ಹಾಸನವನ್ನು ಅಯ್ಯೋ ಎನಿಸುತ್ತಿದೆ ಹಾರ್ಟ್ ಅಟ್ಯಾಕ್ ಭೂತ? ಶುಕ್ರವಾರವೂ ಇಬ್ಬರು ಹೃದಯಾಘಾತಕ್ಕೆ ಬಲಿ

Published : Jul 04, 2025, 11:27 AM IST
Hassan Heart Attack

ಸಾರಾಂಶ

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದ್ದು, ಒಂದೂವರೆ ತಿಂಗಳಲ್ಲಿ 35 ಜನರು ಸಾವನ್ನಪ್ಪಿದ್ದಾರೆ. ಯುವಕರೂ ಸಹ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಸರ್ಕಾರ ತಜ್ಞರ ಸಮಿತಿ ರಚಿಸಿದ್ದರೂ, ಸಾವುಗಳ ಸರಣಿ ಮುಂದುವರೆದಿದೆ.

ಹಾಸನ (ಜು. 4): ಹೃದಯಾಘಾತದ ಮರಣ ಮೃದಂಗ ಹಾಸನ ಜಿಲ್ಲೆಯಲ್ಲಿ ಮುಂದುವರೆದಿದ್ದು, ಸಾರ್ವಜನಿಕರಲ್ಲಿ ಭೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ವಾರಗಳಿಂದ ಹೃದಯಾಘಾತದ ಪ್ರಕರಣಗಳು ಅಸಾಮಾನ್ಯವಾಗಿ ಹೆಚ್ಚಿದ್ದು, ಶುಕ್ರವಾರವೂ ಇಬ್ಬರು ಈ ಪೈಕಿ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಅವಧಿಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಯುವಕರಿಗೆ ಸಹ ಬಿಟ್ಟಿಲ್ಲ ‘ಹಾರ್ಟ್ ಅಟ್ಯಾಕ್’

ಇತ್ತೀಚೆಗೆ ಹೃದಯಾಘಾತಗಳು ಕೇವಲ ವೃದ್ಧರಲ್ಲಿ ಮಾತ್ರವಲ್ಲ, ಯುವಕರಲ್ಲಿಯೂ ಕಂಡು ಬರುತ್ತಿರುವುದು ಚಿಂತಾಜನಕ. ಹಾಸನ ತಾಲ್ಲೂಕಿನ ಚಿಟ್ನಳ್ಳಿ ಗ್ರಾಮದ 21 ವರ್ಷದ ಯುವಕ ಮದನ್, ತಾಯಿ ಜೊತೆ ಚನ್ನಪಟ್ಟಣದಲ್ಲಿ ವಾಸವಿದ್ದನು. ಕಳೆದ ಎರಡು ದಿನಗಳಿಂದ ಚಿಕ್ಕಕೊಂಡಗುಳ ಗ್ರಾಮದ ಭಾವನ ಮನೆಗೆ ಬಂದಿದ್ದ ಮದನ್, ನಿನ್ನೆ ರಾತ್ರಿ ದಿಢೀರ್ ಎದೆನೋವಿನಿಂದ ಬಳಲಿದ್ದು, ಮನೆಯಲ್ಲಿಯೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ.

55 ವರ್ಷದ ಗೃಹಿಣಿ ಬಿ.ಎನ್.ವಿಮಲಾಕ್ಷಿಗೂ ಹೃದಯಾಘಾತ

ಹಾಸನ ನಗರದ ದಾಸರಕೊಪ್ಪಲಿನಲ್ಲಿ ವಾಸವಿದ್ದ ಬಿ.ಎನ್.ವಿಮಲಾಕ್ಷಿ (55) ಕೂಡ ಹೃದಯಾಘಾತಕ್ಕೆ ಬಲಿ ಆಗಿದ್ದಾರೆ. ವಿಮಲಾ ಅವರು ಮೂಲತಃ ಸಕಲೇಶಪುರದ ತೋಟದಗದ್ದೆ ಗ್ರಾಮದವರಾಗಿದ್ದು, ಅನೇಕ ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತ ಉಂಟಾಗಿ ನಿಧನರಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶುಗರ್ ಲೆವೆಲ್‌ ಹೆಚ್ಚಾಗಿರುವ ಕಾರಣಕ್ಕೆ ಹಾರ್ಟ್ ಅಟ್ಯಾಕ್ ಸಂಭವಿಸಿ ಸಾವಾಗಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯ ಜನರಲ್ಲಿ ಆತಂಕ

ಈಗಾಗಲೇ ಕಳೆದ ಒಂದೂವರೆ ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲಿಯೇ ಹಾರ್ಟ್ ಅಟ್ಯಾಕ್‌ಗೆ ಬಲಿ ಆಗುತ್ತಿರುವವರ ಸಂಖ್ಯೆ 35ಕ್ಕೆ ಹೆಚ್ಚಳವಾಗಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಭಾರೀ ಆತಂಕ ಎದುರಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದು, ವೈದ್ಯಕೀಯ ಸಮಿತಿಯೊಂದನ್ನು ವರದಿ ನೀಡುವುದಕ್ಕೆ ನಿಯೋಜನೆ ಮಾಡಿದೆ. ಸರ್ಕಾರದ ತಜ್ಞ ವೈದ್ಯರ ತಂಡದಿಂದ ಹಾರ್ಟ್ ಅಟ್ಯಾಕ್ ಆಗುತ್ತಿರುವ ಕುರಿತ ವರದಿ ಸಿದ್ಧಪಡಿಸಲು ಹೋದಾಗಲೇ ಹೃದಯಾಘಾತ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಇದೇ ರೀತಿಯಲ್ಲಿ ಸಾವುಗಳು ಮುಂದುವರೆದರೆ, ಮನೆಯವರನ್ನು ಕಳೆದುಕೊಂಡು ಜೀವನ ಮಾಡುವುದು ಹೇಗೆ ಎಂಬ ಆತಂಕ ಕುಟುಂಬಸ್ಥರಲ್ಲಿ ಹಾಗೂ ಜಿಲ್ಲೆಯ ಜನರಲ್ಲಿ ಮೂಡಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ