ಹಾಸನಾಂಬ ದೇವಾಲಯದ ಆವರಣದಲ್ಲಿರುವ ದರ್ಬಾರ್ ಗಣಪತಿ ಗುಡಿಯ ಎದುರೇ ಸಾರ್ವಜನಿಕ ಶೌಚಾಲಯವಿದ್ದು, ಸರಕಾರದಿಂದ ನಿರ್ಮಾಣ ಮಾಡಿ ಈಗ ಬೀಳಿಸಿದರೇ ಕೆಟ್ಟ ಸಂದೇಶ ಹೋದಂತೆ ಆಗುತ್ತದೆ. ಅರ್ಚಕರು ಹೇಳುವಂತೆ ದೇವಸ್ಥಾನದ ಒಳಗೆ ಶೌಚಾಲಯಕ್ಕೆ ವಿರೋಧವಿದೆ. ಈ ಬಗ್ಗೆ ಒಂದು ತೀರ್ಮಾನಕ್ಕೆ ಬರಲಾಗುವುದು. ಈ ವರ್ಷ ದೇವಸ್ಥಾನಕ್ಕೆ ಬಣ್ಣ ಹೊಡೆಸುವುದಿಲ್ಲ. ಈ ಬಾರಿ ರುಚಿಕರವಾದ ಪ್ರಸಾದವನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಲಾಗುವುದು: ಜಿಲ್ಲಾಧಿಕಾರಿ ಸಿ. ಸತ್ಯಭಾಮ
ಹಾಸನ(ಆ.14): ಪ್ರತಿವರ್ಷಕ್ಕಿಂತ ಈ ವರ್ಷ ಹಾಸನಾಂಬೆ ಜಾತ್ರೋತ್ಸವವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಹಾಸನಾಂಬ ಜಾತ್ರೋತ್ಸವದ ಅಂಗವಾಗಿ ದೇವಾಲಯದ ಬಾಗಿಲನ್ನು ಅಕ್ಟೋಬರ್ ೨೪ರಿಂದ ತೆಗೆಯಲಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಇನ್ನಷ್ಟು ಉತ್ತಮವಾಗಿ ನಡೆಸಲು ಹಾಗೂ ಭಕ್ತಾದಿಗಳ ದರ್ಶನಕ್ಕೆ ಅಡಚಣೆ ಆಗದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಂಸದರಾದ ಶ್ರೇಯಸ್ ಎಂ. ಪಟೇಲ್ ಸಭೆಯಲ್ಲಿ ತಿಳಿಸಿದರು.
ಮೆರುಗು ತರಬೇಕು:
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಸದರು ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ನಡೆಯಬೇಕಿದೆ. ದೇವರ ದರ್ಶನಕ್ಕೆ ಭಕ್ತರಿಗೆ ಅಗತ್ಯ ಇರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಸಾರ್ವಜನಿಕರಿಗೆ ಸುಗಮವಾಗಿ ದೇವರ ದರ್ಶನ ಸಿಗಲು ಅಗತ್ಯ ಸಿದ್ಧತೆ ಆಗಬೇಕಿದೆ. ದಸರಾ ಮಾದರಿಯಲ್ಲಿ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ, ಬ್ಯಾರಿಕೇಡ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು, ಸೇರಿದಂತೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಕೊರತೆಯಾಗಬಾರದು, ಹಾಸನಾಂಬ ಉತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಉತ್ಸವಕ್ಕೆ ಮೆರುಗು ತರಬೇಕು ಎಂದರು.
ಶಕ್ತಿ ದೇವತೆ ಹಾಸನಾಂಬೆಗೆ ಭಕ್ತರ ಭರಪೂರ ಕಾಣಿಕೆ: 14 ದಿನದಲ್ಲಿ ಹರಿದುಬಂದ ಆದಾಯ ಎಷ್ಟು ?
೯ ದಿನ ದರ್ಶನ:
ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ೧೧ ದಿನ ಹಾಸನಾಂಬ ಬಾಗಿಲು ತೆಗೆಯಲಿದೆ, ಆದರೆ ಭಕ್ತಾದಿಗಳಿಗೆ ಮೊದಲ ದಿನ ಮತ್ತು ಕೊನೆಯ ದಿವಸದಂದು ದರ್ಶನಕ್ಕೆ ಅವಕಾಶ ಇರುವುದಿಲ್ಲ. ೯ ದಿನಗಳ ಕಾಲ ಸಾರ್ವಜನಿಕರಿಗೆ ದೇವಿ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗುವುದು. ಕಳೆದ ಬಾರಿ ಏನೇನು ನ್ಯೂನ್ಯತೆಗಳಿವೆ ಎಲ್ಲಾ ಈ ವರ್ಷ ಸರಿಪಡಿಸಿ ಇನ್ನಷ್ಟು ವಿಜೃಂಭಣೆಯಿಂದ ಜಾತ್ರೆ ಮಾಡಲು ಸಭೆಯಲ್ಲಿ ಸಂಸದರು, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಚರ್ಚಿಸಲಾಗಿದೆ. ಈ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಬಂದು ಚಾಲನೆ ಕೊಡಲಿದ್ದಾರೆ ಎಂದರು.
ಹಾಸನಾಂಬ ಜಾತ್ರಾ ಮಹೋತ್ಸವದ ವೇಳೆ ತಮ್ಮ ಮನೆ ಮತ್ತು ಸುತ್ತಮುತ್ತಲ ಜಾಗವನ್ನು ಸ್ವಚ್ಛತೆಯಿಂದ ಇಟ್ಟುಕೊಂಡು, ಸಾಧ್ಯವಾದರೆ ದೀಪಾಲಂಕಾರವನ್ನು ಮಾಡುವಂತೆ ಮನವಿ ಮಾಡಿದರು. ಇನ್ನು ೧ ಸಾವಿರ ಟಿಕೆಟ್ ಪಡೆದವರ ಜೊತೆಗೆ ೩೦೦ ರು. ಟಿಕೆಟ್ ಪಡೆದವರಿಗೆ ಒಂದು ಲಾಡು ವಿತರಣೆ ಮಾಡಲು ಸಭೆಯಲ್ಲಿ ಶಾಸಕರು ಸೂಚಿಸಿದರು.
ಪ್ರಸಾದ ಉಚಿತ:
ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಹಾಸನಾಂಬ ದೇವಾಲಯದ ಆವರಣದಲ್ಲಿರುವ ದರ್ಬಾರ್ ಗಣಪತಿ ಗುಡಿಯ ಎದುರೇ ಸಾರ್ವಜನಿಕ ಶೌಚಾಲಯವಿದ್ದು, ಸರಕಾರದಿಂದ ನಿರ್ಮಾಣ ಮಾಡಿ ಈಗ ಬೀಳಿಸಿದರೇ ಕೆಟ್ಟ ಸಂದೇಶ ಹೋದಂತೆ ಆಗುತ್ತದೆ. ಅರ್ಚಕರು ಹೇಳುವಂತೆ ದೇವಸ್ಥಾನದ ಒಳಗೆ ಶೌಚಾಲಯಕ್ಕೆ ವಿರೋಧವಿದೆ. ಈ ಬಗ್ಗೆ ಒಂದು ತೀರ್ಮಾನಕ್ಕೆ ಬರಲಾಗುವುದು. ಈ ವರ್ಷ ದೇವಸ್ಥಾನಕ್ಕೆ ಬಣ್ಣ ಹೊಡೆಸುವುದಿಲ್ಲ. ಈ ಬಾರಿ ರುಚಿಕರವಾದ ಪ್ರಸಾದವನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.
ಕಳೆದ ವರ್ಷ ಹಾಸನಾಂಬ ದೇವಾಲಯದಲ್ಲಿ ನೂಕು ನುಗ್ಗಲು ವೇಳೆ ಜಿಲ್ಲಾ ನ್ಯಾಯಾಧೀಶರಾದ ಇನಾವಳಿ ಮತ್ತು ಅವರ ಕುಟುಂಬ ಕಣ್ಣೀರು ಹಾಕಿದ್ದಾರೆ. ಈ ವೇಳೆ ನಾನು ಸಮಾಧಾನ ಮಾಡಿದ್ದೇನೆ ಎಂದರು. ಪ್ರತಿವರ್ಷ ಎನ್.ಸಿ.ಸಿ. ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸೇರಿದಂತೆ ಸಂಘ ಸಂಸ್ಥೆಯ ಸೇವೆಯನ್ನು ಮರೆಯುವ ಹಾಗಿಲ್ಲ. ಶಾಸಕರು ಮತ್ತು ಸಂಸದರು ಸೂಚಿಸಿರುವಂತೆ ೩೦೦ ರು. ಟಿಕೆಟ್ ಪಡೆದವರಿಗೂ ಒಂದೊಂದು ಲಾಡು ನೀಡಲು ಜಿಲ್ಲಾ ಮಂತ್ರಿಗಳಿಗೆ ತಿಳಿಸಲಾಗುವುದು. ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಈ ಹಿಂದೆ ರಾಮಾಯಣ ಮತ್ತು ಮಹಾಭಾರತ ಕಥೆಯನ್ನು ಪ್ರೊಜೆಕ್ಟರ್ ಮೂಲಕ ಹಾಕಲಾಗಿತ್ತು. ಇದನ್ನು ಯಾರು ಕೂಡ ವೀಕ್ಷಣೆ ಮಾಡದ ಕಾರಣ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಾಸನಾಂಬೆ ಪವಾಡದಲ್ಲಷ್ಟೇ ಅಲ್ಲ, ಆದಾಯದಲ್ಲೂ ಶ್ರೀಮಂತೆ: ಕೇವಲ 12 ದಿನದಲ್ಲಿ 8.72 ಕೋಟಿ ಆದಾಯ ಗಳಿಕೆ
ಜಿಲ್ಲಾ ಉಪವಿಭಾಗಾಧಿಕಾರಿ ಮಾರುತಿ ಅವರು ಹಾಸನಾಂಬೆ ದೇವಸ್ಥಾನದಲ್ಲಿ ಕಳೆದ ಬಾರಿ ನಡೆದ ಜಾತ್ರೆಯ ಬಗ್ಗೆ ಒಂದೊಂದಾಗಿ ಸಭೆಯಲ್ಲಿ ಮಾಹಿತಿ ನೀಡುವ ಮೂಲಕ ಚರ್ಚೆಗೆ ತಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ತಹಸೀಲ್ದಾರ್ ಶ್ವೇತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇತಿಹಾಸ ಪ್ರಸಿದ್ಧ ಅಧಿದೇವತೆ ಹಾಸನಾಂಬ ಉತ್ಸವ ಹಾಸನ ಜಿಲ್ಲೆಯ ಹೆಮ್ಮೆಯಾಗಿದೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದು, ಭಕ್ತರ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ನಗರದಾದ್ಯಂತ ರಸ್ತೆ ಗುಂಡಿ ಮುಚ್ಚುವ ಕೆಲಸಗಳಾಗಬೇಕು. ಅಲ್ಲದೆ ಉತ್ಸವಕ್ಕೆ ಮೆರುಗು ತರುವ ಎಲ್ಲಾ ರೀತಿಯ ಸಾಂಸ್ಕೃತಿಕ, ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದ್ದಾರೆ.