ಬೇರೊಬ್ಬರ ವರದಿಯನ್ನು ಮತ್ತ್ಯಾರಿಗೋ ನೀಡಿ ರೋಗಿಯ ಪತಿಯನ್ನೇ ನಿಂದಿಸಿದ ಸ್ಕ್ಯಾನಿಂಗ್‌ ಸೆಂಟರ್‌ ಸಿಬ್ಬಂದಿ

Published : May 10, 2026, 08:44 AM IST
Scanning  Report Exchange

ಸಾರಾಂಶ

ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಬೇರೊಬ್ಬರ ವರದಿಯನ್ನು ಮಹಿಳೆಯೊಬ್ಬರಿಗೆ ನೀಡಿದ ಪರಿಣಾಮ, ತಪ್ಪಾದ ಚಿಕಿತ್ಸೆಯಿಂದ ಅವರ ಆರೋಗ್ಯ ಹದಗೆಟ್ಟಿದೆ. ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದು, ಈ ಘಟನೆಯು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರದ ದುಸ್ಥಿತಿಯನ್ನು ಸಹ ಬೆಳಕಿಗೆ ತಂದಿದೆ.

ಹಾಸನ: ಸಕಲೇಶಪುರ ಪಟ್ಟಣದ ಟೋಲ್ ಗೇಟ್ ಸಮೀಪ ಕಾರ್ಯನಿರ್ವಹಿಸುತ್ತಿರುವ “ಸ್ಕಂದ ಸ್ಕ್ಯಾನಿಂಗ್ ಸೆಂಟರ್”ನ ಬೇಜವಾಬ್ದಾರಿತನದಿಂದ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಮಠಸಾಗರ ಗ್ರಾಮದ ಹಸೈನಾರ್ ಹಾಜಿ ಅವರ ಪತ್ನಿ ಸಂಶಿಯಾ ಎಂಬುವವರು ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಗುರುವಾರ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ವೈದ್ಯರು ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದ್ದು, ಅವರನ್ನು ಪಟ್ಟಣದ ಟೋಲ್ ಗೇಟ್ ಸಮೀಪದ ಸ್ಕಂದ ಸ್ಕ್ಯಾನಿಂಗ್ ಸೆಂಟರ್‌ಗೆ ಕಳುಹಿಸಲಾಗಿತ್ತು. ಸ್ಕ್ಯಾನಿಂಗ್ ಮಾಡಿದ ಬಳಿಕ ಕೇಂದ್ರದ ಸಿಬ್ಬಂದಿ ನೀಡಿದ ವರದಿಯನ್ನು ವೈದ್ಯರಿಗೆ ತೋರಿಸಿದಾಗ, ಅದರ ಆಧಾರದ ಮೇಲೆ ಔಷಧಿ ನೀಡಲಾಗಿತ್ತು. ಆದರೆ ಔಷಧಿ ಸೇವಿಸಿದ ಬಳಿಕವೂ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಿಸದೇ, ಮತ್ತಷ್ಟು ಅಸ್ವಸ್ಥಗೊಂಡು ನಿಶಕ್ತರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸ

ಈ ನಡುವೆ ಶುಕ್ರವಾರ ಸ್ಕಂದ ಸ್ಕ್ಯಾನಿಂಗ್ ಸೆಂಟರ್ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸಿ “ನಿಮ್ಮ ರಿಪೋರ್ಟ್ ಬದಲಾಗಿ ವೈಶಾಲಿ ಎಂಬುವವರ ವರದಿ ನಿಮ್ಮ ಕೈ ಸೇರಿದೆ, ಬಂದು ಹೊಸ ವರದಿ ಪಡೆದುಕೊಳ್ಳಿ” ಎಂದು ತಿಳಿಸಿದ್ದಾರೆ. ಇದರಿಂದ ಕೇಂದ್ರದ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಬಹಿರಂಗವಾಗಿದ್ದು, ತಪ್ಪಾದ ವರದಿ ನೀಡಿದ ಪರಿಣಾಮ ರೋಗಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಕೇಂದ್ರದ ಸಿಬ್ಬಂದಿ “ಇಂತಹದ್ದು ಕೆಲವೊಮ್ಮೆ ಆಗುತ್ತದೆ, ಬೇಕಾದರೆ ಹೊಸ ರಿಪೋರ್ಟ್ ತೆಗೆದುಕೊಂಡು ಹೋಗಿ, ಇಲ್ಲವಾದರೆ ಬಿಡಿ” ಎಂದು ನಿರ್ಲಕ್ಷ್ಯವಾಗಿ ಉತ್ತರಿಸಿ, ರೋಗಿ ಹಾಗೂ ಅವರ ಪತಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ರೋಗಿಯ ಪತಿ ಹಸನ್ ಹಾಜಿ ಮಾತನಾಡಿ, ನಾವು ಅನಕ್ಷರಸ್ಥರು. ವೈದ್ಯಕೀಯ ವರದಿಗಳ ಬಗ್ಗೆ ಅರಿವು ಇಲ್ಲ. ಆದರೆ ಸ್ಕ್ಯಾನಿಂಗ್ ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಮ್ಮ ಮೇಲೆಯೇ ದರ್ಪ ತೋರಿಸುತ್ತಿದ್ದಾರೆ. ಇಂತಹ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯ ಉಂಟಾಗಬಹುದು. ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರ ಬಳಕೆಯಾಗದ ಸ್ಥಿತಿ

ಸಕಲೇಶಪುರ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ, ನುರಿತ ತಜ್ಞರ ಕೊರತೆಯಿಂದ ಅದು ಬಳಕೆಯಾಗದೇ ತುಕ್ಕು ಹಿಡಿಯುತ್ತಿದೆ. ಖಾಸಗಿ ಕೇಂದ್ರಗಳ ಅವಲಂಬನೆ ತಪ್ಪಿಸಲು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಘಟಕವನ್ನು ಶೀಘ್ರ ದುರಸ್ತಿ ಮಾಡಿ, ತಜ್ಞರನ್ನು ನೇಮಿಸಿ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಪಂಚರಾಜ್ಯ ಚುನಾವಣಾ ಫಲಿತಾಂಶ ಬಳಿಕ ಕರ್ನಾಟಕ ಪ್ರಧಾನಿ ಮೋದಿ, ಆರು ತಿಂಗಳಲ್ಲಿ ಮೂರನೇ ಭೇಟಿ!
ಪೀಣ್ಯ ಫ್ಲೈಓವರ್‌ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್‌ನಲ್ಲಿ ಬಂದಿದ್ದೇನು?