ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು

Published : Apr 10, 2026, 06:34 PM IST
Arasikere

ಸಾರಾಂಶ

ನಾಲ್ಕು ದಶಕಗಳ ಕಾಲ ಅಕ್ಷರ ಸೇವೆ ಸಲ್ಲಿಸಿದ, ಓದುಗರ ಸಾಂಸ್ಕೃತಿಕ ಕೇಂದ್ರವಾಗಿದ್ದ 'ಅಯ್ನೋರು ಅಂಗಡಿ' (ಶೇಖಿ ಅಣ್ಣನ ಅಂಗಡಿ) ಇದೀಗ ಇತಿಹಾಸದ ಪುಟ ಸೇರಿದೆ. ಈ ಅಂಗಡಿಯ ಮುಚ್ಚುವಿಕೆಯು ನಗರದ ಓದು ಸಂಸ್ಕೃತಿ ಮತ್ತು ಪತ್ರಿಕಾ ಪರಂಪರೆಯ ಒಂದು ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ.

ಹಾಸನ:  ಅರಸೀಕೆರೆ ನಗರದ ಹೃದಯ ಭಾಗದಲ್ಲಿ ನಾಲ್ಕು ದಶಕಗಳ ಕಾಲ ಅಕ್ಷರಗಳ ಪರಿಮಳ ಹರಡುತ್ತಿದ್ದ, ಸಾವಿರಾರು ಓದುಗರ ಬೆಳಗಿನ ಅಭ್ಯಾಸಕ್ಕೆ ಜೀವ ತುಂಬುತ್ತಿದ್ದ, ಪತ್ರಿಕಾ ಲೋಕದ ಅನೇಕ ನೆನಪುಗಳನ್ನು ಹೊತ್ತಿದ್ದ ‘ಅಯ್ನೋರು ಅಂಗಡಿ(ಶೇಖಿಅಣ್ಣನ ಅಂಗಡಿ)’ ಇದೀಗ ಇತಿಹಾಸದ ಪುಟ ಸೇರಿದೆ.

ದಿವಂಗತ ಮರುಳ ಸಿದ್ದಯ್ಯ ಅವರ ಮಾಲೀಕತ್ವದಲ್ಲಿ ಆರಂಭವಾಗಿ, ನಂತರ ಕುಟುಂಬದ ಸದಸ್ಯರ ಶ್ರಮದಿಂದ ಮುಂದುವರಿದ ಈ ಅಕ್ಷರ ಮನೆ ಇಂದು ಬಾಗಿಲು ಮುಚ್ಚಿರುವುದು ಕೇವಲ ಒಂದು ಅಂಗಡಿ ಮುಚ್ಚಿದ ಘಟನೆ ಮಾತ್ರವಲ್ಲ ಅರಸೀಕೆರೆಯ ಓದು ಸಂಸ್ಕೃತಿ, ಪತ್ರಿಕಾ ಪರಂಪರೆ ಮತ್ತು ಮಾನವೀಯ ಸಂಬಂಧಗಳ ಒಂದು ಅಧ್ಯಾಯವೇ ಅಂತ್ಯ ಕಂಡಂತಾಗಿದೆ.

ಅಕ್ಷರ ಭಂಡಾರ

ಒಂದು ಕಾಲದಲ್ಲಿ ಬೆಳಗಿನ ಜಾವವೇ ನಗರದ ನಾಡಿಯಂತೆ ಚುರುಕುಗೊಂಡು, ರಾಜ್ಯ, ಪ್ರಾದೇಶಿಕ ಹಾಗೂ ಜಿಲ್ಲಾ ಮಟ್ಟದ ದಿನಪತ್ರಿಕೆಗಳು, ವಾರಪತ್ರಿಕೆಗಳು, ಸಂಚಿಕೆಗಳು, ಸಾಹಿತ್ಯ ಕೃತಿಗಳು ಮತ್ತು ಸುದ್ದಿಯ ಹೊಸಹೊಸ ಹರಿವುಗಳನ್ನು ಓದುಗರ ಕೈಗೆ ತಲುಪಿಸುತ್ತಿದ್ದ ಈ ಮಳಿಗೆ, ಅನೇಕ ಮಂದಿಗೆ ‘ಅಂಗಡಿ’ಗಿಂತ ಹೆಚ್ಚಾಗಿ ‘ಅಕ್ಷರ ಭಂಡಾರ’ವಾಗಿತ್ತು. ಪತ್ರಿಕೆ ಖರೀದಿಸಲು ಬಂದವರಿಗಷ್ಟೇ ಅಲ್ಲ, ಲೇಖಕರು, ವರದಿಗಾರರು, ಪತ್ರಿಕಾ ಪ್ರತಿನಿಧಿಗಳು, ಸಾಹಿತ್ಯಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ರಾಜಕೀಯ ಆಸಕ್ತರಿಗೂ ಇದು ಪ್ರತಿದಿನದ ತಂಗುದಾಣವಾಗಿತ್ತು.

ಸಾರ್ವಜನಿಕ ವಲಯದಲ್ಲಿ ಪ್ರೀತಿಯಿಂದ ಅಯ್ನೋರು ಎಂದೇ ಪರಿಚಿತರಾಗಿದ್ದ ದಿವಂಗತ ಮರುಳ ಸಿದ್ದಯ್ಯ ಅವರು, ಪತ್ರಿಕೆ ಮಾರಾಟವನ್ನು ಕೇವಲ ವೃತ್ತಿಯಾಗಿ ನೋಡಲಿಲ್ಲ. ಜನರಿಗೆ ಸುದ್ದಿ ತಲುಪಿಸುವ ಕೆಲಸವನ್ನು ಅವರು ಒಂದು ಸಾಮಾಜಿಕ ಜವಾಬ್ದಾರಿಯಂತೆ ನಿರ್ವಹಿಸಿದ್ದರು. ಬಳಿಕ ಪುತ್ರಿ ಟಿ.ಎಂ. ರೇಣುಕ ಅವರೊಂದಿಗೆ ಈ ಕಾರ್ಯವನ್ನು ಮುಂದುವರಿಸಿದ ಕುಟುಂಬ, ಕಳೆದ ಸುಮಾರು 25 ವರ್ಷಗಳಿಂದ ಕಿರಿಯ ಪುತ್ರ ಟಿ.ಎಂ. ಚಂದ್ರಶೇಖರ್ ಮತ್ತು ಸೊಸೆ ಟಿ.ಎಸ್. ಪ್ರತಿಭಾ ಅವರ ಕೈಯಲ್ಲಿ ಈ ಅಕ್ಷರ ಪರಂಪರೆಯನ್ನು ಜೀವಂತವಾಗಿಟ್ಟಿತ್ತು.

ಈ ಅಂಗಡಿಗೆ ಬಂದವರು ಕೇವಲ ಪತ್ರಿಕೆಗಳನ್ನು ಖರೀದಿಸಿ ತೆರಳುವುದಷ್ಟೇ ಆಗಿರಲಿಲ್ಲ. ಇಲ್ಲಿ ಪ್ರತಿದಿನ ಸುದ್ದಿಗಳ ವಿನಿಮಯ ನಡೆಯುತ್ತಿತ್ತು. ರಾಜ್ಯ ರಾಜಕೀಯದಿಂದ ಹಿಡಿದು ಸ್ಥಳೀಯ ಸಮಸ್ಯೆಗಳವರೆಗೆ, ರಾಷ್ಟ್ರದ ಬೆಳವಣಿಗೆಗಳಿಂದ ಹಿಡಿದು ಊರ ಜಾತ್ರೆಯವರೆಗೆ, ಒಂದು ಕಪ್ ಚಹಾ ಜೊತೆಗೆ ಚರ್ಚೆಗಳು ಹೊಮ್ಮುತ್ತಿದ್ದವು. ಅನೇಕ ಹಿರಿಯ ಪತ್ರಕರ್ತರು, ಸ್ಥಳೀಯ ವರದಿಗಾರರು ತಮ್ಮ ವೃತ್ತಿ ಜೀವನದ ಆರಂಭಿಕ ಹೆಜ್ಜೆಗಳನ್ನು ಇದೇ ಅಂಗಡಿಯ ಸುತ್ತಮುತ್ತ ಇಟ್ಟಿದ್ದರೆ, ಹಲವು ಸುದ್ದಿಗಳು ಇಲ್ಲಿ ಹುಟ್ಟಿ ನಂತರ ಪತ್ರಿಕೆಯ ಪುಟ ಸೇರಿದ್ದವು ಎಂಬುದು ಹಿರಿಯರ ನೆನಪು.

ಸಾಮಾನ್ಯ ವ್ಯಾಪಾರ ಮಳಿಗೆ

ತಂತ್ರಜ್ಞಾನ ಇಷ್ಟಾಗಿ ಬೆಳೆದಿರದ ಕಾಲದಲ್ಲಿ, ಕೈಬರಹದ ಸುದ್ದಿಗಳನ್ನು ಕಳುಹಿಸುವ ವ್ಯವಸ್ಥೆ ಇದ್ದಾಗ, ಪತ್ರಿಕಾ ಪ್ರತಿನಿಧಿಗಳ ಅಡ್ಡೆಯಾಗಿಯೂ, ಮಾಹಿತಿ ವಿನಿಮಯ ಕೇಂದ್ರವಾಗಿಯೂ ಈ ಅಂಗಡಿ ಕೆಲಸ ಮಾಡಿತ್ತು. ಪತ್ರಿಕೆ ತಲುಪಿಸುವುದು, ಹೊಸ ಸಂಚಿಕೆಗಳನ್ನು ಪರಿಚಯಿಸುವುದು, ಸಾಹಿತ್ಯ ಪುಸ್ತಕಗಳನ್ನು ಶಿಫಾರಸು ಮಾಡುವುದು ಇವೆಲ್ಲವೂ ಇಲ್ಲಿ ನಿತ್ಯದ ಬದುಕಿನ ಭಾಗವಾಗಿದ್ದವು. ಅಕ್ಷರ ಜಗತ್ತಿನ ಮೇಲಿನ ನಿಷ್ಠೆ ಮತ್ತು ಓದುಗರೊಂದಿಗೆ ಬೆಸೆದ ಮಾನವೀಯ ಬಾಂಧವ್ಯವೇ ಈ ಅಂಗಡಿಯನ್ನು ಸಾಮಾನ್ಯ ವ್ಯಾಪಾರ ಮಳಿಗೆಯಿಂದ ವಿಶಿಷ್ಟ ಸ್ಥಾನಕ್ಕೆ ಎತ್ತಿತ್ತು.

ಪ್ರತಿ ದಿನ ಯಾವುದೇ ಜಂಜಾಟವಿದ್ದರೂ, ಮನೆಯಲ್ಲೇನಾದರೂ ಕಾರ್ಯಕ್ರಮವಿದ್ದರೂ, ಆರೋಗ್ಯದಲ್ಲಿ ಏನೇ ತೊಂದರೆ ಇದ್ದರೂ, ಅಥವಾ ಬೇರೆ ಯಾವುದೇ ಕಮಿಟ್ಮೆಂಟ್‌ಗಳಿದ್ದರೂ “ಶೇಕಿ ಅಣ್ಣ” ಮಾತ್ರ ಬೆಳಿಗ್ಗೆ 5 ಗಂಟೆಗೆ ಸರಿಯಾಗಿ ಅಂಗಡಿ ಬಾಗಿಲು ತೆರೆಯುತ್ತಿದ್ದರು.

ನಗರ ಇನ್ನೂ ನಿದ್ದೆಯಲ್ಲಿರುವ ಹೊತ್ತಿಗೆ, ರಸ್ತೆಗಳು ಮೌನದಲ್ಲಿರುವ ಹೊತ್ತಿಗೆ, ಪತ್ರಿಕೆಗಳ ಕಟ್ಟೆಗಳು ಬರುವ ಸಮಯಕ್ಕೆ ಕಾಯುತ್ತಾ, ದಿನದ ಆರಂಭವನ್ನು ಅಕ್ಷರಗಳೊಂದಿಗೆ ಶುರು ಮಾಡುತ್ತಿದ್ದ ಆ ಶಿಸ್ತಿನ ಬದುಕು ಈಗ ನೆನಪಾಗಿ ಉಳಿದಿದೆ.

ಬೆಳಗಿನ ಜಾವ ಪತ್ರಿಕೆಗಾಗಿ ಬರುವ ಓದುಗರಿಗೆ, ವಿತರಕರಿಗೆ, ಪತ್ರಿಕಾ ಪ್ರತಿನಿಧಿಗಳಿಗೆ “ಅಂಗಡಿ ತೆರೆದಿದೆಯಾ?” ಎಂಬ ಪ್ರಶ್ನೆಯೇ ಇರಲಿಲ್ಲ. ಏಕೆಂದರೆ ಅಂಗಡಿ ಎಂದರೆ ಶೇಕಿ ಅಣ್ಣ, ಶೇಕಿ ಅಣ್ಣ ಎಂದರೆ ಸಮಯಪಾಲನೆ ಎಂಬ ನಂಬಿಕೆ ಎಲ್ಲರ ಮನದಲ್ಲೂ ಗಟ್ಟಿಯಾಗಿ ನೆಲಸಿತ್ತು. ಮಳೆ ಬಂದರೂ, ಚಳಿ ಕಚ್ಚಿದರೂ, ಹಬ್ಬದ ದಿನವಾದರೂ, ನಗರದ ಬದುಕು ಶುರುವಾಗುವ ಮೊದಲು ಅಕ್ಷರಗಳ ಬದುಕನ್ನು ಶುರು ಮಾಡುತ್ತಿದ್ದ ಆ ವ್ಯಕ್ತಿತ್ವವೇ ಇಂದು ಜನರ ಕಣ್ಣಲ್ಲಿ ನೀರೂರಿಸುವ ನೆನಪಾಗಿದೆ.

ಇದೀಗ ಬಾಡಿಗೆ ಒಪ್ಪಂದದ ಅವಧಿ, ವಾಣಿಜ್ಯ ಸಂಕೀರ್ಣದ ಮಾಲಿಕತ್ವ ಬದಲಾವಣೆ ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳ ನಡುವಲ್ಲಿ ಈ ಅಂಗಡಿ ಮುಚ್ಚಬೇಕಾದ ಅನಿವಾರ್ಯತೆ ಎದುರಾದ ಹಿನ್ನೆಲೆ, ಅರಸೀಕೆರೆಯ ಅನೇಕ ಓದುಗರ ಮನದಲ್ಲಿ ಖಾಲಿತನ ಮೂಡಿದೆ. ಪ್ರತಿದಿನ ಬೆಳಿಗ್ಗೆ ಪತ್ರಿಕೆ ಹಿಡಿದು ದಿನವನ್ನು ಆರಂಭಿಸುತ್ತಿದ್ದ ಹಿರಿಯರು, ವಾರಪತ್ರಿಕೆಗಾಗಿ ಕಾಯುತ್ತಿದ್ದ ಓದುಗರು, ಪುಸ್ತಕ ಪ್ರಿಯರು ಮತ್ತು ಸುದ್ದಿಯೊಂದಿಗೆ ಬದುಕು ಕಟ್ಟಿಕೊಂಡಿದ್ದ ಪತ್ರಿಕಾ ವಲಯದವರಿಗೆ ಇದು ಮನಕಲುಕುವ ಕ್ಷಣವಾಗಿದೆ.

‘ಶೇಖಿಅಣ್ಣನ ಅಂಗಡಿ’ ಇರದ ಅರಸೀಕೆರೆ ಇಂದು ಅನೇಕ ಮಂದಿಗೆ ಅಪೂರ್ಣವಾಗಿ ಕಾಣುತ್ತಿದೆ. ಅಕ್ಷರಗಳ ಗದ್ದಲ, ಪತ್ರಿಕೆ ಕಟ್ಟುವ ಸದ್ದು, ಸುದ್ದಿಯ ಚರ್ಚೆಗಳು, ಪರಿಚಿತ ಮುಖಗಳ ನಗು—ಇವೆಲ್ಲವೂ ಈಗ ನೆನಪುಗಳಾಗಿ ಉಳಿದಿವೆ. ಓದುಗರ ಮನದಲ್ಲಿ ಈ ಅಂಗಡಿ ಕೇವಲ ಮಾರಾಟ ಕೇಂದ್ರವಾಗಿರಲಿಲ್ಲ ಅದು ಒಂದು ಬದುಕಿನ ಭಾಗ, ಒಂದು ಭಾವನಾತ್ಮಕ ಸಂಬಂಧ, ಒಂದು ಕಾಲಘಟ್ಟದ ಸಾಕ್ಷಿಯಾಗಿತ್ತು.

ಅರಸೀಕೆರೆಯ ಅನೇಕ ಪೀಳಿಗೆಗಳಿಗೆ ಅಕ್ಷರ ಪ್ರೀತಿ, ಓದು ಅಭ್ಯಾಸ ಮತ್ತು ಸುದ್ದಿ ಜಗತ್ತಿನ ನಂಟು ಬೆಳೆಸಿದ ‘ಅಯ್ನೋರ ಅಂಗಡಿ’ ಈಗ ಬಾಗಿಲು ಮುಚ್ಚಿದರೂ, ಅದು ಮೂಡಿಸಿದ ನೆನಪುಗಳು ಮತ್ತು ಅಕ್ಷರಗಳ ಬೆಳಕು ನಗರದ ಮನಸ್ಸಿನಲ್ಲಿ ಇನ್ನೂ ದೀರ್ಘಕಾಲ ಉಳಿಯಲಿವೆ.

ಇದನ್ನೂ ಓದಿ: 20 ವರ್ಷಗಳಿಂದ ಸ್ಥಗಿತಗೊಂಡಿದ್ದ ಸೇವೆಗೆ ಮರುಜೀವ; ಮೆಜೆಸ್ಟಿಕ್‌ಗೆ ಡೈರೆಕ್ಟ್ 4 ಬಸ್

ಹೇಳಿಕೆ: ಬಾಲಕೃಷ್ಣ, ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ

“ದಿನಪತ್ರಿಕಾ ರಂಗದಲ್ಲಿ ಪೈಪೋಟಿ ಹೆಚ್ಚಾದ ಈ ದಿನಗಳಲ್ಲಿ ‘ಶೇಖಿ ಅಣ್ಣನ ಅಂಗಡಿ’ ನಮಗೆ ಕೇವಲ ವಿತರಣೆ ಕೇಂದ್ರವಾಗಿರಲಿಲ್ಲ. ಅದು ಅಕ್ಷರಕ್ಷಃ ಆಶ್ರಯ ತಾಣವಾಗಿತ್ತು. ದಿನಪತ್ರಿಕೆಗಳನ್ನು ಕೊಟ್ಟು-ತೆಗೆದುಕೊಳ್ಳುವ ದೈನಂದಿನ ಚಟುವಟಿಕೆಗಳು ಇಲ್ಲದಂತಾಗಿರುವುದು ತುಂಬಾ ಬೇಸರದ ಸಂಗತಿ. ಈ ಅಂಗಡಿ ಮುಚ್ಚಿದ ನಂತರ ಅರಸೀಕೆರೆಯ ಪತ್ರಿಕಾ ವಲಯದಲ್ಲಿ ಒಂದು ಖಾಲಿತನ ಮೂಡಿದೆ,”.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 425 ಉಪಗ್ರಾಮಗಳ ರಚನೆ! ಜನರಿಗೆ ಇದರಿಂದ ಏನು ಲಾಭ?

PREV
Read more Articles on
click me!

Recommended Stories

ಬೆಂಗಳೂರು: ಜೀವ ಹೋಗುವ ಭಯದಲ್ಲಿ 9ನೇ ತರಗತಿ ಹುಡುಗನಿಂದ 107 ಗ್ರಾಂ ಚಿನ್ನ ಸುಲಿಗೆ! ಮನೆಯಿಂದಲೇ ಕದ್ದ ಬಾಲಕ
ಕೊಪ್ಪಳ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾಗಲೇ ಹೃದಯಾಘಾತ; ಸ್ಥಳದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ವಕೀಲ!