
ಹಾಸನ (ಸೆ.12): ಗಣೇಶ ಮೆರವಣಿಗೆಯ ಮೇಲೆ ಕ್ಯಾಂಟರ್ ನುಗ್ಗಿ 8 ಮಂದಿ ದಾರುಣ ಸಾವಾಗಿರುವ ಘಟನನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಸಂಭವಿಸಿದೆ. ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದ. ರಾಷ್ಟ್ರೀಯ ಹೆದ್ದಾರಿ 373ರ ಒಂದು ಬದಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಹೋಗುವಾಗ ಡಿವೈಡರ್ ದಾಟಿ ಕ್ಯಾಂಟರ್ ಗಣೇಶ ಭಕ್ತರ ಮೇಲೆ ಯಮನಂತೆ ಎರಗಿದೆ. ಇದರಿಂದಾಗಿ 5 ಮಂದಿ ಸ್ಥಳದಲ್ಲಿಯೇ ಸಾವು ಕಂಡಿದ್ದರೆ, ಒಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವು ಕಂಡಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಸಾವು ಕಂಡಿದ್ದಾರೆ.
ಇಲ್ಲಿಯವರೆಗೂ 8 ಮಂದಿ ಸಾವು ಕಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ. 20ಕ್ಕೂ ಅಧಿಕ ಮಂದಿ ಗಾಯಾಳುವಾಗಿದ್ದು, ಕೆಲವರಿಗೆ ಗಂಭೀರ ಗಾಯಗಳಾಗಿವೆ. ಕೆಲವರ ಕೈಕಾಲುಗಳ ಮೇಲೆ ವಾಹನ ಹರಿದಿದೆ.
ಆಗಿದ್ದೇನು: ರಾಷ್ಟ್ರೀಯ ಹೆದ್ದಾರಿ 373ರ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಒಂದು ಕಡೆ ಮೆರವಣಿಗೆ ಸಾಗುತ್ತಿದ್ದರೆ, ಇನ್ನೊಂದೆಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ವೇಗದಲ್ಲಿ ಸಾಗುತ್ತಿದ್ದ ಕ್ಯಾಂಟರ್ ತನ್ನ ಎದುರಿಗೆ ಇದ್ದ ಬೈಕ್‌ಅನ್ನು ತಪ್ಪಿಸುವ ಭರದಲ್ಲಿ ಕ್ಯಾಂಟರ್‌ನ ದಿಕ್ಕನ್ನು ಬಲಕ್ಕೆ ತಿರುಗಿಸಿದ್ದಾನೆ. ವೇಗದಲ್ಲಿ ಇದ್ದ ಕಾರಣಕ್ಕೆ ಕ್ಯಾಂಟರ್ ಡಿವೈಡರ್‌ಗೆ ಢಿಕ್ಕಿಯಾಗಿ ಅದೇ ವೇಗದಲ್ಲಿ ಭಕ್ತರ ಮೇಲೆ ಎರಗಿದೆ.
ಕ್ಯಾಂಟರ್ ಚಾಲಕ ಭುವನೇಶ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಾಂತಿಗ್ರಾಮದ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ. ಆತ ಚಾಲನೆ ಮಾಡುವ ವೇಳೆ ಕುಡಿದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಈ ವಿಚಾರವನ್ನು ಪೊಲೀಸರು ಖಚಿತಪಡಿಸಬೇಕಿದೆ.
'ಈ ದುರ್ಘಟನೆಯ ಸಂಪೂರ್ಣ ಜವಾಬ್ದಾರಿಯನ್ನ ಪೊಲೀಸ್ ಅಧಿಕಾರಿಗಳ ವೈಫಲ್ಯದಿಂದ ನಡೆದಿದೆ. ಅದರೊಂದಿಗೆ ಲಾರಿ ಚಾಲಕ ಅತಿವೇಗದಿಂದ ಬಂದು ಈ ಘಟನೆ ನಡೆದಿದೆ. ಸುಮಾರು 500 ಮೀಟರ್ ದೂರದಲ್ಲೇ ಬ್ಯಾರಿಕೇಡ್ ಹಾಕಿ, ಎಲ್ಲಾ ವಾಹನಗಳನ್ನು ನಿಲ್ಲಿಸಿ, ಪೊಲೀಸರು ನಿಂತಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಈ ವಿಷಯದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡುತ್ತೇನೆ. ಸಾವು ಕಂಡ ವ್ಯಕ್ತಿಗಳ ಕುಟುಂಬಕ್ಕೆ ಕನಿಷ್ಠ 15 ರಿಂದ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ ಎಂದು ಎಚ್‌ಡಿ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.