
ಬೆಂಗಳೂರು: ನಗರದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುವ ಕೆ.ಆರ್.ಪುರ ಟಿನ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ವಾಹನಗಳ ಸುಗಮ ಸಂಚಾರದ ಯೋಜನೆ ಜೊತೆಗೆ ಪಾದಚಾರಿ ಸ್ನೇಹಿ ಜಂಕ್ಷನ್ ಆಗಿ ಅಭಿವೃದ್ಧಿಪಡಿಸಲು ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶನಿವಾರ ಕೆ.ಆರ್.ಪುರ ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ 2ನೇ ಹಂತದ ವಾರ್ಡ್ ಒನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಜಂಕ್ಷನ್‌ನಲ್ಲಿ ಮೆಟ್ರೋ ಮಾರ್ಗದ ಕಾಮಗಾರಿ, ಕೆ.ಆರ್.ಪುರದಿಂದ ಐಟಿಪಿಎಲ್, ವೈಟ್‌ಫೀಲ್ಡ್ ಹಾಗೂ ಮಾರತಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಮತ್ತು ಹೊರವಲಯದಿಂದ ನಗರಕ್ಕೆ ಬರುವ ವಾಹನಗಳು ಸೇರುತ್ತವೆ. ಹೀಗಾಗಿ, ಲಕ್ಷಾಂತರ ಜನ ಓಡಾಡುವ ಈ ಜಂಕ್ಷನ್‌ನಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂದರು.
ಜಂಕ್ಷನ್‌ನ ಸಮಗ್ರ ಅಭಿವೃದ್ಧಿಗೆ ಬಸ್ ಪಥ, ಬಸ್ ತಂಗುದಾಣ, ದೂರ ಪ್ರಯಾಣದ ಬಸ್‌ಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಮೆಟ್ರೋ ರೈಲು ನಿಲ್ದಾಣದಿಂದ ಬಸ್ ತಂಗುದಾಣಕ್ಕೆ ಓಡಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು. ಆಟೋ, ಟ್ಯಾಕ್ಸಿ ಹಾಗೂ ಇತರ ವಾಹನಗಳಲ್ಲಿ ಬರುವವರು ಸಾರ್ವಜನಿಕ ಸಾರಿಗೆಯನ್ನು ಸುಲಭವಾಗಿ ಬಳಸಲು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಸಣ್ಣ ಪುಟ್ಟ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಲು ವಾರ್ಡ್ ಒನ್ ಅಭಿಯಾನದ ಅಡಿ ಮೊದಲ ಹಂತದಲ್ಲಿ 43 ವಾರ್ಡ್‌ಗಳಲ್ಲಿ ಶೇ. 90ರಷ್ಟು ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ ಮತ್ತೆ 40 ವಾರ್ಡ್‌ಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಅವಸರದಲ್ಲಿ ಅರ್ಧಂಬರ್ಧ ಕೆಲಸ ಮಾಡದೇ ಸಮರ್ಪಕವಾಗಿ ಕೆಲಸ ಮಾಡಬೇಕು. ಅಗತ್ಯವಿದ್ದಲ್ಲಿ ಡಿಸೆಂಬರ್‌ನಲ್ಲೂ ಅಭಿಯಾನ ಮುಂದುವರಿಸಲಾಗುವುದು. ಕಾಮಗಾರಿಗಳ ಗುಣಮಟ್ಟ ಹಾಗೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.