ಡಿಪೋ ಮ್ಯಾನೇಜರ್ ಕಿರುಕುಳ, ಕೆಎಸ್‌ಆರ್‌ಟಿಸಿ ಚಾಲಕ ಬಸ್‌ನಲ್ಲೇ ನೇಣು ಬಿಗಿದು ಸಾವಿಗೆ ಶರಣು!

Published : Aug 28, 2025, 12:24 PM IST
 KSRTC Driver death in Bidar

ಸಾರಾಂಶ

ಬೀದರ್‌ನಲ್ಲಿ ಸಾರಿಗೆ ಬಸ್ ಚಾಲಕ ರಾಜಪ್ಪ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಡಿಪೋ ಮ್ಯಾನೇಜರ್‌ನ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಜೆ ನಿರಾಕರಣೆ, ನಿರಂತರ ಒತ್ತಡ ಮತ್ತು ಗಾಯಗೊಂಡಿದ್ದರೂ ಕೆಲಸಕ್ಕೆ ಒತ್ತಾಯಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಬೀದರ್: ಜಿಲ್ಲೆಯ ಬೀದರ್ ಡಿಪೋ ನಂ.1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾರಿಗೆ ಬಸ್ ಚಾಲಕನೊಬ್ಬ ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತು ಆತ್ಮ8ಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಆಣದೂರು ಗ್ರಾಮದ ನಿವಾಸಿ ರಾಜಪ್ಪ (59) ಬಳ್ಳಾರಿ–ಬೀದರ್ ಮಾರ್ಗದ ಸ್ಲಿಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ದುಃಖಕರ ಸಂಗತಿಯಾಗಿಯೇ, ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಅದೇ ಬಸ್‌ನಲ್ಲಿಯೇ ನೇಣು ಬಿಗಿದು ಆತ್ಮ8ಹತ್ಯೆ ಮಾಡಿಕೊಂಡಿದ್ದಾರೆ.

ರಾಜಪ್ಪ ಆರು ಹೆಣ್ಣುಮಕ್ಕಳ ತಂದೆಯಾಗಿದ್ದು, ಅವರ ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ. ಕುಟುಂಬಕ್ಕೆ ಸಂಪೂರ್ಣ ಆಧಾರವಾಗಿದ್ದ ರಾಜಪ್ಪ ಅಕಾಲಿಕವಾಗಿ ಮೃತಪಟ್ಟ ಪರಿಣಾಮ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ಶೀಘ್ರದಲ್ಲೇ ನಿವೃತ್ತಿ ಪಡೆಯಬೇಕಾಗಿದ್ದ ಅವರ ಜೀವನ ಅಂತ್ಯ ಕಂಡಿರುವುದು ಹೃದಯ ಕಲುಕುವ ಸಂಗತಿ.

ಮ್ಯಾನೇಜರ್ ಕಿರುಕುಳ

ಬೀದರ್ ಡಿಪೋ ಮ್ಯಾನೇಜರ್ ವಿಠ್ಠಲ್ ಬೋವಿ ನಿರಂತರ ಕಿರುಕುಳ ನೀಡಿದ್ದೇ ಈ ಆತ್ಮ8ಹತ್ಯೆಗೆ ಕಾರಣವಾಗಿದೆ ಎಂದು ಮೃತರ ಕುಟುಂಬಸ್ಥರ ಗಂಭೀರ ಆರೋಪ ರಾಜಪ್ಪ ಅವರು ಆರೋಗ್ಯ ಸಮಸ್ಯೆ, ವಯಸ್ಸಿನ ಅಡಚಣೆಗಳನ್ನು ಹೇಳಿಕೊಂಡರೂ ಅಧಿಕಾರಿಗಳು ಯಾವುದೇ ರೀತಿಯ ಸಹಾನುಭೂತಿ ತೋರಲಿಲ್ಲವಂತೆ, “ನಮ್ಮ ತಂದೆ ನಿರಂತರ ಒತ್ತಡ ಮತ್ತು ಕಿರುಕುಳಕ್ಕೆ ತುತ್ತಾಗಿದ್ದರು. ಅವರಿಗೆ ನ್ಯಾಯ ಸಿಗಬೇಕು. ಮ್ಯಾನೇಜರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಕುಟುಂಬದವರು ಆಗ್ರಹಿಸಿದ್ದಾರೆ.

ರಜೆ ನಿರಾಕರಣೆ, ನಿರಂತರ ಒತ್ತಡ

ಮೃತರ ಸಂಬಂಧಿಕರು ಹಾಗೂ ಸಹೋದ್ಯೋಗಿಗಳ ಪ್ರಕಾರ, ರಾಜಪ್ಪ ಅವರಿಗೆ ಬೇಕಾದಾಗ ರಜೆ ನೀಡಲಾಗುತ್ತಿರಲಿಲ್ಲ. ಆರೋಗ್ಯ ಸಮಸ್ಯೆಯಿಂದಾಗಿ ವಿಶ್ರಾಂತಿ ಅಗತ್ಯವಿದ್ದರೂ, ಅಧಿಕಾರಿಗಳು ಅವರನ್ನು ಪ್ರತಿದಿನವೂ ಬಸ್ಸು ಓಡಿಸಲು ಒತ್ತಾಯಿಸುತ್ತಿದ್ದರು. ಬಳ್ಳಾರಿ ವರೆಗಿನ ದೂರದ ಮಾರ್ಗದಲ್ಲಿ ಸಾಮಾನ್ಯವಾಗಿ ಇಬ್ಬರು ಚಾಲಕರ ಅವಶ್ಯಕತೆ ಇದ್ದರೂ, ರಾಜಪ್ಪ ಒಬ್ಬರೇ ನಿರಂತರವಾಗಿ ಡ್ರೈವಿಂಗ್ ಮಾಡುತ್ತಿದ್ದರು. ಇದು ಅವರ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಎಂದು ಸಹೋದ್ಯೋಗಿಗಳು ತಿಳಿಸಿದರು.

ಗಾಯಗೊಂಡಿದ್ದರೂ ಕೆಲಸಕ್ಕೆ ಒತ್ತಡ

ಇತ್ತೀಚೆಗೆ ರಾಜಪ್ಪ ಅವರಿಗೆ ಅಪಘಾತದಲ್ಲಿ ಕಾಲಿಗೆ ಗಾಯವಾಗಿತ್ತು. ಅವರು "ಡ್ರೈವಿಂಗ್ ಮಾಡಲು ಆಗುತ್ತಿಲ್ಲ, ಬದಲಿಗೆ ಆಫೀಸ್ ಕೆಲಸ ಕೊಡಿ" ಎಂದು ವಿನಂತಿಸಿಕೊಂಡರೂ, ಮ್ಯಾನೇಜರ್‌ಗಳು ಗಮನ ನೀಡಲಿಲ್ಲ ಎಂದು ತಿಳಿದುಬಂದಿದೆ. ಕಾಲಿಗೆ ಗಾಯವಾಗಿದ್ದರೂ ಕೆಲಸಕ್ಕೆ ಬರುವಂತೆ ಒತ್ತಡ ಹಾಕಿದ್ದರಿಂದ ರಾಜಪ್ಪ ಮಾನಸಿಕವಾಗಿ ಹತಾಶರಾಗಿದ್ದರು.

ಈ ಘಟನೆಯ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಮತ್ತು ಸಂಬಂಧಿಕರು ಡಿಪೋ ಮ್ಯಾನೇಜರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೂ, ಪೊಲೀಸರಿಗೊ ಆಗ್ರಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಿರುಕುಳದಿಂದ ಒಬ್ಬ ನಿಷ್ಠಾವಂತ ಚಾಲಕ ತನ್ನ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂಬ ಆಕ್ರೋಶ ಸಾರಿಗೆ ನೌಕರರ ನಡುವೆ ಹೆಚ್ಚುತ್ತಿದೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್