ಬೆಂಗಳೂರು (ಜೂ.06): ಕೋವಿಡ್-19ರ ವಿರುದ್ಧದ ಲಸಿಕೆ ಅಭಿಯಾನದಲ್ಲಿ ಕರ್ನಾಟಕದ ಮಟ್ಟಿಗೆ ಉತ್ತರ ಕರ್ನಾಟಕವೇ ಬೆಸ್ಟು! ಬೆಂಗಳೂರೇ ಲಾಸ್ಟು!!. ರಾಜ್ಯದಲ್ಲಿ ಜೂ.3 ರ ಹೊತ್ತಿಗೆ ಒಟ್ಟು 28.06 ಲಕ್ಷ ಮಂದಿಗೆ ಎರಡೂ ಡೋಸ್ ಲಸಿಕೆಯನ್ನು ನೀಡಲಾಗಿತ್ತು. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 45 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆಯಲು ಆರ್ಹರಾಗಿದ್ದರು. ವಿವಿಧ ಜಿಲ್ಲೆಗಳ ಶೇಕಡಾವಾರು ಪ್ರಮಾಣವನ್ನು ಗಮನಿಸಿದಾಗ ಲಸಿಕಾ ಅಭಿಯಾನದಲ್ಲಿ ಉಕ ಭಾಗದ ಜಿಲ್ಲೆಗಳು ದಕ್ಷಿಣ ಕರ್ನಾಟಕದ ಜಿಲ್ಲೆಗಳನ್ನು ಹಿಂದಿಕ್ಕಿವೆ.
ಹಾವೇರಿ ಜಿಲ್ಲೆ ಶೇ.8.41ರ ಸಾಧನೆಯೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಕಲಬುರಗಿ ಶೇ.7.85, ರಾಯಚೂರು ಶೇ.7.10, ಬೆಳಗಾವಿ ಶೇ.6.31, ಯಾದಗಿರಿ ಶೇ.6.24, ವಿಜಯಪುರ ಶೇ.6.20, ದಾವಣಗೆರೆ ಶೇ.6.19, ಧಾರವಾಡ ಶೇ.5.33 ಮತ್ತು ಬಾಗಲಕೋಟೆ ಶೇ.5.04ರ ಸಾಧನೆ ಮಾಡಿದೆ. ರಾಜ್ಯದ ತುತ್ತುತುದಿಯಲ್ಲಿರುವ ಬೀದರ್ ಶೇ.4.94ರ ಸಾಧನೆ ಮಾಡಿದೆ.
ಕರ್ನಾಟಕದಲ್ಲಿ ಮತ್ತಷ್ಟು ತಗ್ಗಿದ ಕೊರೋನಾ, ಪಾಸಿಟಿವಿಟಿ ದರದಲ್ಲಿ ಭಾರೀ ಇಳಿಕೆ ..
ರಾಜ್ಯದ ದಕ್ಷಿಣ ಭಾಗದ ಯಾವೊಂದು ಜಿಲ್ಲೆಯೂ ಶೇ.5ಕ್ಕಿಂತ ಹೆಚ್ಚಿನ ಸಾಧನೆ ಮಾಡಿಲ್ಲ. ಆದರೆ ಉಕದ 9 ಜಿಲ್ಲೆಗಳು ಶೇ.5 ಮೀರಿ ಸಾಧನೆ ಮಾಡಿವೆ. ದಕ್ಷಿಣ ಕರ್ನಾಟಕದಲ್ಲಿ ಅತಿ ಹೆಚ್ಚು ಲಸಿಕೆ ಪಡೆದಿರುವುದು ಚಾಮರಾಜನಗರ ಜಿಲ್ಲೆ. ಚಾಮರಾಜನಗರ ಸಾಧನೆ ಶೇ.4.89 ಇದೆ.
ಬೆಂಗಳೂರು ನಗರದಲ್ಲಿ ಈವರೆಗೆ ಶೇ.2.76ರಷ್ಟುಮಂದಿಗೆ ಮಾತ್ರ ಲಸಿಕಾ ಕರಣ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ನಗರವೇ ಕೊನೆಯ ಸ್ಥಾನದಲ್ಲಿದೆ. ಮೈಸೂರು ಶೇ.3.27 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ.3.32ರಷ್ಟುಫಲಾನುಭವಿಗಳು ಮಾತ್ರ ಲಸಿಕಾ ಕರಣ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ 3 ಜಿಲ್ಲೆಗಳು ಕೊನೆಯ 3 ಸ್ಥಾನವನ್ನು ಪಡೆದಿವೆ.
ರಾಜ್ಯದಲ್ಲಿ ಜೂ.3ರ ವರೆಗೆ ಒಟ್ಟು 1.43 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟ21.16 ಲಕ್ಷ, ಆರೋಗ್ಯ ಕಾರ್ಯಕರ್ತರು 4.73 ಲಕ್ಷ ಮತ್ತು ಮುಂಚೂಣಿ ಕಾರ್ಯಕರ್ತರು 2.14 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.