
ಹಾಸನ (ಸಕಲೇಶಪುರ): ಮಲೆನಾಡಿನ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಹೆತ್ತೂರು ಹೋಬಳಿಯ ಹೊಸಹಳ್ಳಿ ಬೆಟ್ಟ ಹಾಗೂ ಕಾಗಿಹರೆ ವೀಕ್ಷಣಾ ಸ್ಥಳಗಳಿಗೆ ಪ್ರವಾಸಿಗರ ವಾಹನಗಳ ಪ್ರವೇಶವನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ.
ಇತ್ತೀಚಿನ ದಿನಗಳಲ್ಲಿ ಹೊಸಹಳ್ಳಿ ಬೆಟ್ಟ ಮತ್ತು ಕಾಗಿಹರೆ ಸೇರಿದಂತೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವೇಳೆ ಕೆಲವರು ಅರಣ್ಯ ಪ್ರದೇಶದೊಳಗೆ ಅನಧಿಕೃತವಾಗಿ ವಾಹನಗಳನ್ನು ಚಲಾಯಿಸಿ ಆಫ್ ರೋಡ್ ಚಾಲನೆ ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿತ್ತು. ಇದರಿಂದ ಅರಣ್ಯ ಪರಿಸರ ಮತ್ತು ವನ್ಯಜೀವಿಗಳಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ಅರಣ್ಯ ಪ್ರದೇಶದಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ಮೇಲ್ಮಣ್ಣು ಸಡಿಲಗೊಂಡು ಭೂಮಿಯ ಸ್ವಾಭಾವಿಕ ರಚನೆಗೆ ಧಕ್ಕೆಯಾಗುತ್ತದೆ. ಮಳೆಗಾಲದಲ್ಲಿ ಇದು ಭೂಕುಸಿತದಂತಹ ಅಪಾಯಗಳಿಗೆ ಕಾರಣವಾಗುವ ಸಾಧ್ಯತೆಯಿದ್ದು, ವಾಹನಗಳ ಹೊಗೆ ಹಾಗೂ ಶಬ್ದದಿಂದ ವನ್ಯಜೀವಿಗಳು ಮತ್ತು ಪಕ್ಷಿಗಳ ಸಹಜ ವಾಸಸ್ಥಾನಕ್ಕೂ ತೊಂದರೆಯಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಹೊಸಹಳ್ಳಿ ಬೆಟ್ಟ ಹಾಗೂ ಕಾಗಿಹರೆ ವೀಕ್ಷಣಾ ಸ್ಥಳಗಳಲ್ಲಿ ವಾಹನ ಪ್ರವೇಶ ನಿಷೇಧದ ನಾಮಫಲಕಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರು ತಮ್ಮ ವಾಹನಗಳನ್ನು ಬೆಟ್ಟದ ಕೆಳಭಾಗದಲ್ಲಿ ನಿಲ್ಲಿಸಿ ಕಾಲ್ನಡಿಗೆಯ ಮೂಲಕ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಪ್ರವಾಸಿಗರ ಪ್ರವೇಶಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ; ಕೇವಲ ವಾಹನಗಳ ಸಂಚಾರಕ್ಕೆ ಮಾತ್ರ ನಿಷೇಧ ಹೇರಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ. ಪ್ರವಾಸಿಗರು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಂತೆ, ಅರಣ್ಯ ಪರಿಸರಕ್ಕೆ ಹಾನಿಯಾಗದಂತೆ ಹಾಗೂ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಂತೆ ಇಲಾಖೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ವೆಂಕಟೇಶ್ ಹಾಗೂ ಸಿಬ್ಬಂದಿಯಾದ ಪ್ರೇಮ್ ಕುಮಾರ್, ಅಕಿಲ್, ಪರಮೇಶ್, ಆಕರ್ಷ, ಮುರಗನ್ ಮತ್ತು ವಿಶ್ವನಾಥ್ ಉಪಸ್ಥಿತರಿದ್ದರು.