
ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ರಾವ್ ಯುವತಿಗೆ ವಂಚನೆ ಮತ್ತು ಮಗುವಾದ ಪ್ರಕರಣ ಸಂಬಂಧ ಈಗ ಬಿಜೆಪಿಯೇ ಸಂತ್ರಸ್ಥೆ ನೆರವಿಗೆ ಬಂದಿದೆ. ಯುವತಿಗೆ ಅನ್ಯಾಯ ನಡೆದ ಆರೋಪದ ವಿಚಾರದಲ್ಲಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಸುಮ್ಮನೆ ಕುಳಿತುಕೊಂಡಿಲ್ಲ. ಮದುವೆ ಮಾಡಿಕೊಡಬೇಕು ಎಂಬ ವಿಚಾರದಲ್ಲಿ ನಾವು ಹುಡುಗಿ ಪರವಾಗಿದ್ದೇವೆ. ಪ್ರಕರಣದ ವಿಚಾರದಲ್ಲಿ ನಮ್ಮ ಪೂರ್ಣ ಪ್ರಮಾಣದ ಯೋಚನೆಯು ಸಂತ್ರಸ್ತೆಯ ಪರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ, ಘಟನೆಯ ವಿಚಾರದಲ್ಲಿ ಬಿಜೆಪಿ ಹಾಗೂ ಪರಿವಾರ ಸಂಘಟನೆಯ ನಿಲುವು ಸ್ಪಷ್ಟವಿದೆ. ಹಿಂದೆ, ಇಂದು ಮತ್ತು ಮುಂದೆಯೂ ಪಕ್ಷವು ಸಂತ್ರಸ್ತೆಯ ಪರವಾಗಿ ಗಟ್ಟಿಯಾಗಿ ನಿಲ್ಲುತ್ತದೆ. ಈ ಬಗ್ಗೆ ಮುಖಂಡರ ಜತೆಗೆ ಪಕ್ಷದ ಕಡೆಯಿಂದ ಮಾತುಕತೆಗಳು ನಡೆದಿದ್ದು, ಕೊಟ್ಟಮಾತಿನಂತೆ ನಡೆದುಕೊಳ್ಳಲು ಸೂಚಿಸಲಾಗಿದೆ. ಇದಕ್ಕೆ ಅವರು ಒಪ್ಪಿಕೊಳ್ಳದಿದ್ದರೆ, ಅವರ ಮೇಲೆಯೂ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಶಾಸಕ ಸಂಜೀವ ಮಠಂದೂರು, ನಗರ ಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು.
ಹೆಣ್ಣುಮಗಳಿಗೆ ಅನ್ಯಾಯವಾದ ವಿಚಾರ ಜೂ.18ರಂದು ಗಮನಕ್ಕೆ ಬಂದಿದ್ದು, ಬಿಜೆಪಿ ಮುಖಂಡರದಲ್ಲಿ ಮಾತುಕತೆ ನಡೆಸಿದಾಗ ಮಗ ಒಪ್ಪುತ್ತಿಲ್ಲ ಎಂದಿದ್ದರು. ಜಾತಿ ವಿಚಾರ ಯಾವುದೂ ಇಲ್ಲ, ಹಿಂದೂ ಹೆಣ್ಣು ಮಗುವಿಗೆ ಸಮಸ್ಯೆಯಾಗವಾರದು ಎಂದಾಗ ಜೂ.23ರ ಬಳಿಕ ಅವರಿಬ್ಬರ ನೊಂದಾವಣಿ ವಿವಾಹ ಮಾಡುವುದಾಗಿ ಒಪ್ಪಿಕೊಂಡಿದ್ದರು ಎಂದು ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಹೇಳಿದ್ದಾರೆ.
ಪುತ್ತೂರು ಬಿಜೆಪಿ ನಾಯಕನ ಮಗನ ಲವ್ ದೋಖಾ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದರು. ಸಂತ್ರಸ್ತೆ ಹಾಗೂ ಅವಳ ಕುಟುಂಬಕ್ಕೆ ಧೈರ್ಯ ತುಂಬಿದ ಪ್ರತಿಭಾ ಕುಳಾಯಿ, ಬಳಿಕ ಸಂತ್ರಸ್ತೆಯ ತಾಯಿಗೆ ಆರ್ಥಿಕ ನೆರವನ್ನು ನೀಡಿದ್ದಾರೆ.
“ನಿಮ್ಮ ಎಲ್ಲ ಸಂಕಷ್ಟದಲ್ಲಿ ನಾನು ನಿಮ್ಮ ಜೊತೆಗೆ ಇದ್ದೇನೆ. ಯಾವುದೇ ಖರ್ಚು ಅಥವಾ ವೆಚ್ಚವಿದ್ದರೂ, ಅದನ್ನು ನಾನು ಭರಿಸುತ್ತೇನೆ,” ಎಂದು ಪ್ರತಿಭಾ ಕುಳಾಯಿ ತಿಳಿಸಿದ್ದಾರೆ. ಸಂತ್ರಸ್ತೆಯ ತಾಯಿಗೆ ಧೈರ್ಯ ತುಂಬಿಸುತ್ತಾ, “ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮ ಜೀವನವನ್ನು ಮುಚ್ಚಿಡುವಂತೆ ಮಾಸ್ಕ್ ಹಾಕಿಕೊಳ್ಳಬೇಡಿ. ನೀವು ಯಾವುದೇ ತಪ್ಪು ಮಾಡಿಲ್ಲ. ಇಂದಿನಿಂದ ಧೈರ್ಯದಿಂದ ಬಾಳಬೇಕು,” ಎಂದು ಹೇಳಿದ್ದಾರೆ.
ಸಂತ್ರಸ್ತೆಯ ತಾಯಿಯ ಮುಖದ ಮಾಸ್ಕ್ ಅನ್ನು ತೆಗೆಯಲು ಸಹ ಸಾಹಸ ವಹಿಸಿದ ಪ್ರತಿಭಾ ಕುಳಾಯಿ, “ಈ ರೀತಿಯ ಘಟನೆಗಳು ನಡೆದಾಗ ಮಹಿಳೆಯರು ಧೈರ್ಯ ಕಳೆದುಕೊಳ್ಳಬಾರದು. ಬದಲಿಗೆ, ತಪ್ಪು ಮಾಡಿದವರ ವಿರುದ್ಧ ಹೋರಾಡಬೇಕು. ಇದು ಇಬ್ಬರ ಭವಿಷ್ಯದ ಪ್ರಶ್ನೆ. ನಾನು ನಿಮ್ಮ ಪರವಾಗಿ ನಿಂತಿದ್ದೇನೆ. ಸಂತ್ರಸ್ತೆಯನ್ನು ಗಂಡನ ಮನೆಯೊಳಗೆ ಸೇರಿಸುವ ಜವಾಬ್ದಾರಿ ನನ್ನದು. ಇನ್ನು ಮುಂದೆ, ನಿಮ್ಮ ಕುಟುಂಬದ ಖರ್ಚು ವೆಚ್ಚವನ್ನು ನಾನು ನೋಡಿಕೊಳ್ಳುತ್ತೇನೆ,” ಎಂದು ಆಶ್ವಾಸನೆ ನೀಡಿದ್ದಾರೆ.
ಅಲ್ಲದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಆರೋಪಿಯು ಪ್ರೌಢಾವಸ್ಥೆಗೆ ತಲುಪಿಲ್ಲ ಎಂಬ ಹೇಳಿಕೆಗಳನ್ನು ಪ್ರತಿಪಕ್ಷಿಸುತ್ತಾ, “ಮಗು ಮಾಡಬಹುದಾದವರಿಗೆ ಇನ್ನೇನು ಪ್ರೌಢಾವಸ್ಥೆ ಬೇಕು?” ಎಂದು ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ.
ಸಂತ್ರಸ್ತೆಯ ತಾಯಿ ನಮಿತಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಯವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡಿ, ತಮ್ಮ ಪುತ್ರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಪ್ರತಿಭಾ ಕುಳಾಯಿ ಅವರ ದೂರವಾಣಿ ಮೂಲಕ ಸಂಪರ್ಕಗೊಂಡ ನಾಗಲಕ್ಷ್ಮಿ, ಸಂತ್ರಸ್ತೆಯ ತಾಯಿಗೆ ಧೈರ್ಯ ತುಂಬಿಸುತ್ತಾ, “ಕಾನೂನು ವ್ಯವಸ್ಥೆಯ ಮೂಲಕ ನಿಮ್ಮ ಮಗುವಿಗೆ ನ್ಯಾಯ ಕೊಡಿಸುತ್ತೇವೆ. ನಿಮ್ಮ ಪರವಾಗಿ ಮಹಿಳಾ ಆಯೋಗ ನಿಂತಿದೆ,” ಎಂದು ತಿಳಿಸಿದ್ದಾರೆ.