ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿರುವ ಏಲಕ್ಕಿ ಕಂಪಿನ ನಗರಿ

By Kannadaprabha News  |  First Published Jan 1, 2023, 2:36 PM IST

ನುಡಿ ಜಾತ್ರೆಗೆ ಇನ್ನು ಐದೇ ದಿನಗಳು ಬಾಕಿಯಿದ್ದು, ಹಾವೇರಿ ನಗರದಲ್ಲಿ ಸಮರೋಪಾದಿಯಲ್ಲಿ ಸಮ್ಮೇಳನದ ತಯಾರಿ ನಡೆಯುತ್ತಿವೆ. ಬೃಹತ್‌ ವೇದಿಕೆ, ದೀಪಾಲಂಕಾರ, ಸ್ವಚ್ಛತೆ, ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮದುವಣಗಿತ್ತಿಯಂತೆ ಏಲಕ್ಕಿ ನಗರಿ ಸಜ್ಜುಗೊಳ್ಳುತ್ತಿದೆ.


(ನಾರಾಯಣ ಹೆಗಡೆ

ಹಾವೇರಿ (ಜ.1) : ನುಡಿ ಜಾತ್ರೆಗೆ ಇನ್ನು ಐದೇ ದಿನಗಳು ಬಾಕಿಯಿದ್ದು, ಹಾವೇರಿ ನಗರದಲ್ಲಿ ಸಮರೋಪಾದಿಯಲ್ಲಿ ಸಮ್ಮೇಳನದ ತಯಾರಿ ನಡೆಯುತ್ತಿವೆ. ಬೃಹತ್‌ ವೇದಿಕೆ, ದೀಪಾಲಂಕಾರ, ಸ್ವಚ್ಛತೆ, ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮದುವಣಗಿತ್ತಿಯಂತೆ ಏಲಕ್ಕಿ ನಗರಿ ಸಜ್ಜುಗೊಳ್ಳುತ್ತಿದೆ.

Tap to resize

Latest Videos

undefined

ಸಾಹಿತಿ ದೊಡ್ಡರಂಗೇಗೌಡರ(Doddarangegowda) ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದ್ದು, ಇದುವರೆಗೆ ಮಂದಗತಿಯಲ್ಲಿ ನಡೆಯುತ್ತಿದ್ದ ಸಿದ್ಧತಾ ಕಾರ್ಯ ಕೊನೆ ಗಳಿಗೆಯಲ್ಲಿ ವೇಗ ಪಡೆದುಕೊಂಡಿದೆ. ಅಜ್ಜಯ್ಯನ ಗದ್ದುಗೆ ಎದುರಿನ ನೂರಾರು ಎಕರೆ ವಿಶಾಲ ಜಾಗೆಯಲ್ಲಿ ಬೃಹತ್‌ ವೇದಿಕೆ ನಿರ್ಮಾಣವಾಗುತ್ತಿದೆ. ಮುಖ್ಯ ವೇದಿಕೆ, ಎರಡು ಸಮಾನಾಂತರ ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ಹೆಲ್ಪ್‌ ಡೆಸ್‌್ಕ, ಆರೋಗ್ಯ ಡೆಸ್‌್ಕ ನಿರ್ಮಾಣಗೊಂಡಿವೆ. ವೇದಿಕೆ ಹಿಂಭಾಗದಲ್ಲಿ ಮಾಧ್ಯಮ ಕೇಂದ್ರ, ಸಮೀಪದಲ್ಲೇ ಊಟದ ಕೌಂಟರ್‌ಗಳ ಸಿದ್ಧತೆ ಕೊನೆಯ ಹಂತದಲ್ಲಿದೆ. ಜರ್ಮನ್‌ ತಂತ್ರಜ್ಞಾನದಲ್ಲಿ ವೇದಿಕೆ ನಿರ್ಮಾಣ ಮಾಡುತ್ತಿದ್ದು, ಕಾರ್ಮಿಕರು ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ. ಮುಖ್ಯ ವೇದಿಕೆ, ಎರಡು ಸಮಾನಾಂತರ ವೇದಿಕೆಗಳ ನಿರ್ಮಾಣ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ನೆಲಹಾಸು ಹಾಕುವ, ಮುಖ್ಯ ದ್ವಾರಗಳ ಶೃಂಗಾರ ಕಾರ್ಯ ನಡೆಯುತ್ತಿದೆ. 50 ಎಕರೆಗೂ ಹೆಚ್ಚು ಜಾಗದಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಮರನ್ನು ಕಡೆಗಣಿಸಿಲ್ಲ: ಮಹೇಶ ಜೋಶಿ

ಸಮ್ಮೇಳನದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದ್ದು, ಯಾವುದೇ ಸಮಸ್ಯೆಯಾಗದಂತೆ ಸಕಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ.

ಅದಕ್ಕಾಗಿ ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಭರದಿಂದ ನಡೆದಿದೆ. ನಗರದ ರಸ್ತೆಗಳು ದುರಸ್ತಿ ಪಡಿಸುವ ಕಾರ್ಯ ನಡೆಯುತ್ತಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಿ ಬರುವ ಎಂ.ಜಿ. ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನಗರ ಸ್ವಚ್ಛತೆ, ಗೋಡೆ ಬರಹ, ಫ್ಲೆಕ್ಸ್‌ ಅಳವಡಿಕೆ, ನಗರದ ವಿವಿಧ ವೃತ್ತ, ಪ್ರಮುಖ ರಸ್ತೆಗಳಲ್ಲಿ ವಿದ್ಯುತ್‌ ದೀಪಾಲಂಕಾರ ಇತ್ಯಾದಿ ಕಾರ್ಯಗಳು ನಡೆಯುತ್ತಿವೆ.

ಜಿಲ್ಲೆಯ ಕಲಾವಿದರ ತಂಡ, ಮೆರವಣಿಗೆ ಸಾಗುವ ನಗರದ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಕಾರ್ಯ ನಡೆಯುತ್ತಿದೆ. ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಹಿಡಿದು ನಗರಸಭೆ, ಗಾಂಧಿಸರ್ಕಲ್‌, ಜೆಪಿ ಸರ್ಕಲ್‌, ಹೊಸಮನಿ ಸಿದ್ದಪ್ಪ ವೃತ್ತ, ಬಸ್‌ ನಿಲ್ದಾಣ, ಪ್ರವಾಸಿ ಮಂದಿರ, ಕೋರ್ಚ್‌ ಮುಂಭಾಗ, ಇಜಾರಿಲಕಮಾಪುರದ ಸರ್ಕಾರಿ ಶಾಲೆಯ ಆವರಣ, ತೋಟಗಾರಿಕೆ ಇಲಾಖೆ ಕಾಂಪೌಂಡ್‌, ನಗರ ಪೊಲೀಸ್‌ ಠಾಣೆಯ ಕಾಂಪೌಂಡ್‌ ಗೋಡೆ, ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಕಮಾನಿನವರೆಗೂ ಚಿತ್ತಾಕರ್ಷಕ ವರ್ಲಿ ಚಿತ್ರಗಳು ಗಮನ ಸೆಳೆಯುತ್ತಿವೆ.

ಹಾವೇರಿ ಅಕ್ಷರ ಜಾತ್ರೆ: ಐತಿಹಾಸಿಕ ಏಲಕ್ಕಿ ಮಾಲೆ ಖರೀದಿಗೆ ಮನಸು ಮಾಡದ ಜಿಲ್ಲಾಡಳಿತ!

ಸಮ್ಮೇಳನಕ್ಕಾಗಿ ಒಂದು ಪ್ರಧಾನ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. 600 ಮಳಿಗೆಗಳನ್ನು ಹಾಕಲಾಗಿದೆ. ಜಿಲ್ಲೆಗೊಂದರಂತೆ 30 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. 10 ಸಾವಿರ ಪ್ರತಿನಿಧಿಗಳ ನೋಂದಣಿಯಾಗಿದೆ. ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಗಣ್ಯರಿಗೆ, ಮಾಧ್ಯಮದವರಿಗೆ ಪ್ರತ್ಯೇಕ ಊಟದ ವ್ಯವಸ್ಥೆ, ಮಾರ್ಗವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

-ರಘುನಂದ ಮೂರ್ತಿ, ಜಿಲ್ಲಾಧಿಕಾರಿ

ಸಮ್ಮೇಳನ ವೇದಿಕೆ ನಿರ್ಮಾಣದ ಕಾರ್ಯ ಭರದಿಂದ ಸಾಗಿದ್ದು, ಇನ್ನೆರಡು ದಿನಗಳಲ್ಲಿ ವೇದಿಕೆ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ. ಮೂರು ದಿನಗಳ ಕಾಲ ಎಲ್ಲರಿಗೂ ಉತ್ತಮ ಗುಣಮಟ್ಟದ ಊಟೋಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ವಸತಿ ಸೌಲಭ್ಯ ಸಮಸ್ಯೆಯಾಗದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

-ಲಿಂಗಯ್ಯ ಹಿರೇಮಠ, ಕಸಾಪ ಜಿಲ್ಲಾಧ್ಯಕ್ಷರು

click me!