Haveri: ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ; ಎತ್ತುಗಳ ಖರೀದಿಗಿಲ್ಲ ಹಣ

Published : Jun 14, 2026, 07:54 AM IST
Haveri

ಸಾರಾಂಶ

ಹಾವೇರಿ ಜಿಲ್ಲೆಯ ರೈತ ಶಂಕರಪ್ಪ ಲಮಾಣಿ, ಎತ್ತುಗಳನ್ನು ಖರೀದಿಸಲು ಹಣವಿಲ್ಲದೆ, ತಮ್ಮ ಎಲೆಕೋಸು ಬೆಳೆಯಲ್ಲಿನ ಕಳೆ ತೆಗೆಯಲು ಇಬ್ಬರು ಮಕ್ಕಳನ್ನೇ ಜೋಡೆತ್ತುಗಳಂತೆ ಬಳಸಿದ್ದಾರೆ. ಈ ಘಟನೆಯು ಸಾಲ ಮಾಡಿ ಕೃಷಿ ಮಾಡುವ ರೈತರ ಸಂಕಷ್ಟ ಮತ್ತು ಅಸಹಾಯಕ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಹಾವೇರಿ: ಎಲೆಕೋಸು ಬೆಳೆಯ ಮಧ್ಯೆ ಬೆಳೆದ ಕಳೆ ನಾಶಮಾಡಲು ಹೊಲದ ಮಧ್ಯೆ ಇಬ್ಬರು ಮಕ್ಕಳು ಜೋಡೆತ್ತುಗಳಂತೆ ನೊಗ ಹೊತ್ತು ಸಾಗುತ್ತಿದ್ದರೆ, ಅಪ್ಪ ಎಡೆಕುಂಟೆ ಹಿಡಿದು ಅವರ ಹಿಂದೆ ಸಾಗುತ್ತಾನೆ. ಈ ದೃಶ್ಯ ನೋಡಿದರೆ ಇಂದಿಗೂ ನಮ್ಮ ರೈತರ ಪರಿಸ್ಥಿತಿ ಹೇಗಿದೆ ಎಂಬುದು ಅರ್ಥವಾಗುತ್ತದೆ.

ರಾಣಿಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದ ರೈತ ಶಂಕರಪ್ಪ ಲಮಾಣಿ ಹಾಗೂ ಅವರ ಇಬ್ಬರು ಮಕ್ಕಳು ತಾವೇ ಎಡೆಕುಂಟೆ ಕಟ್ಟಿ ಎಳೆದಿರುವ ಘಟನೆ ಬೆಳಕಿಗೆ ಬಂದಿದೆ.

ಎಲೆಕೋಸು ಬೆಳೆದಿರುವ ರೈತ

3 ಎಕರೆ 16 ಗುಂಟೆ ಜಮೀನಿನಲ್ಲಿ ಎಲೆಕೋಸು ಬೆಳೆದಿರುವ ಅವರು, ಉತ್ತಮ ಬೆಳೆ ನಿರೀಕ್ಷೆಯಲ್ಲಿ ಸಾಲ ಮಾಡಿ ಕೃಷಿ ಮಾಡಿದ್ದಾರೆ. ಬೀಜ, ಗೊಬ್ಬರ, ಔಷಧಿ, ಕೂಲಿ ಸೇರಿದಂತೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಸುರಿದ ಪೂರ್ವ ಮುಂಗಾರು ಮಳೆಯಿಂದಾಗಿ ಎಲೆಕೋಸು ಬೆಳೆ ಮಧ್ಯೆ ಕಳೆ ವ್ಯಾಪಕವಾಗಿ ಬೆಳೆದಿದೆ. ಕಳೆ ನಾಶ ಮಾಡದೇ ಬಿಟ್ಟರೆ ಬೆಳೆ ಕುಂಠಿತವಾಗುತ್ತದೆ. ಹೀಗಾಗಿ ಕಳೆ ನಾಶ ಮಾಡುವುದು ರೈತನಿಗೆ ಅನಿವಾರ್ಯವಾಗಿದೆ. ಆದರೆ ಕಳೆ ನಾಶ ಮಾಡಲು ಎತ್ತುಗಳನ್ನು ಖರೀದಿಸಬೇಕೆಂದರೆ ಲಕ್ಷಾಂತರ ರು. ಖರ್ಚು ಮಾಡಬೇಕು. ಯಂತ್ರ ಬಾಡಿಗೆಯೂ ಅಧಿಕವಾಗಿದೆ. ಆದ್ದರಿಂದ ರೈತ ಶಂಕರಪ್ಪ ಲಮಾಣಿ ತನ್ನ ಇಬ್ಬರು ಮಕ್ಕಳೊಂದಿಗೆ ಸೇರಿ ಎಡೆಕುಂಟೆ ಹೊಡೆದಿದ್ದಾರೆ.

ಮಕ್ಕಳಾದ ನಿಂಗರಾಜ್ ಮತ್ತು ಪ್ರವೀಣ್ ಜೋಡೆತ್ತುಗಳಂತೆ ನೊಗ ಎಳೆದರೆ, ಅಪ್ಪ ಎಡೆಕುಂಟೆ ಹಿಡಿದು ಮೂರೂವರೆ ಎಕರೆ ಹೊಲದಲ್ಲಿ ಬೆಳೆದಿದ್ದ ಕಳೆ ನಾಶ ಮಾಡಿದ್ದಾರೆ. ಇನ್ನು ಕೇವಲ 20 ದಿನದ ಎಲೆಕೋಸು ಬೆಳೆಯಿದೆ. ಈ ಬೆಳೆ ಮಾರುಕಟ್ಟೆಗೆ ತಲುಪುವವರೆಗೆ ಕನಿಷ್ಠ ಮೂರು ಬಾರಿ ಕಳೆ ನಾಶ ಮಾಡಲೇಬೇಕಿದೆ. ಒಂದು ಬಾರಿ ಕಳೆ ನಾಶ ಮಾಡಲು ಮೂರು ಜನ ಸೇರಿ ನಾಲ್ಕೈದು ದಿನಗಳ ಆಗುತ್ತದೆ. ಅಷ್ಟೊಂದು ಶ್ರಮ ಹಾಕಿ ಈ ಕುಟುಂಬ ಬೆಳೆ ತೆಗೆಯುತ್ತಿರುವುದು ಕಂಡು ಅನೇಕರು ಮರುಗಿದ್ದಾರೆ.

ನಮ್ಮಲ್ಲಿ ಎತ್ತು ಖರೀದಿಸಲು ಹಣವಿಲ್ಲ. ಬಾಡಿಗೆ ಎತ್ತು, ಬಾಡಿಗೆ ಟ್ರ್ಯಾಕ್ಟರ್‌ ಪಡೆದರೂ ನೀಡುವುದು ಕಷ್ಟ. ಆದರೆ ಬೆಳೆ ಉಳಿಸಲೇಬೇಕು. ಹೀಗಾಗಿ ಇಬ್ಬರು ಮಕ್ಕಳೊಂದಿಗೆ ಸೇರಿ ಎಡೆಕುಂಟೆ ಹೊಡೆದಿದ್ದೇನೆ. ನಮ್ಮ ರೈತನ ಪರಿಸ್ಥಿತಿ ಯಾವಾಗಲೂ ಹೀಗೆಯೇ. ಯಾರ ಮುಂದೆ ಕೈಚಾಚಿ ನಿಲ್ಲುವುದು ನಮ್ಮಿಂದ ಸಾಧ್ಯವಿಲ್ಲ ಎಂದು ಎಲೆಕೋಸು ಬೆಳೆದ ರೈತ ಶಂಕರಪ್ಪ ಲಮಾಣಿ ಹೇಳಿದರು.

PREV
Read more Articles on
click me!

Recommended Stories

ಸಮೋಸಾ ಪ್ರಿಯರೇ ಎಚ್ಚರ : ಬೆಂಗಳೂರಿಗೆ ಸಪ್ಲೈ ಆಗುವ ಈ ಘಟಕ ನೋಡಿದ್ರೆ ಜೀವನದಲ್ಲಿ ತಿನ್ನೋದೇ ಇಲ್ಲ
Basavaraj Rayareddi ಇಸ್ಲಾಂ ಹೊಗಳಿದ ರಾಯರೆಡ್ಡಿಗೆ ಮುಸ್ಲಿಂ ಪೋಷಾಕು! ಹಜ್‌ ಯಾತ್ರೆಗೆ ದೇಣಿಗೆ ಅಭಿಯಾನಕ್ಕೆ ಮುಂದಾದ ಕಾರ್ಯಕರ್ತರು!