
ಹಾಸನ: ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಅನುಘಟ್ಟ ಹಾಗೂ ಮಲಸಾವರ ಗ್ರಾಪಂ ವ್ಯಾಪ್ತಿಯ ಕಿತ್ತಾವರ ಗುಡ್ಡದ ಒಡಲನ್ನು ಅಗೆದು ಮಣ್ಣನ್ನು ಸಮತಟ್ಟು ಮಾಡಿ ಕಾಫಿ ಗಿಡಗಳನ್ನು ನಾಟಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಿತ್ತಾವರ ಗುಡ್ಡದ ಮೇಲ್ಭಾಗದಲ್ಲಿ ಪುರಾತನ ವೀರಭದ್ರೇಶ್ವರ ದೇಗುಲದ ಸಮೀಪ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಲ್ಲಿ ದೊಡ್ಡಸಾಲಾವರ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ಬೆಟ್ಟವನ್ನು ಅಗೆದು 30ರಿಂದ 40 ಅಡಿಯಷ್ಟು ಲೋಡ್ ಗಟ್ಟಲೆ ಮಣ್ಣು ಸುರಿದು, ಸಮತಟ್ಟು ಮಾಡಿ ಕಾಫಿ ಗಿಡಗಳನ್ನು ನಾಟಿ ಮಾಡಿಸಿದ್ದಾರೆ. ಕೃಷಿ ಚಟುವಟಿಕೆಗಳಿಗಾಗಿ ಬೆಟ್ಟದ ನೈಸರ್ಗಿಕ ಸ್ವರೂಪವನ್ನೇ ಬದಲಾಯಿಸುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ಕಳವಳ ಮೂಡಿಸಿದ್ದು ಮನುಷ್ಯನ ಅತಿಯಾಸೆ ಪರಿಣಾಮ ಮೂಕ ಪ್ರಾಣಿ-ಪಕ್ಷಿಗಳ ಒಡಲಿಗೆ ಕೊಳ್ಳಿ ಇಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಿತ್ತಾವರ ಗುಡ್ಡವು ಈ ಭಾಗದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಗುಡ್ಡದ ತುತ್ತತುದಿಯಲ್ಲಿರುವ ಬಸವಣ್ಣ ದೇವರ ಗುಡಿಯು ಭಕ್ತರ ಧಾರ್ಮಿಕ ನಂಬಿಕೆಯ ಕೇಂದ್ರವಾಗಿದ್ದು, ಪ್ರತಿವರ್ಷ ಇಲ್ಲಿ ವಿಜೃಂಭಣೆಯ ಕಾರ್ತಿಕ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಇದರ ಸಮೀಪದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಪಾಳುಬಿದ್ದ ಸ್ಥಿತಿಯಲ್ಲಿರುವ ಪುರಾತನ ವೀರಭದ್ರೇಶ್ವರ ದೇಗುಲವೂ ಸಹ ಇದೆ. ಇಂತಹ ನೂರಾರು ವರ್ಷಗಳ ಇತಿಹಾಸವಿರುವ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಗುಡ್ಡ ಇದೀಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
ಬಹಳ ವರ್ಷಗಳಿಂದಲೂ ದೊಡ್ಡಸಾಲಾವರ ಗ್ರಾಮದ ಜನರು ಪಡಿತರ ಕೊಳ್ಳಲು, ಜಾನುವಾರುಗಳನ್ನು ಮೇಯಿಸಲು ಹಾಗೂ ಇನ್ನಿತರ ಕೆಲಸ ಕರ‍್ಯಗಳಿಗೆ ನಕಾಶೆ ರಸ್ತೆಯನ್ನು ಬಳಸಿ ಕಿತ್ತಾವರದ ಗುಡ್ಡವನ್ನು ದಾಟಿಕೊಂಡು ಅನುಘಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಮುಖ್ಯ ಮಾರ್ಗ ಇದಾಗಿತ್ತು. ಆದರೆ ಖಾಸಗಿ ವ್ಯಕ್ತಿ ಕಾಫಿ ಗಿಡಗಳನ್ನು ನಾಟಿ ಮಾಡಲು ನಕಾಶೆ ರಸ್ತೆ ಸಂಪೂರ್ಣವಾಗಿ ಬಂದ್ ಮಾಡಿರುವುದರಿಂದ ಜಾನುವಾರುಗಳನ್ನು ಮೇಯಿಸಲು ಸಹ ಅತ್ತ ಹೋಗದಿರುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಚಟುವಟಿಕೆಗಳು ದೀರ್ಘಕಾಲದಲ್ಲಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದ್ದು ಐತಿಹಾಸಿಕ ಸ್ಥಳಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂಬ ಅರಿವನ್ನು ಮೂಡಿಸಬೇಕಾಗಿದೆ.
ಗುಡ್ಡದ ಉಳಿವಿಗೆ ಒಗ್ಗಟ್ಟಿನ ಹೋರಾಟ ಅಗತ್ಯ, ಆದ್ದರಿಂದ ಎಲ್ಲರೂ ರಾಜಕೀಯ, ಧಾರ್ಮಿಕ, ಪಂಥಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಿತ್ತಾವರ ಗುಡ್ಡದ ನೈಸರ್ಗಿಕ ಸೌಂದರ್ಯ, ಜೀವವೈವಿಧ್ಯ ಹಾಗೂ ಐತಿಹಾಸಿಕ ಪರಂಪರೆಯನ್ನು ಉಳಿಸಲು ಗ್ರಾಮಸ್ಥರು, ಪರಿಸರ ಪ್ರೇಮಿಗಳು ಮತ್ತು ಒಗ್ಗಟ್ಟಿನಿಂದ ಹೋರಾಡಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.
ಜನರ ಧಾರ್ಮಿಕ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಕಿತ್ತಾವರ ಗುಡ್ಡವನ್ನು ಅಗೆದು ಕಾನೂನುಬಾಹಿರವಾಗಿ ಕಾಫಿ ನಾಟಿ ಮಾಡಲಾಗಿದೆ. ನಾಟಿ ಮಾಡಲಾದ ಈ ಜಾಗವನ್ನು ಸಂಪೂರ್ಣವಾಗಿ ತೆರವುಗೊಳಿಸುವುದರ ಮೂಲಕ ಪರಿಸರ ಹಾಗೂ ಜೀವ ವೈವಿಧ್ಯತೆಯನ್ನು ಕಾಪಾಡಲು ಅಧಿಕಾರಿಗಳು ಗಮನಹರಿಸಬೇಕು ಎಂದು ಜೆಡಿಎಸ್ ಮುಖಂಡ ಡಿ.ಎನ್. ಪ್ರವೀಣ್ ಕುಮಾರ್ ಹೇಳಿದ್ದಾರೆ.