
ಬೆಂಗಳೂರು: ಬಿಡಿಎ ನಮ್ಮ ಸ್ವಂತ ಜಾಗಗಳಲ್ಲಿ, ಅಷ್ಟೇ ವಿಸ್ತೀರ್ಣದ ಬದಲಿ ನಿವೇಶನ ನೀಡಬೇಕೆಂದು ಶಿವರಾಮ ಕಾರಂತ್ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ಕಂದಾಯ ನಿವೇಶನಗಳ ಮಾಲೀಕರು ಒತ್ತಾಯಿಸಿದರು.
ಶುಕ್ರವಾರ ಶಿವರಾಮ ಕಾರಂತ್ ಬಡಾವಣೆ ವ್ಯಾಪ್ತಿಯ ಲಕ್ಷ್ಮೀಪುರದ ಬಳಿ ಸಭೆ ನಡೆಸಿದ ಕಂದಾಯ ನಿವೇಶನದಾರರು, ಕಳೆದ 10 ವರ್ಷಗಳಿಂದ ನಮ್ಮ ಸ್ವಂತ ನಿವೇಶನಗಳನ್ನು ಬಿಡಿಎಗೆ ನೀಡಿ ಅಕ್ಷರಷಃ ನಿರಾಶ್ರಿತರಾಗಿದ್ದೇವೆ. ಪ್ರತಿ ವರ್ಷ ನಮ್ಮ ನಿವೇಶನಗಳಿಗೆ ಕಟ್ಟಬೇಕಿದ್ದ ಶುಲ್ಕವನ್ನು ತಪ್ಪದೇ ಕಟ್ಟಿದ್ದೇವೆ, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಟ್ಟು ಖರೀದಿಸಿದ್ದ ನಿವೇಶನದಲ್ಲಿ ಆರ್ಥಿಕ ತೊಂದರೆಯಿಂದಾಗಿ ಕಟ್ಟಡ ಕಟ್ಟಲಾಗದೆ, ಕಾಂಪೌಂಡ್ ಹಾಕಿಕೊಂಡಿದ್ದ ನಮ್ಮ ನಿವೇಶನಗಳನ್ನು ಬಿಡಿಎ ಸಂಸ್ಥೆ ಶಿವರಾಮ ಕಾರಂತ್ ಬಡಾವಣೆ ಯೋಜನೆಗೆ ಸ್ವಾಧೀನ ಪಡಿಸಿಕೊಂಡಿದ್ದು, ಇದುವರೆಗೂ ಬಿಡಿಎ ನಮಗೆ ಬದಲಿ ನಿವೇಶನ ನೀಡುವ ಕುರಿತು ಮಾಹಿತಿ ನೀಡುತ್ತಿಲ್ಲ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೇಮಿಸಿದ್ದ ನ್ಯಾ.ಭೋಪಯ್ಯ ವರದಿ ಪ್ರಕಾರ ಕಂದಾಯ ನಿವೇಶನಗಳ ಮಾಲೀಕರಿಗೆ ಅವರ ಸ್ವಂತ ಜಾಗಗಳಲ್ಲಿ, ಅದೇ ವಿಸ್ತೀರ್ಣದ ಬದಲಿ ನಿವೇಶನ ನೀಡಬೇಕೆಂಬ ಆದೇಶವಿದೆ, ಆದರೆ ಇದುವರೆಗೂ ಬಿಡಿಎ ಕಂದಾಯ ನಿವೇಶನಗಳ ಮಾಲೀಕರಿಗೆ ಬದಲಿ ನಿವೇಶನ ನೀಡುವ ಕುರಿತು ನಿಖರವಾದ ಯಾವೊಂದು ಮಾಹಿತಿ ನೀಡುತ್ತಿಲ್ಲ.
ಈಗಾಗಲೇ ಶಿವರಾಮ ಕಾರಂತ್ ಬಡಾವಣೆಯ ವ್ಯಾಪ್ತಿಯ 17 ಗ್ರಾಮದ ರೈತರಿಗೆ ಬಿಡಿಎ ನಿವೇಶನ ನೀಡಿದ್ದು, ಅದೇ ರೀತಿ ನಮಗೂ ಸಹ ನಮ್ಮದೇ ಜಾಗಗಳಲ್ಲಿ ಅಭಿವೃದ್ಧಿ ಪಡಿಸಿದ ಅಷ್ಟೇ ವಿಸ್ತೀರ್ಣದ ಬದಲಿ ನಿವೇಶನ ನೀಡಬೇಕು ಮತ್ತು ರಸ್ತೆ ಮುಂತಾದ ಸಾರ್ವಜನಿಕ ಉದ್ದೇಶಗಳಿಗೆ ಸ್ವಾಧೀನವಾಗಿರುವ ನಿವೇಶನಗಳ ಮಾಲೀಕರಿಗೆ ಅದೇ ವ್ಯಾಪ್ತಿ ಬದಲಿ ನಿವೇಶನ ನೀಡಬೇಕು. ಅದಕ್ಕೆ ತಗಲುವ ಅಭಿವೃದ್ಧಿ ಶುಲ್ಕವನ್ನು ನಾವು ನೀಡಲು ಸಿದ್ದರಿದ್ದೇವೆ, ಆದರೆ ಅಭಿವೃದ್ಧಿ ಶುಲ್ಕ ಏಕರೂಪದಲ್ಲಿ ಇರಬೇಕೆಂಬುದಷ್ಟೇ ನಮ್ಮ ಕೋರಿಕೆ ಎಂದರು.
ಈ ವೇಳೆ ದಲಿತ ಮುಖಂಡರು, ಶಿವರಾಮ ಕಾರಂತ್ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿ ರಾಮಗೊಂಡನಹಳ್ಳಿ ಎಂ.ರಮೇಶ್, ಬಸವರಾಜ ಪಾದಯಾತ್ರೆ, ಕಂದಾಯ ನಿವೇಶನಗಳ ಮಾಲೀಕರಾದ ಅರುಣ್ ಕುಮಾರ್, ನಟರಾಜ್, ಓಂ ಪ್ರಸನ್ನ, ಗಣಪತಿ, ಕುಮಾರ್, ಯಶ್‌ಪಾಲ್ ಸೇರಿ ಶಿವರಾಮ ಕಾರಂತ್ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ಕಂದಾಯ ನಿವೇಶನದಾರರಿದ್ದರು.