
ಹಾವೇರಿ: ಮೇಲಾಧಿಕಾರಿಗಳಿಂದ ನಿರಂತರ ಕಿರುಕುಳ ಅನುಭವಿಸಿದ್ದೇನೆ ಎಂದು ಆರೋಪಿಸಿ, ಹಾವೇರಿ ಜಿಲ್ಲಾ ಆಸ್ಪತ್ರೆಯ ಡಿ-ಗ್ರೂಪ್ ನೌಕರನೊಬ್ಬ ಕರ್ತವ್ಯದ ವೇಳೆಯಲ್ಲೇ ವಿಷ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಆತ್ಮ*ಹತ್ಯೆಗೆ ಯತ್ನಿಸಿದ ನೌಕರನನ್ನು ಸಿದ್ದು ರಡ್ಡೇರ್ ಎಂದು ಗುರುತಿಸಲಾಗಿದ್ದು, ಸದ್ಯ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿದ್ದು ರಡ್ಡೇರ್ ಅವರು ಆತ್ಮ*ಹತ್ಯೆಗೆ ಯತ್ನಿಸುವ ಮೊದಲು ಒಂದು ಪತ್ರ ಬರೆದಿಟ್ಟು, ಬಳಿಕ ಜಿಲ್ಲಾಸ್ಪತ್ರೆ ಆವರಣದಲ್ಲೇ ವಿಷ ಸೇವಿಸಿದ್ದಾರೆ. ವಿಷ ಸೇವನೆಯ ನಂತರ ತೀವ್ರ ಅಸ್ವಸ್ಥಗೊಂಡ ಅವರು ವಾಂತಿ ಮಾಡಿಕೊಂಡಿದ್ದು, ತಕ್ಷಣವೇ ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ತಕ್ಷಣದ ಚಿಕಿತ್ಸೆ ಫಲವಾಗಿ ಸಿದ್ದು ರಡ್ಡೇರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿದ್ದು ರಡ್ಡೇರ್ ಕುಟುಂಬಸ್ಥರ ಆರೋಪದಂತೆ, ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ. ಸುರೇಶ್ ಕಡ್ಲಿ ಅವರು ಕ್ಷುಲ್ಲಕ ಕಾರಣಕ್ಕೆ ಸಿದ್ದು ರಡ್ಡೇರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತೀವ್ರ ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಕಿರುಕುಳವೇ ಆತ್ಮ*ಹತ್ಯೆ ಯತ್ನಕ್ಕೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
“ನಾನು ಕೆಲಸಕ್ಕೆ ಸೇರಿದ ದಿನದಿಂದಲೂ ಯಾರೊಂದಿಗೂ ಜಗಳ ಮಾಡಿಕೊಂಡಿಲ್ಲ. ಕಳೆದ ಬುಧವಾರ ಡಾ. ಸುರೇಶ್ ಕಡ್ಲಿ ಬಂದು ‘ರೋಗಿಗಳನ್ನು ಯಾಕೆ ಒಳಗೆ ಬಿಡಲಿಲ್ಲ’ ಎಂದು ನನ್ನ ಮೇಲೆ ಕೂಗಿದರು. ಸಾಮಾನ್ಯವಾಗಿ ಮೊದಲು ನರ್ಸ್‌ಗಳು ಪರಿಶೀಲಿಸಿ ರೋಗಿಗಳನ್ನು ಒಳಗೆ ಬಿಡಬೇಕು. ಆದರೆ ಆ ದಿನ ಅವರು ನನಗೆ ಅವಾಚ್ಯ ಶಬ್ದಗಳಲ್ಲಿ ಬೈದರು. ‘ನೀನು 8 ಸಾವಿರ ಸಂಬಳಕ್ಕೆ ಕೆಲಸ ಮಾಡುವವನು’ ಎಂದು ಅವಮಾನಿಸಿದರು.
8 ಸಾವಿರ ರೂಪಾಯಿ ಸಂಬಳವನ್ನು ಸರ್ಕಾರ ನೀಡುತ್ತದೆ, ಅವರು ನನ್ನ ಸಂಬಳ ಕೊಡೋದಿಲ್ಲ. ಅವರು ದೊಡ್ಡ ಶ್ರೀಮಂತರು ಇರಬಹುದು, ಆದರೆ ಅವರ ಶ್ರೀಮಂತಿಕೆ ಅವರಲ್ಲೇ ಇರಲಿ. ನಮಗೆ ಈ ರೀತಿ ಬೈಯುವ ಹಕ್ಕು ಅವರಿಗೆ ಇಲ್ಲ. ಒಂದು ವಾರದಿಂದ ನನಗೆ ನಿದ್ರೆ ಬಂದಿಲ್ಲ. ತೀವ್ರ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ,” ಎಂದು ಗೋಳು ತೋಡಿಕೊಂಡಿದ್ದಾರೆ.
ಸಿದ್ದು ರಡ್ಡೇರ್ ಪತ್ನಿ ಕಾವ್ಯಾ ಅವರು ಈ ಕುರಿತು ಮಾತನಾಡುತ್ತಾ, “ನನ್ನ ಗಂಡ ಡ್ಯೂಟಿ ಮೇಲೆ ಇದ್ದಾಗಲೇ ಎರಡು ಗಂಟೆಗಳ ಕಾಲ ಬೈದಿದ್ದಾರೆ. ಅವರು ತಮ್ಮ ಮನೆಯ ದುಡ್ಡು ತಂದು ನನ್ನ ಗಂಡನಿಗೆ ಸಂಬಳ ಕೊಡ್ತಾರಾ? ಇಷ್ಟೊಂದು ಕಿರುಕುಳ ಕೊಟ್ಟಿದ್ದರೆ ಎಷ್ಟು ಡಿಪ್ರೆಷನ್ ಆಗಿರಬೇಕು?
ಡಾ. ಸುರೇಶ್ ಕಡ್ಲಿ ತಾವು ಮಾತ್ರ ಬೈದಿಲ್ಲ, ಮೇಲಾಧಿಕಾರಿಗಳಿಂದಲೂ ಬೈಯಿಸಿದ್ದಾರೆ. ನಾವು ಬೆಳಗಾವಿಯವರು. ಟ್ರಾನ್ಸ್‌ಫರ್ ಮಾಡಿಕೊಂಡು ಹೋಗೋಣ ಎಂದರೂ ಅವಕಾಶ ನೀಡಲಿಲ್ಲ. ಒಂದು ವಾರದಿಂದ ನನ್ನ ಗಂಡ ತುಂಬಾ ಬೇಸರದಲ್ಲಿದ್ದರು. ಇಂತಹ ಸಿಬ್ಬಂದಿಗೆ ಈ ರೀತಿ ಟಾರ್ಚರ್ ಕೊಟ್ಟರೆ ಅವರು ಏನು ಮಾಡಬೇಕು? ಅವರಿಗೆ ಏನಾದರೂ ಆಗಿದ್ದರೆ ಯಾರು ಹೊಣೆ? ಅವರಿಗೂ ಹೆಂಡತಿ, ಮಕ್ಕಳು ಇದ್ದಾರೆ ಅಂತ ಯೋಚನೆ ಮಾಡಬೇಕಲ್ವಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪರಸಪ್ಪ ಚುರ್ಚಿಹಾಳ ಅವರು ಸ್ಪಷ್ಟನೆ ನೀಡಿದ್ದು, “ಡಿ-ಗ್ರೂಪ್ ನೌಕರ ಸಿದ್ದು ರಡ್ಡೇರ್ ಗಿಡಗಳಿಗೆ ಸಿಂಪಡಿಸುವ ಪೌಡರ್ ಸೇವಿಸಿದ್ದಾನೆ. ಆಸ್ಪತ್ರೆ ಆವರಣದಲ್ಲಿ ವಾಂತಿ ಮಾಡಿಕೊಂಡ ಬಳಿಕ ನಮ್ಮ ಸಿಬ್ಬಂದಿ ಆತನನ್ನು ಕರೆದುಕೊಂಡು ಬಂದು ದಾಖಲಿಸಿದ್ದಾರೆ. ತಕ್ಷಣ ಚಿಕಿತ್ಸೆ ನೀಡಿ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವೈದ್ಯರು ಬೈದ ಕಾರಣ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಮಾಹಿತಿ ಈಗ ಕೇಳಿಬರುತ್ತಿದೆ. ಈ ಕುರಿತು ಡಾ. ಸುರೇಶ್ ಕಡ್ಲಿ ಅವರಿಂದ ಸ್ಪಷ್ಟನೆ ಪಡೆಯಲಾಗುವುದು. ಸಿದ್ದು ನಮ್ಮ ಜೊತೆ ಓಟಿಯಲ್ಲೂ ಕೆಲಸ ಮಾಡಿದ್ದಾನೆ. ಕೆಲಸದಲ್ಲಿ ಚುರುಕಾಗಿದ್ದ, ಉತ್ತಮ ಗುಣ ಹೊಂದಿದ್ದ ನೌಕರ. ಈಗ ಚಿಕಿತ್ಸೆ ನಡೆಯುತ್ತಿರುವಾಗ ಆತನನ್ನು ವಿಚಾರಣೆ ಮಾಡುವುದು ಸೂಕ್ತವಲ್ಲ. ಚೇತರಿಸಿಕೊಂಡ ಬಳಿಕ ನಾವೇ ಖುದ್ದಾಗಿ ಮಾತನಾಡುತ್ತೇವೆ,” ಎಂದು ತಿಳಿಸಿದ್ದಾರೆ.