
ಹಾಸನ (ಫೆ.18): 'ಕಾನೂನು ಅರಿತವರೇ ಕಾನೂನು ಬಾಹಿರ ಕೃತ್ಯಕ್ಕೆ ಕೈಹಾಕಿದರೆ ಸಮಾಜಕ್ಕೆ ರಕ್ಷಣೆ ಎಲ್ಲಿದೆ?' ಎಂಬ ಪ್ರಶ್ನೆ ಮೂಡುವಂತಹ ಘಟನೆಯೊಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ. ಹಣದ ದುರಾಸೆಗೆ ಬಿದ್ದು ಅಮಾಯಕ ಮಹಿಳೆಯೊಬ್ಬರ ಮೇಲೆ ಸುಳ್ಳು ಅತ್ಯಾ*ಚಾರದ ದೂರು ದಾಖಲಿಸಲು ಸಂಚು ರೂಪಿಸಿದ್ದ ವಕೀಲೆ ನಾಗಲಕ್ಷ್ಮಿ ಹಾಗೂ ಅವರಿಗೆ ಸಾಥ್ ನೀಡಿದ್ದ ಲ್ಯಾಬ್ ಟೆಕ್ನಿಷಿಯನ್ ಫಣಿ ಎಂಬುವವರನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಕೀಲೆ ನಾಗಲಕ್ಷ್ಮಿ ಅವರು ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಭೀಕರ ಪ್ಲಾನ್ ಮಾಡಿದ್ದರು. ತಮ್ಮ ಪರಿಚಯದ ಮಹಿಳೆಯೊಬ್ಬರನ್ನು ಬಳಸಿಕೊಂಡು ಶ್ರೀಮಂತ ಅಥವಾ ಪ್ರಭಾವಿ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಅತ್ಯಾ*ಚಾರದ ದೂರು ದಾಖಲಿಸಲು ನಿರ್ಧರಿಸಿದ್ದರು. 'ನಿನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ಕೊಡು, ಅದರಿಂದ ನಿನಗೂ ಲಕ್ಷಾಂತರ ರೂಪಾಯಿ ಹಣ ಸಿಗುತ್ತದೆ, ನನಗೂ ಪಾಲು ಬರುತ್ತದೆ' ಎಂದು ಆ ಅಮಾಯಕ ಮಹಿಳೆಯ ಮೇಲೆ ನಿರಂತರವಾಗಿ ಮಾನಸಿಕ ಒತ್ತಡ ಹೇರುತ್ತಿದ್ದರು.
ಯಾವಾಗ ಆ ಮಹಿಳೆ ಸುಳ್ಳು ದೂರು ನೀಡಲು ನಿರಾಕರಿಸಿದರೋ, ಆಗ ವಕೀಲೆ ನಾಗಲಕ್ಷ್ಮಿ ತಮ್ಮ ವಿಕೃತ ಬುದ್ಧಿ ಪ್ರದರ್ಶಿಸಿದ್ದಾರೆ. ತನ್ನ ಸಂಚಿಗೆ ಶಕ್ತಿ ತುಂಬಲು ಲ್ಯಾಬ್ ಟೆಕ್ನಿಷಿಯನ್ ಫಣಿ ಎಂಬಾತನನ್ನು ಕರೆಸಿದ್ದರು. ಆತನ ಮೂಲಕ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ, 'ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ' ಎಂಬಂತೆ ನಾಟಕವಾಡಿದ್ದಾರೆ. ದೈಹಿಕ ದೌರ್ಜನ್ಯ ನಡೆದಿದೆ ಎಂದು ಪೊಲೀಸರ ಮುಂದೆ ಸಾಬೀತುಪಡಿಸಲು ಈ ರೀತಿಯ ದೃಶ್ಯಗಳನ್ನು ಸೃಷ್ಟಿಸಲು ಆ ಮಹಿಳೆಯ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿದ್ದರು.
ಇಷ್ಟೆಲ್ಲಾ ಕಿರುಕುಳ ನೀಡಿದರೂ ಮಹಿಳೆ ಸುಳ್ಳು ದೂರು ನೀಡಲು ಬಗ್ಗದಿದ್ದಾಗ, ವಕೀಲೆ ಮುಂದಿನ ಹಂತಕ್ಕೆ ಹೋಗಿದ್ದಾರೆ. ದೂರು ಕೊಡಲೊಪ್ಪದ ಮಹಿಳೆಯ ಪತಿಗೆ ಕರೆ ಮಾಡಿ, 'ನಿನ್ನ ಪತ್ನಿ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ' ಎಂದು ಸುಳ್ಳು ಚಾಡಿ ಹೇಳಿದ್ದಾರೆ. ಈ ಮೂಲಕ ಮಹಿಳೆಯ ವೈಯಕ್ತಿಕ ಜೀವನ ಹಾಗೂ ಸಂಸಾರವನ್ನು ಬೀದಿಗೆ ತರಲು ಸಂಚು ರೂಪಿಸಿದ್ದರು.
ವಕೀಲೆಯ ನಿರಂತರ ಕಿರುಕುಳ ಹಾಗೂ ಅಮಾನವೀಯ ಕೃತ್ಯಗಳಿಂದ ನೊಂದ ಮಹಿಳೆ ಅಂತಿಮವಾಗಿ ಧೈರ್ಯ ಮಾಡಿ ಪೊಲೀಸರ ಮೊರೆ ಹೋಗಿದ್ದಾರೆ. ದೂರಿನ ಗಾಂಭೀರ್ಯ ಅರಿತ ಹೊಳೆನರಸೀಪುರ ಪೊಲೀಸರು ತನಿಖೆ ಕೈಗೊಂಡಾಗ, ವಕೀಲೆಯ ಅಸಲಿ ಬಣ್ಣ ಬಯಲಾಗಿದೆ. ಹಣಕ್ಕಾಗಿ ಕಾನೂನನ್ನೇ ಅಸ್ತ್ರ ಮಾಡಿಕೊಂಡು ಅಮಾಯಕರನ್ನು ಬಲಿ ಪಡೆಯಲು ಹವಣಿಸುತ್ತಿದ್ದ ನಾಗಲಕ್ಷ್ಮಿ ಮತ್ತು ಆಕೆಗೆ ಸಹಕರಿಸಿದ ಫಣಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಾನೂನು ವೃತ್ತಿಯಲ್ಲಿದ್ದು ಸಾರ್ವಜನಿಕರಿಗೆ ನ್ಯಾಯ ಕೊಡಿಸಬೇಕಾದವರೇ ಈ ರೀತಿಯ ಅಕ್ರಮ ಮತ್ತು ವಿಕೃತ ಕೃತ್ಯಗಳಲ್ಲಿ ಭಾಗಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.