Haveri; ಗಂಡಂದಿರ ಕುಡಿತದ ಚಟಕ್ಕೆ ಬೇಸತ್ತು ಮೋದಿಗೆ ಪತ್ರ ಬರೆಯಲು ಮುಂದಾದ ಪತ್ನಿಯರು

By Suvarna News  |  First Published Jul 8, 2022, 5:56 AM IST

ಕುಡುಕ ಗಂಡ, ಕಿತ್ತು ತಿನ್ನೋ‌ ಬಡತನ. ಮಕ್ಕಳನ್ನು ಓದಿಸೋಕೆ ಅಂತ ಕೂಡಿಟ್ಟ ಹಣ ಸಾರಾಯಿ ಅಂಗಡಿ ಪಾಲು. ಕುಡುಕ ಗಂಡಂದಿರ ಸಹವಾಸಕ್ಕೆ ಬೇಸತ್ತು ಹಾವೇರಿ ಮಹಿಳೆಯರು ಪ್ರಧಾನಿ ಮೊದಿಗೆ ಮಂಗಳಸೂತ್ರ ಸಹಿತ ಪತ್ರ ಬರೆಯಲು ಮುಂದಾಗಿದ್ದಾರೆ.


ವರದಿ: ಪವನ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ (ಜು.8): ಕುಡುಕ ಗಂಡ, ಕಿತ್ತು ತಿನ್ನೋ‌ ಬಡತನ. ಮಕ್ಕಳನ್ನು ಓದಿಸೋಕೆ ಅಂತ ಕೂಡಿಟ್ಟ ಹಣ ಸಾರಾಯಿ ಅಂಗಡಿ ಪಾಲು. ಕುಡುಕ ಗಂಡಂದಿರ ಸಹವಾಸದಿಂದ ಈ ಮಹಿಳೆಯರು ಮಾಡಿದ್ದು ಕೇಳಿದರೆ ನಿಮಗೂ ಆಶ್ವರ್ಯ ಆಗಬಹುದು. ಈ ಸ್ಟೋರಿ ಓದಿ.

Tap to resize

Latest Videos

undefined

ಸಾರಾಯಿ ಚಟ ಅನ್ನೋದು ಕುಟುಂಬದ ನೆಮ್ಮದಿ ಹಾಳು ಮಾಡೋದಲ್ಲದೆ ಆರೋಗ್ಯವೂ ಹದಗೆಟ್ಟು ಚಟ್ಟ ಏರೋ ಬಹುದೊಡ್ಡ ಪಿಡುಗು. ಗ್ರಾಮಗಳಲ್ಲಿ  ಸಣ್ಣ ಸಣ್ಣ ಬೀಡಿ ಅಂಗಡಿ, ದಿನಸಿ ಅಂಗಡಿ , ಎಗ್ ರೈಸ್ ಅಂಗಡಿಗಳಲ್ಲಿ  ಯಥೇಚ್ಛವಾಗಿ ಸಿಗ್ತಿರೋ ಸಾರಾಯಿ ಕುಡಿದು ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಕುಡಿದು ಕುಡಿದು ಲಿವರ್ ಡ್ಯಾಮೇಜ್ ಆಗಿ ಸತ್ತವರೆಷ್ಟು ಅನ್ನೋದನ್ನ ಲೆಕ್ಕ ಹಾಕೋಕೂ ಆಗಲ್ಲ ಬಿಡಿ.

ಇಷ್ಟೆಲ್ಲಾ ಅನಾಹುತ ಆದರೂ ಸರ್ಕಾರಕ್ಕೆ ಸಾರಾಯಿನೇ ಬೊಕ್ಕಸ ತುಂಬಿಸೋ ಕಾಮಧೇನು ಆಗಿಬಿಟ್ಟಿದೆ. ಕುಡುಕ ಗಂಡಂದಿರ ಕಾಟ ತಾಳಲಾಗದೇ  ಹೆಣ್ಣು ಮಕ್ಕಳು ಮನೆ ,ಊರು ಬಿಟ್ಟು ಹೋದ ಉದಾಹರಣೆಗಳೂ ಇದೆ. ಇದೇ ರೀತಿ  ಕುಡುಕ ಗಂಡಂದಿರ ಕಾಟ ತಾಳಲಾಗದೇ ಗ್ರಾಮವೊಂದರ ಹೆಣ್ಣು ಮಕ್ಕಳು ಪ್ರಧಾನಿ ಮೋದಿಯವರಿಗೆ ಮಾಂಗಲ್ಯವನ್ನೇ ಕಳಿಸಲು ಮುಂದಾಗಿದ್ದಾರೆ.

Chitradurga: ಕರ್ನಾಟಕದಲ್ಲಿ ಮದ್ಯ ಮಾರಾಟಗಾರರಿಗೆ ಸಕಾಲಕ್ಕೆ ಮದ್ಯ ಸಿಗದೆ ದುಸ್ಥಿತಿ ನಿರ್ಮಾಣ!

ಅಷ್ಟಕ್ಕೂ  ಕೊರಳ ತಾಳಿಯನ್ನೇ ಪ್ರಧಾನಿಗೆ ಈ ಮಹಿಳೆಯರು ಕಳಿಸಿಕೊಡಲು ಕಾರಣ ಇದೆ.  ಇಲ್ಲಿ ಆಕ್ರೋಶದಿಂದ  ಮಾತಾಡ್ತಿರೋ ಈ ಮಹಿಳೆಯರು ಹಾವೇರಿ ತಾಲೂಕು ಮರಡೂರು ಗ್ರಾಮದವರು. ಮನೆಯಲ್ಲಿರೋ ಸಾಮಾನುಗಳನ್ನು ಮಾರಿ ಸಾರಾಯಿ ಕುಡಿಯೋ ಗಂಡಂದಿರು. ಕೂಲಿ ಮಾಡಿ ಮನೆಗೆ ದಿನಸಿ ತರಬೇಕು ಅನ್ನುವಷ್ಟರಲ್ಲಿ ಕೈಯಲ್ಲಿರೋ ಕಾಸು ಕಿತ್ತುಕೊಂಡು ಸಾರಾಯಿ ಕುಡಿಯೋ  ಯುವಕರು. ಇದನ್ನೆಲ್ಲಾ  ಅನುಭವಿಸಿ ನರಕ ಯಾತನೆ ಪಡ್ತಿರೋ ಈ  ತಾಯಂದಿರ ಗೋಳು ಹೇಳ ತೀರದು.  ಗಂಡ ಮನ್ಯಾಗ ಇರೋ ಎಲ್ಲಾ ಸಾಮಾನು ಮಾರಿ ಕುಡದ ಜೋಲಿ ಹೊಡೆದುಕೊಂಡ ಮನಿಗೆ ಬರ್ತಾನ್ರಿ. ಕಿವಿಯಲ್ಲಿರೋ ಓಲೆ ಸಹಿತ ಮಾರಿದ್ದಾನೆ ರೀ.. ಹೀಗೆ ಆಕ್ರೋಶದಿಂದ ಮಾತಾಡ್ತಿರೋ ಈ ಹೆಣ್ಣು ಮಕ್ಕಳು ಸಾರಾಯಿಯಿಂದ ಅನುಭವಿಸ್ತಿರೋ ನೋವು ಒಂದೆರಡಲ್ಲ.

ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಅದ್ಯಾಕೋ ಕದ್ದು ಸಾರಾಯಿ ಮಾರೋರ ಮೇಲೆನೇ ಈ ಅಬಕಾರಿ ಇಲಾಖೆಗೆ ಪ್ರೀತಿ. ಹೀಗಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಸ್ಥಳೀಯ ಶಾಸಕರಿಗೆ ಹೇಳಿದರೂ ಪ್ರಯೋಜನ ಇಲ್ಲ. ಕುಡಿದ ಮತ್ತಿನಲ್ಲಿ ಗಂಡ ಮನೆಯಲ್ಲಿ ಗಲಾಟೆ ಮಾಡ್ತಾನೆ ಅಂತ ಹೇಳಿದರೆ ಪೊಲೀಸರೂ ಕ್ಯಾರೇ ಅನ್ನಲ್ಲ. 

ಎಣ್ಣೆ ಪ್ರಿಯರಿಗೊಂದು ಕಹಿ ಸುದ್ದಿ: ನಾಳೆಯಿಂದ ಮದ್ಯದಂಗಡಿ ಬಂದ್‌..!

ಹೀಗಾಗಿ ಈ ಮಹಿಳೆಯರು  ನೇರವಾಗಿ ಮೋದಿಯವರಿಗೇ ಪತ್ರ ಬರೆಯೋಕೆ ಮುಂದಾಗಿದ್ದಾರೆ. ತಾಳಿ ಸಮೇತ ಮನವಿ ಪತ್ರ ಕಳಿಸಿಕೊಡೋಕೆ ಮುಂದಾಗಿದ್ದಾರೆ. ಹಾವೇರಿ ತಾಲೂಕು ಮರಡೂರು ಗ್ರಾಮದ ದುರ್ಗಾದೇವಿ ದೇವಸ್ಥಾನದ ಮುಂದೆ ಪ್ರತಿಭಟನೆ ಮಾಡಿ ಆಕ್ರೋಶ  ಹೊರ ಹಾಕಿದ ಮಹಿಳೆಯರು ಪ್ರಧಾನಿಗಳಿಗೆ ತಾಳಿ ಸಮೇತ ಮನವಿ ಕಳಿಸಿಕೊಡೋ ಸಿದ್ದತೆಯಲ್ಲಿ ತೊಡಗಿರೋ ದೃಷ್ಯ ಕಂಡು ಬಂತು. ಪ್ರಧಾನಿ ಮೋದಿಯವರೇ ಈ ಸಮಸ್ಯೆ ಬಗೆಹರಿಸಲಿ. ನಮ್ಮ ಮಾಂಗಲ್ಯ ಉಳಿಸಲಿ‌ ಎಂದು ನೋವಿನಿಂದಲೇ ತಾಳಿ ಕಳಿಸಿಕೊಡಲು ಮುಂದಾಗಿದ್ದಾರೆ.

ನಮ್ಮ ಮನೆಯ ಗಂಡಸರೆಲ್ಲಾ ಸಾರಾಯಿಗೆ ದಾಸರಾಗಿದ್ದಾರೆ. ಇದನ್ನು ಪ್ರಶ್ನಿಸಿದರೆ ನಿಮ್ಮ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಅಂತಾರೆ. ಹೀಗಂತ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಬದುಕಿನ ನೆಮ್ಮದಿ ಕಳೆದುಕೊಂಡ ನೊಂದ ಮಹಿಳೆಯರ ಕಣ್ಣೀರು  ಹಾಕ್ತಿದ್ದಾರೆ.ಹಾಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರೋ‌ ಮರಡೂರು ಗ್ರಾಮದ 20 ಕ್ಕೂ ಹೆಚ್ಚು ಮಹಿಳೆಯರು, ಗ್ರಾಮ ಪಂಚಾಯತಿ ‌ಪಿಡಿಒ, ತಹಸೀಲ್ದಾರ್ ಸೇರಿದಂತೆ ‌ ಹಲವು ಅಧಿಕಾರಿಗಳಿಗೆ ಮದ್ಯ ನಿಷೇಧ ಮಾಡುವಂತೆ ಮನವಿ ಮಾಡಿದ್ದಾರೆ.

ಹಾಲಗಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿ‌ ಪಿಡಿಒಗೆ ಮನವಿ ಮಾಡಿದ್ದಾರೆ.ಆದರೆ ಯಾವುದೇ ಪ್ರಯೋಜನ ಆಗಿಲ್ಲ.ಮರಡೂರು ಗ್ರಾಮದಲ್ಲಿ  ಸುಮಾರು 12 ಕಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿದ್ದಾರೆ. ಗಂಡಸರು ದಿನವಿಡೀ ದುಡಿದ ಹಣವನ್ನೆಲ್ಲಾ ಸಾರಾಯಿಗೆ ಖರ್ಚು ಮಾಡ್ತಿದ್ದಾರೆ. ತಮ್ಮ ಗಂಡಂದಿರ ಆರೋಗ್ಯ ಸಂಪೂರ್ಣ ಹಾಳಾಗ್ತಿದೆ. ಅವರು ಮನೆಯಲ್ಲಿರೋ ವಸ್ತುಗಳನ್ನು ಸಹ ಮಾರಿ ಮದ್ಯ ಸೇವನೆ ಮಾಡ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಅಂತ ಮಹಿಳೆಯರು ಆಗ್ರಹಿಸಿದ್ದಾರೆ..

ಇತ್ತ  ತಮ್ಮ ಊರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿರೋ ಅಂಗಡಿಗಳ ಮೇಲೆ ಮಹಿಳೆಯರೇ ರೈಡ್ ಮಾಡಿದ್ರು. ಸಾರಾಯಿ ಮಾರೋರ ಜೊತೆ ಜಗಳ ಮಾಡಿದ್ದಲ್ಲದೇ, ದೊಡ್ಡ ವಾಗ್ವಾದವನ್ನೇ ಮಾಡಿದರು.  ವಿಷಯ ತಿಳಿದು ಬಂದ ಅಬಕಾರಿ ಇನ್ಸ್ಪೆಕ್ಟರ್ ಸೇರಿದಂತೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಮಹಿಳೆಯರು ಹಿಡಿ ಶಾಪ ಹಾಕಿದರು. ತಮ್ಮ ಊರಿನಲ್ಲಿ ಮದ್ಯ ಸಂಪೂರ್ಣ ನಿಷೇಧ ಆಗಲಿ ಅನ್ನೋದು ನೊಂದ ಮಹಿಳೆಯರ ಆಗ್ರಹ. ಸರ್ಕಾರ ಕಿವಿ ಇದ್ದೂ ಕಿವುಡಾಗುತ್ತಾ? ಅಥವಾ ಈ ಮಹಿಳೆಯರ ನೋವಿಗೆ ನ್ಯಾಯ ಸಿಗುತ್ತಾ ಕಾಯ್ದು ನೋಡಬೇಕಿದೆ.

click me!