Hassan: ಆಟೋ, ಟ್ಯಾಕ್ಸಿ ಚಾಲಕರ 25 ವರ್ಷಗಳ ಕನಸು ನನಸು: ಬಿಸಿಲು-ಮಳೆಯಿಂದ ರಕ್ಷಣೆ

Published : Oct 03, 2026, 08:33 AM IST
Sakaleshpur Auto Stand

ಸಾರಾಂಶ

ಆಟೋ, ಟ್ಯಾಕ್ಸಿ ವಾಹನ ಚಾಲಕರ 25 ವರ್ಷಗಳ ಬಹುದಿನಗಳ ಬೇಡಿಕೆ ಈಡೇರಿದ್ದು, ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಸಿಕ್ಕಿದೆ. ವಾಹನ ಚಾಲಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕರು ಹೇಳಿದ್ದಾರೆ.

ಹಾಸನ: ಆಟೋ ಹಾಗೂ ಟ್ಯಾಕ್ಸಿ ಚಾಲಕರ ಅನುಕೂಲಕ್ಕಾಗಿ ಪಟ್ಟಣದಲ್ಲಿ ನೂತನ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿಗೆ ಇನ್ನಷ್ಟು ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಿಸಿರುವ ನೂತನ ಆಟೋ ನಿಲ್ದಾಣ ಹಾಗೂ ಟ್ಯಾಕ್ಸಿ ನಿಲ್ದಾಣಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಕಲೇಶಪುರ ಪಟ್ಟಣವು ಅತ್ಯಂತ ಕಿರಿದಾಗಿದ್ದು, ಹೊಸ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿರುವಷ್ಟು ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಲಭ್ಯವಿರುವ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹಳೆ ಬಸ್ ನಿಲ್ದಾಣದ ಸಮೀಪ ಆಟೋ ಚಾಲಕರಿಗೆ ನೂತನ ಆಟೋ ನಿಲ್ದಾಣ ನಿರ್ಮಿಸಲಾಗಿದ್ದು, ಇದರಿಂದ ರಸ್ತೆಯ ಬದಿಯಲ್ಲಿ ಬಿಸಿಲು ಹಾಗೂ ಮಳೆಯಲ್ಲಿ ವಾಹನಗಳನ್ನು ನಿಲ್ಲಿಸುವ ಪರಿಸ್ಥಿತಿ ತಪ್ಪಲಿದೆ ಎಂದರು.

ಟ್ಯಾಕ್ಸಿ ನಿಲ್ದಾಣಕ್ಕೆ ಹಿಂದಿನ ಶಾಸಕರ ಅವಧಿಯಲ್ಲಿ ಮೇಲ್ಚಾವಣಿ ನಿರ್ಮಿಸಲಾಗಿತ್ತು. ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಟ್ಯಾಕ್ಸಿ ಚಾಲಕರಿಗೂ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣದ ವಿವಿಧ ಭಾಗಗಳಲ್ಲಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

25 ವರ್ಷಗಳ ಬೇಡಿಕೆ ಈಡೇರಿಕೆ:

ಆಟೋ ಚಾಲಕರು ಮಾತನಾಡಿ, ಸುಮಾರು 25 ವರ್ಷಗಳ ನಂತರ ಇದೇ ಸ್ಥಳದಲ್ಲಿ ನೂತನ ಆಟೋ ನಿಲ್ದಾಣ ನಿರ್ಮಾಣವಾಗಿರುವುದು ಸಂತಸ ತಂದಿದೆ. ಇಷ್ಟು ವರ್ಷಗಳ ಕಾಲ ರಸ್ತೆಯ ಬದಿಯಲ್ಲಿ ಬಿಸಿಲು ಹಾಗೂ ಮಳೆಯನ್ನು ಲೆಕ್ಕಿಸದೆ ಆಟೋಗಳನ್ನು ನಿಲ್ಲಿಸಬೇಕಾಗಿತ್ತು. ಇದೀಗ ಸುಸಜ್ಜಿತ ನಿಲ್ದಾಣ ನಿರ್ಮಾಣವಾಗಿರುವುದರಿಂದ ಚಾಲಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.

ಶಾಸಕ ಸಿಮೆಂಟ್ ಮಂಜು ಅವರ ಪ್ರಯತ್ನದಿಂದ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಬಹುದಿನಗಳ ಸಮಸ್ಯೆಗೆ ಪರಿಹಾರ ದೊರೆತಿದೆ. ಮುಂದಿನ ದಿನಗಳಲ್ಲಿಯೂ ಚಾಲಕರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಹಿಂದೂ ಮುಖಂಡ ರಘು, ಮಲೆನಾಡು ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಟ್ಯಾಕ್ಸಿ ಸಂಘದ ಅಧ್ಯಕ್ಷ ಗಣೇಶ್ ಆಟೋ ಚಾಲಕರ ಸಂಘದ ಅಧ್ಯಕ್ಷ ಯೋಗೇಶ್ ಪದಾಧಿಕಾರಿಗಳು ಸೇರಿದಂತೆ ಚಾಲಕರು ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

426 ಕೋಟಿಯ ಹಾಸನ-ಬೇಲೂರು ಚತುಷ್ಪಥ ರಸ್ತೆ ಕಾಮಗಾರಿ, ಭೂಸ್ವಾಧೀನ ಪ್ರಕ್ರಿಯೆ ಯಾವಾಗ?
ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ! ರಾಯಚೂರು ಮೂಲದ ಆರು ಜನ ಗಂಭೀರ ಗಾಯ!