆ ತಾವು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಕೆಡಿಪಿ ಸಭೆಯಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ದಾಸ್ತಾನು ಕುರಿತು ಮಾಹಿತಿ ಪಡೆಯಲಾಗಿದೆ. ಯಾವುದೇ ಸಮಸ್ಯೆ ಇರುವುದಿಲ್ಲ. ಈ ಭಾಗದವರೇ ಹೆಸ್ಕಾಂ ಅಧ್ಯಕ್ಷರಾಗಿದ್ದು, ಜಿಲ್ಲೆಯ ರೈತರ ವಿದ್ಯುತ್ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಖಾದ್ರಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ 300 ಜನ ರೈತರಿಗೆ ಶೀಘ್ರ ಸಂಪರ್ಕ ನೀಡಲಾಗಿದೆ. ಏಳು ತಾಸು ವಿದ್ಯುತ್ ನೀಡುವುದು ಇಂಧನ ಸಚಿವರು ಹಾಗೂ ಸರ್ಕಾರದ ಉದ್ದೇಶವಾಗಿದೆ. ಆದರೆ ಕೆಲವು ರೈತರು ಮೂರು ಹಾಗೂ ನಾಲ್ಕು ತಾಸುಗಳಲ್ಲಿ ಹಂತ ಹಂತವಾಗಿ ವಿದ್ಯುತ್ ನೀಡಲು ಮನವಿ ಮಾಡಿಕೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಲಾಗುತ್ತಿದೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ತಾವು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

ವಿದ್ಯುತ್ ಸಮಸ್ಯೆ ಕುರಿತು ಯಾರೇ ಕರೆ ಮಾಡಿದರೂ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ರೈತರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು. ನಾನು ಸಹ 24*7 ಲಭ್ಯವಿರುತ್ತೇನೆ. ಎಲ್ಲರೂ ಒಟ್ಟಾಗಿ ನಿಭಾಯಿಸೋಣ ಎಂದು ತಿಳಿಸಿದರು. ಹೆಸ್ಕಾಂ ಎಂ.ಡಿ. ಎಂ.ಎಲ್. ವೈಶಾಲಿ ಮಾತನಾಡಿ, ಹೆಸ್ಕಾಂನಿಂದ ಹಾವೇರಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಜೊತೆಗೆ ಸ್ಟೇಷನ್‌ಗಳ ಅಪ್‌ಗ್ರೇಡ್‌ಗೆ ಹಾಗೂ 72 ಗಂಟೆಯೊಳಗಾಗಿ ಟ್ರಾನ್ಸಫಾರ್ಮರಗಳ ಬದಲಾವಣೆಗೆ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ 263 ಟಿಸಿ ಬಫರ್ ದಾಸ್ತಾನಿದೆ. ಸಿನಿಯಾರಿಟಿ ಲಿಸ್ಟ್ ಅನುಸಾರ ವಿದ್ಯುತ್ ಸಂಪರ್ಕಕ್ಕೆ ಕ್ರಮವಹಿಸಲಾಗಿದೆ.

560 ಲೈನಮನ್‌ಗಳ ಆಯ್ಕೆಯಾಗಿದ್ದು, ಮೇ ಅಂತ್ಯದೊಳಗೆ ಪ್ರಕಟಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಬೊಮ್ಮನಹಳ್ಳಿ, ಬಾಳಂಬೀಡ, ಬೆಳಗಾಲಪೇಟೆ ಸ್ಟೇಷನ್ ಅಪ್‌ಗ್ರೇಡ್ ಆದರೆ ಆ ಭಾಗದ ಜನರಿಗೆ ಏಳು ತಾಸು ವಿದ್ಯುತ್ ಸಿಗಲಿದೆ. ಬೆಳಗಾಲಪೇಟೆ ಬೊಮ್ಮನಹಳ್ಳಿ ಟೆಂಡರ್ ಆಗಿದೆ, ರಟ್ಟಿಹಳ್ಳಿ ಸೇರಿದಂತೆ ವಿವಿಧ ಭಾಗಗಳ ವಿದ್ಯುತ್ ನಿರ್ವಹಣೆ ಹಾಗೂ ಕೈಗೊಂಡ ಕ್ರಮಗಳ ಕುರಿತು ಆಯಾ ಭಾಗದ ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ರೈತರಿಂದ ವಿವಿಧ ಬೇಡಿಕೆ

ಅಕ್ರಮ-ಸಕ್ರಮ ಮರು ಜಾರಿ, ಏಳು ತಾಸು ನಿರಂತರ ವಿದ್ಯುತ್, ಟಿಸಿ ಬದಲಾವಣೆ ವಿಳಂಬ, ಟಿವಿಗಳ ಓವರ್‌ಲೋಡ್ ಕಡಿಮೆ ಮಾಡುವುದು, ಹಳೆ ವಿದ್ಯುತ್ ತಂತಿಗಳ ಬದಲಾವಣೆ, ಗ್ರಾಮಗಳಿಗೆ ಲೈನಮನ್‌ಗಳ ನೇಮಕ, ಸುಟ್ಟ ಟ್ರಾನ್ಸಫಾರ್ಮರಗಳ ಬೇಗ ಬದಲಾವಣೆ, ನಿಗದಿತ ಸಮಯದೊಳಗೆ ಬೆಳೆವಿಮೆ ಪರಿಹಾರ ಪಾವತಿ, ಮಾರಾಟಗಾರರು ರಸಗೊಬ್ಬರ ದಾಸ್ತಾನು ಪಟ್ಟಿ ಪ್ರದರ್ಶನ, ಶುದ್ಧ ನೀರಿನ ಘಟಕಗಳ ಸ್ಥಗಿತ, ಕಳಪೆ ಬಿತ್ತನೆ ಬೀಜ ಮಾರಾಟ ತಡೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡು ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ರೈತ ಸಂಘದ ಮುಖಂಡರು ಸಚಿವರಿಗೆ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಸರ್ಕಾರದ ಮಾರ್ಗಸೂಚಿ ಅನ್ವಯ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಜಗದೀಶ ಇದ್ದರು.

PREV
Read more Articles on
click me!

Recommended Stories

ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲಿನ ಆಗಮನ ; ಎಷ್ಟು ಸಮಯ ಉಳಿತಾಯ?
ಶ್ರೀರಂಗಪಟ್ಟಣದ 21 ಗ್ರಾಮ ಪಂಚಾಯ್ತಿಗಳಿಂದ 2,83,34,944 ರೂ ಗುಳುಂ; ವ್ಯಾಪಕ ಅಕ್ರಮ