
ನಗರದಲ್ಲಿ ಕಡಿಮೆ ವೆಚ್ಚದ ಪ್ರಯಾಣ ಜನಪ್ರಿಯವಾಗಿರುವ ಬೈಕ್ ಟ್ಯಾಕ್ಸಿಗಳ ನಡುವೆ ರಾಪಿಡೋ (Rapido) ಹೊಸ ಆಯ್ಕೆಯೊಂದನ್ನು ಪರಿಚಯಿಸಿದೆ. ಬೆಂಗಳೂರಿನಲ್ಲಿ ‘ಬೈಕ್ ಲಿಫ್ಟ್’ (Bike Lift) ಎಂಬ ವೈಶಿಷ್ಟ್ಯವನ್ನು ಪೈಲಟ್ ಆಧಾರದಲ್ಲಿ ಆರಂಭಿಸಿದ್ದು, ತಮ್ಮ ಬೈಕ್ನಲ್ಲಿ ಪ್ರಯಾಣಿಸುವವರು ಮಾರ್ಗಮಧ್ಯೆ ಪ್ರಯಾಣಿಕರನ್ನು ಕರೆದೊಯ್ಯುವ ಮೂಲಕ ಇಂಧನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೆ, ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ ಕಾನೂನುಬದ್ಧ ಕಾರ್ಯಾಚರಣೆ ಕುರಿತು ವಿವಾದ ಮುಂದುವರಿದಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಏನಿದು ರಾಪಿಡೋ ‘ಬೈಕ್ ಲಿಫ್ಟ್’?
ರಾಪಿಡೋ ಆ್ಯಪ್ನಲ್ಲಿ ‘Own a bike? Save fuel with bike lift’ ಎಂಬ ಸಂದೇಶದ ಮೂಲಕ ಈ ಹೊಸ ಆಯ್ಕೆಯನ್ನು ಪ್ರಚಾರ ಮಾಡಲಾಗುತ್ತಿದೆ. ಅಂದರೆ, ಸ್ವಂತ ಬೈಕ್ ಹೊಂದಿರುವವರು ತಾವು ಹೋಗುವ ಮಾರ್ಗದಲ್ಲೇ ಪ್ರಯಾಣಿಕರನ್ನು ಕರೆದೊಯ್ದು ಇಂಧನ ವೆಚ್ಚವನ್ನು ಸರಿದೂಗಿಸಿಕೊಳ್ಳಬಹುದು. ಆ್ಯಪ್ನಲ್ಲಿರುವ ‘Know more’ ಆಯ್ಕೆಯನ್ನು ಒತ್ತಿದರೆ, ಈ ವೈಶಿಷ್ಟ್ಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುವ ಯೂಟ್ಯೂಬ್ ಟ್ಯುಟೋರಿಯಲ್ ಕಾಣಿಸಿಕೊಳ್ಳುತ್ತದೆ. ಮೂಲಗಳ ಪ್ರಕಾರ, ಬೆಂಗಳೂರಿನ ಜೊತೆಗೆ ಇತರ ಕೆಲವು ನಗರಗಳಲ್ಲಿಯೂ ಈ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
ಬೈಕ್ ಲಿಫ್ಟ್ ಹೇಗೆ ಕೆಲಸ ಮಾಡುತ್ತದೆ?
ರಾಪಿಡೋ ವಿವರಿಸಿರುವ ಪ್ರಕಾರ, ಈ ಆಯ್ಕೆಯನ್ನು ಬಳಸುವುದು ಸರಳವಾಗಿದೆ.
ಪ್ರಾರಂಭದ ಸ್ಥಳ ಮತ್ತು ಗಮ್ಯಸ್ಥಾನ ನಮೂದಿಸಿ: ಬೈಕ್ನಲ್ಲಿ ಪ್ರಯಾಣಿಸುವಾಗ ಆ್ಯಪ್ನಲ್ಲಿ ನಿಮ್ಮ ಪ್ರಯಾಣದ ಆರಂಭದ ಸ್ಥಳ ಮತ್ತು ತಲುಪಬೇಕಾದ ಸ್ಥಳವನ್ನು ನಮೂದಿಸಬೇಕು.
ಮಾರ್ಗದಲ್ಲಿನ ರೈಡ್ಗಳನ್ನು ನೋಡಿ: ನೀವು ಹೋಗುವ ಮಾರ್ಗದಲ್ಲಿರುವ ಪ್ರಯಾಣಿಕರ ಬೇಡಿಕೆಗಳನ್ನು ಆ್ಯಪ್ ತೋರಿಸುತ್ತದೆ.
ಪ್ರಯಾಣಿಕರನ್ನು ಹತ್ತಿಸಿಕೊಳ್ಳಿ: ನಿಮ್ಮ ಮಾರ್ಗಕ್ಕೆ ಹೊಂದಿಕೆಯಾಗುವ ಸ್ಥಳಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು, ಇಳಿಸಬಹುದು. ಇದರಿಂದ ಅನಗತ್ಯವಾಗಿ ಮಾರ್ಗ ಬದಲಿಸುವ ಅಗತ್ಯ ಕಡಿಮೆಯಾಗುತ್ತದೆ.
ಪ್ರತಿ ಕಿ.ಮೀಗೆ ₹5 ಗಳಿಕೆ: ರಾಪಿಡೋ ಟ್ಯುಟೋರಿಯಲ್ ಪ್ರಕಾರ, ಪ್ರತಿ ಕಿಲೋಮೀಟರ್ಗೆ ₹5 ಗಳಿಸಬಹುದು. ಈ ಆಯ್ಕೆಯಲ್ಲಿ ಕಮಿಷನ್ ಇರುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಈ ಮೂಲಕ ಬೈಕ್ ಸವಾರರು ತಮ್ಮ ದೈನಂದಿನ ಪ್ರಯಾಣದ ವೇಳೆ ಇಂಧನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ಈ ವೈಶಿಷ್ಟ್ಯದ ಉದ್ದೇಶವಾಗಿದೆ.
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ ಕಾನೂನು ಸ್ಥಿತಿ ಏನು?
ರಾಪಿಡೋ ಹೊಸ ಆಯ್ಕೆಯನ್ನು ಪರಿಚಯಿಸಿರುವುದು ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ ಕಾನೂನುಬದ್ಧ ಕಾರ್ಯಾಚರಣೆ ಕುರಿತು ನ್ಯಾಯಾಂಗ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲೇ ಗಮನ ಸೆಳೆದಿದೆ. 2026ರ ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್, ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಪರಿಣಾಮಕಾರಿಯಾಗಿ ತಡೆ ಉಂಟುಮಾಡಿದ್ದ ಹಿಂದಿನ ಆದೇಶವನ್ನು ರದ್ದುಗೊಳಿಸಿತ್ತು. ಇದರಿಂದ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನ ಅಡಿಯಲ್ಲಿ ಅವುಗಳ ಕಾರ್ಯಾಚರಣೆಗೆ ಅವಕಾಶ ದೊರೆತಿತ್ತು. ಆದರೆ, ರಾಜ್ಯ ಸರ್ಕಾರ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಬೈಕ್ ಟ್ಯಾಕ್ಸಿಗಳು ಕಡಿಮೆ ವೆಚ್ಚದ ಪ್ರಯಾಣ ಮತ್ತು ಕೊನೆಯ ಹಂತದ ಸಂಪರ್ಕಕ್ಕೆ ಅನುಕೂಲವಾಗಿರುವುದರಿಂದ ನಗರ ಪ್ರಯಾಣಿಕರಲ್ಲಿ ಜನಪ್ರಿಯವಾಗಿವೆ. ಇದೇ ವೇಳೆ, ಆಟೋ ಮತ್ತು ಕ್ಯಾಬ್ ಚಾಲಕರಿಂದ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ 2026ರ ಆಗಸ್ಟ್ನಲ್ಲಿ ಬೈಕ್ ಟ್ಯಾಕ್ಸಿಗಳ ವಿರುದ್ಧ ಮತ್ತೊಂದು ವಿಶೇಷ ಕಾರ್ಯಾಚರಣೆ ನಡೆಸಿತ್ತು. ಬಳಿಕ ಈ ವಿಶೇಷ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಬೈಕ್ ಟ್ಯಾಕ್ಸಿ ಚಾಲಕರ ಸಂಘ ಹೇಳಿದ್ದೇನು?
ನಮ್ಮ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ನ ಅಧ್ಯಕ್ಷ ಮೊಹಮ್ಮದ್ ಸಲೀಂ ಅವರ ಪ್ರಕಾರ, ರಾಪಿಡೋದ ಹೊಸ ಆಯ್ಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಿಲ್ಲ. ಆದರೆ, ಬೈಕ್ ಟ್ಯಾಕ್ಸಿಗಳ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಇಂತಹ ಪ್ರಚಾರ ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬೈಕ್ ಟ್ಯಾಕ್ಸಿಗಳು ಕಾನೂನುಬಾಹಿರ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ ಎಂದು ಹೇಳಿದ ಅವರು, ಈ ವಿಚಾರವಾಗಿ ಚರ್ಚಿಸಲು ಸುಮಾರು 200 ಬೈಕ್ ಟ್ಯಾಕ್ಸಿ ಚಾಲಕರು ವಾರದ ಕೊನೆಯಲ್ಲಿ ಸಭೆ ಸೇರಲಿದ್ದಾರೆ ಎಂದಿದ್ದಾರೆ.