
ಹಾಸನ: ಒಂದು ಕಾಲದಲ್ಲಿ ಅರಸೀಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮನರಂಜನೆಯ ಪ್ರಮುಖ ತಾಣವಾಗಿದ್ದ ಸಾಧನ ಚಿತ್ರಮಂದಿರ ಇದೀಗ ನೆನಪುಗಳ ಲೋಕಕ್ಕೆ ಸೇರಿದೆ. ಸುಮಾರು ಏಳು ದಶಕಗಳ ಕಾಲ ಸಾವಿರಾರು ಸಿನಿಪ್ರಿಯರ ನಗು, ಸಂಭ್ರಮ ಮತ್ತು ಚಪ್ಪಾಳೆಗಳಿಗೆ ಸಾಕ್ಷಿಯಾಗಿದ್ದ ಈ ಚಿತ್ರಮಂದಿರದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದು, ನಗರದ ಜನರಲ್ಲಿ ಭಾವನಾತ್ಮಕ ಕ್ಷಣಗಳನ್ನು ಮೂಡಿಸಿದೆ.
ಸ್ವಾತಂತ್ರ್ಯಾನಂತರದ ಆರಂಭಿಕ ವರ್ಷಗಳಲ್ಲಿ ನಿರ್ಮಾಣಗೊಂಡ ಸಾಧನ ಚಿತ್ರಮಂದಿರವು ಆ ಕಾಲದ ಆಧುನಿಕ ಪ್ರೊಜೆಕ್ಟರ್ ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡ ಸೇರಿದಂತೆ ಪಂಚಭಾಷೆಗಳ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿತ್ತು. ನಗರದ ಪ್ರಮುಖ ರಸ್ತೆಯಾದ ಬಿ. ಎಚ್. ರಸ್ತೆಯ ಪಕ್ಕದಲ್ಲಿದ್ದ ಈ ಚಿತ್ರಮಂದಿರವು ಹೊಸ ಚಿತ್ರಗಳ ಪ್ರದರ್ಶನಕ್ಕೆ ಹೆಸರಾಗಿದ್ದು, ಸಿನಿರಸಿಕರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿತ್ತು. ಅಂದಿನ ದಿನಗಳಲ್ಲಿ ರತ್ನ ಹಾಗೂ ಶ್ರೀ ವೆಂಕಟೇಶ್ವರ ಚಿತ್ರಮಂದಿರಗಳಿಗೆ ಸಮಾನ ಪೈಪೋಟಿ ನೀಡುತ್ತಿದ್ದ ಸಾಧನ ಚಿತ್ರಮಂದಿರವು ತಮಿಳು, ಹಿಂದಿ ಮತ್ತು ಕನ್ನಡ ಚಿತ್ರಗಳ ಪ್ರದರ್ಶನದಿಂದ ವಿಶಿಷ್ಟ ಸ್ಥಾನವನ್ನು ಗಳಿಸಿತ್ತು.
ವಿಶೇಷವಾಗಿ ತಮಿಳು ಚಿತ್ರಗಳು ಬಿಡುಗಡೆಯಾದ ಸಂದರ್ಭಗಳಲ್ಲಿ ಹಾಸನ ರಸ್ತೆಯ ಭಾಗದ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದರೆ, ಹಿಂದಿ ಚಿತ್ರಗಳ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ಹಿಂದಿ ಭಾಷಾ ಅಭಿಮಾನಿಗಳು ಚಿತ್ರಮಂದಿರವನ್ನು ತುಂಬಿಸುತ್ತಿದ್ದರು.
ಕನ್ನಡ ಚಿತ್ರರಂಗದ ಅನೇಕ ಯಶಸ್ವಿ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿದ್ದು, ‘ಭಾಗ್ಯದ ಬಾಗಿಲು ’ ಚಿತ್ರವು ಶತದಿನೋತ್ಸವ ಆಚರಿಸಿದ್ದ ನೆನಪು ಇಂದಿಗೂ ಸಿನಿಪ್ರಿಯರ ಮನಸ್ಸಿನಲ್ಲಿ ಉಳಿದಿದೆ. ಈ ಸಂದರ್ಭದಲ್ಲಿ ವರನಟ ಡಾ. ರಾಜ್‌ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಹಾಗೂ ಇತ್ತೀಚಿನ ದಿನಗಳಲ್ಲಿ ನಟ ಸುದೀಪ್ ಸೇರಿದಂತೆ ಹಲವು ಕಲಾವಿದರು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರೆಂದು ಸ್ಥಳೀಯರು ಸ್ಮರಿಸುತ್ತಾರೆ. ಆದರೆ ಕಾಲ ಬದಲಾದಂತೆ ಮಲ್ಟಿಪ್ಲೆಕ್ಸ್ ಸಂಸ್ಕೃತಿ, ಡಿಜಿಟಲ್ ತಂತ್ರಜ್ಞಾನ, ಇಂಟರ್‌ನೆಟ್ ಹಾಗೂ ಮೊಬೈಲ್ ಆಧಾರಿತ ಮನರಂಜನಾ ವೇದಿಕೆಗಳ ಪ್ರಭಾವದಿಂದ ಏಕಪರದೆ ಚಿತ್ರಮಂದಿರಗಳ ಅಸ್ತಿತ್ವಕ್ಕೆ ಸವಾಲು ಎದುರಾಯಿತು. ಪ್ರೇಕ್ಷಕರ ಸಂಖ್ಯೆ ಕುಸಿಯುತ್ತಾ ಬಂದ ಪರಿಣಾಮ ನಿರ್ವಹಣಾ ವೆಚ್ಚ ಹಾಗೂ ವಿದ್ಯುತ್ ಬಿಲ್‌ಗಳ ಹೊರೆ ಹೆಚ್ಚಾಗಿದ್ದು, ಚಿತ್ರಮಂದಿರವನ್ನು ಮುಂದುವರಿಸುವುದು ಕಷ್ಟಕರವಾಯಿತು.
ಇದನ್ನೂ ಓದಿ: ಕೆಪಿಎಸ್ ಬೇಡ, ನಮ್ಮೂರ ಸರ್ಕಾರಿ ಶಾಲೆ ನಮ್ಮೂರಲ್ಲೇ ಉಳಿಯಲಿ: ಗ್ರಾಮಸ್ಥರ ಪ್ರತಿಭಟನೆ
ಈ ಹಿನ್ನೆಲೆಯಲ್ಲಿ ಚಿತ್ರಮಂದಿರದ ಮಾಲೀಕರು ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅದರ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಅರಸೀಕೆರೆಯ ಸಿನಿ ಸಂಸ್ಕೃತಿಯ ಒಂದು ಮಹತ್ವದ ಅಧ್ಯಾಯಕ್ಕೆ ಅಧಿಕೃತವಾಗಿ ತೆರೆ ಬಿದ್ದಂತಾಗಿದೆ.
ಇದನ್ನೂ ಓದಿ: ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು